ಮುಖಪುಟ /ಸುದ್ದಿ ಸಮಾಚಾರ   
 

 ಯುವ ನಟ ನವೀನ್ ಮಯೂರ್ ವಿಧಿವಶ

ಬೆಂಗಳೂರು, ಅ.೪- Naveen Mayurಕನ್ನಡ ಚಿತ್ರರಂಗದ ಯುವ ನಟ ನವೀನ್ ಮಯೂರ್ ಇಂದು ಬೆಳಗಿನ ಜಾವ ಬೆಂಗಳೂರಿನ ತಮ್ಮ ಸ್ವಗೃದಲ್ಲಿ ನಿಧನಹೊಂದಿದ್ದಾರೆ. ಬಿಬಿಎಂ ಪದವೀಧರರಾಗಿದ್ದ ಅವರಿಗೆ ೩೨ ವರ್ಷ ವಯಸ್ಸಾಗಿತ್ತು.

ಕಳೆದ ಕೆಲವು ದಿನಗಳಿಂದ ಜಾಂಡೀಸ್ (ಹರಿಶಿನ ಕಾಮಾಲೆ) ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾಣದೆ ಕೊನೆಯುಸಿರೆಳೆದರು. ನಿನ್ನೆ ರಾತ್ರಿ ಮಲಗಿದವರು ಇಂದು ಬೆಳಗ್ಗೆ ಏಳಲೇ ಇಲ್ಲ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಸ್ಪರ್ಶ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನವೀನ್ ಮಯೂರ್, ನಿನಗೋಸ್ಕರ, ಉಪ್ಪಿದಾದಾ ಎಂ.ಬಿ.ಬಿ.ಎಸ್, ನೀಲಾ, ರಣಚಂಡಿ, ಲವಲವಿಕೆ, ನನ್ನ ಹೆಂಡ್ತಿ ಕೊಲೆ ಮೊದಲಾದ ಹಲವು ಚಿತ್ರಗಳಲ್ಲಿ ನಟಿಸಿದ್ದರು.

ಸುಂದರ ಮುಖಭಾವ ಹಾಗೂ ಆಕರ್ಷಕ ಮೈಕಟ್ಟಿನ ನವೀನ್ ಮಯೂರ್ ಕನ್ನಡದ ಕಿಚ್ಚ ಸುದೀಪ್ ಅವರೊಂದಿಗೆ ಸ್ಪರ್ಶ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರೂ, ಅವರಿಗೆ ಸೂಕ್ತ ಅವಕಾಶಗಳು ದೊರಕಿರಲಿಲ್ಲ.

ಬಾಲಿವುಡ್ ಚಾಕೊಲೇಟ್ ಹೀರೋ ಎಂದು ಎಲ್ಲರೂ ಕರೆಯುತ್ತಿದ್ದರಾದರೂ ಅವರಿಗೆ ಹೆಚ್ಚಿನ ಚಿತ್ರಗಳಲ್ಲಿ ನಟಿಸುವ ಅವಕಾಶ ದೊರಕಲಿಲ್ಲ. ತಮ್ಮ ಪ್ರತಿಭೆಗೆ ಸೂಕ್ತ ಅವಕಾಶ ಸಿಗುತ್ತಿಲ್ಲ ಎಂದು ಮಯೂರ್ ತಮ್ಮ ಆತ್ಮೀಯರೊಂದಿಗೆ ಸದಾ ಹೇಳಿಕೊಂಡು ಕೊರಗುತ್ತಿದ್ದರು.

ಸಂತಾಪ

ನವೀನ್ ಮಯೂರ್ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ನಟ ಸುದೀಪ್, ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್, ನಟಿ ಸುಧಾರಾಣಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

 

 ಮುಖಪುಟ /ಸುದ್ದಿ ಸಮಾಚಾರ