ಮುಖಪುಟ /ಸುದ್ದಿ ಸಮಾಚಾರ   
 

ಮತ್ತೆ ಆಪರೇಷನ್ ಕಮಲ

Kamalaಬೆಂಗಳೂರು, ಅ.೧೫ - ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿ ವಿಫಲವಾಗಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರಿಗೆ ತಕ್ಕ ಪಾಠಕಲಿಸಲು ಮತ್ತು ಮತ್ತೆ ಆ ಎರಡು ಪಕ್ಷಗಳು ಇಂಥ ಕಾರ್ಯಕ್ಕೆ ಇಳಿಯದಂತೆ ಇಳಿದರೂ ಯಾವುದೇ ತೊಂದರೆ ಆಗದ ರೀತಿ ತಮ್ಮ ಬಲ ಭದ್ರಪಡಿಸಿಕೊಳ್ಳಲು ಆಪರೇಷನ್ ಕಮಲಕ್ಕೆ ಈಗ ಬಿಜೆಪಿ ಮತ್ತೆ ಮುಂದಾಗಿದೆ.

ಬಳ್ಳಾರಿ ಸಚಿವ ತ್ರಯರ ನೇತೃತ್ವದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್‌ನ ಕೆಲವು ಶಾಸಕರನ್ನು ಆಪರೇಷನ್ ಕಮಲ ಮೂಲಕ ತಮ್ಮ ಪಕ್ಷಕ್ಕೆ ಸೆಳೆಯಲು ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ. ಈಗ ಈ ವಿಚಾರ ಗುಟ್ಟಾಗೇನೂ ಉಳಿದಿಲ್ಲ.

ಈಗಾಗಲೇ ಜೆಡಿಎಸ್‌ನ ಮೊದಲ ವಿಕೆಟ್ ಉರುಳಿದ್ದು, ಚನ್ನಪಟ್ಟಣದ ಅಶ್ವತ್ಥ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗಾಗಲೇ ಸಚಿವ ಸ್ಥಾನದ ಭರವಸೆ ಪಡೆದಿರುವ ತುಮಕೂರು ಜಿಲ್ಲೆಯ ಕಾಂಗ್ರೆಸ್ ಶಾಸಕರೊಬ್ಬರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಇದನ್ನು ಅರಿತೇ ಜೆಡಿಎಸ್ ಇನ್ನೂ ತನ್ನ ಕೆಲವು ಶಾಸಕರಿಗೆ ಹಾಗೂ ಅತೃಪ್ತ ಬಿಜೆಪಿ ಶಾಸಕರಿಗೆ ರೆಸಾರ್ಟ್‌ನಿಂದ ಮುಕ್ತಿ ನೀಡಿಲ್ಲ.

ಮಹಾನವಮಿ ಹಬ್ಬದ ಹಿನ್ನೆಲೆಯಲ್ಲಿ ಕೆಲವು ಶಾಸಕರಷ್ಟೇ ಇಂದು ರೆಸಾರ್ಟ್‌ನಿಂದ ತಮ್ಮ ಸ್ವಕ್ಷೇತ್ರಗಳಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಈ ಮಧ್ಯೆ ಕಾಂಗ್ರೆಸ್ ಪಕ್ಷ ಸಹ ತಮ್ಮ ಶಾಸಕರನ್ನು ಮತ್ತೊಮ್ಮೆ ಬಿಜೆಪಿ ಹೈಜಾಕ್ ಮಾಡದಂತೆ ಕಟ್ಟೆಚ್ಚರ ವಹಿಸಿದೆ.

ಪ್ರಸ್ತುತ ೧೬ ಶಾಸಕರ ಅನರ್ಹತೆ ಪ್ರಕರಣ ನ್ಯಾಯಾಲಯದಲ್ಲಿದ್ದು, ತೀರ್ಪು ತಮ್ಮ ವಿರುದ್ಧವಾದರೆ ಸರ್ಕಾರ ಮತ್ತೆ ಅಸ್ಥಿರಗೊಳ್ಳುವ ಸಾಧ್ಯತೆಯನ್ನು ಬಿಜೆಪಿ ಮನಗಂಡಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಶಾಸಕರನ್ನು ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಸೆಳೆಯಲು ಬಿಜೆಪಿ ಈಗ ಕಾರ್ಯತಂತ್ರ ರೂಪಿಸುತ್ತಿದೆ. ಈ ನಡೆ ಅನಿವಾರ್ಯ ಎಂದೂ ಬಿಜೆಪಿ ಮೂಲಗಳು ಹೇಳಿವೆ.

ತಾವು ಕಳೆದ ಎರಡು ವರ್ಷಗಳ ಹಿಂದೆ ಆಪರೇಷನ್ ಕಮಲ ಮಾಡದಿದ್ದಿದ್ದರೆ ಅಧಿಕಾರ ದಾಹಿ ಜೆಡಿಎಸ್ ಹಾಗೂ ಕಾಂಗ್ರೆಸ್ ಇಷ್ಟು ಹೊತ್ತಿಗಾಗಲೇ ಬಿಜೆಪಿ ಸರ್ಕಾರವನ್ನು ಉರುಳಿಸಿ ಹಿಂಬಾಗಿಲಿನಿಂದ ಅಧಿಕಾರ ಹಿಡಿದು ಬಿಡುತ್ತಿತ್ತು. ಈ ಹಿನ್ನೆಲೆಯಲ್ಲಿ ತಾವು ಅಂದು ಮಾಡಿದ ಆಪರೇಷನ್ ಕಮಲ ಸರಿಯಾಗಿತ್ತು ಎಂದು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿ ಮೂಲಗಳು, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈಗಲೂ ಆಪರೇಷನ್ ಕಮಲ ಅನಿವಾರ್ಯ ಎಂದು ಹೇಳಿಕೊಂಡಿವೆ.

ಪ್ರಸಕ್ತ ಸನ್ನಿವೇಶದಲ್ಲಿ ಮತ್ತೆ ಬಿಜೆಪಿ ಆಪರೇಷನ್ ಕಮಲ ಮಾಡದಿದ್ದರೆ, ಬಿಜೆಪಿಯ ಮತ್ತಷ್ಟು ಶಾಸಕರನ್ನು ಸೆಳೆಯಲು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಮಾಡೇ ತೀರುತ್ತಾರೆ. ಅವರು ಈಗ ಏಟು ತಿಂದ ನಾಗರಹಾವಿನಂತಾಗಿದ್ದು, ಸೋಲಿನಿಂದ ಸಂಪೂರ್ಣ ಕಂಗೆಟ್ಟಿರುವ ಅವರು ಏನು ಬೇಕಾದರೂ ಮಾಡುತ್ತಾರೆ. ಹೀಗಾಗಿ ತಾವೇ ಮೊದಲು ಮತ್ತೊಂದು ಏಟು ಹೊಡೆಯಬೇಕು ಎಂಬುದು ಬಿಜೆಪಿ ಹುನ್ನಾರವಾಗಿದೆ ಎಂದು ತಿಳಿದುಬಂದಿದೆ.

೧೬ ಶಾಸಕರ ಅನರ್ಹತೆ ಪ್ರಕರಣ ಹೈಕೋರ್ಟ್ ಬಳಿಕ ಸುಪ್ರೀಂ ಕೋರ್ಟ್ ಮೆಟ್ಟಿಲೂ ಏರುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಈ ಸ್ಥಾನಗಳಿಗೆ ಚುನಾವಣೆ ನಡೆಯುವುದು ಕಷ್ಟಸಾಧ್ಯ. ಹೀಗಾಗಿ ಪ್ರಸ್ತುತ ವಿಧಾನಸಭೆಯಲ್ಲಿ ಬಹುತೇಕ ಸಮಬಲ ಇರುವ ಕಾರಣ ಒಬ್ಬಿಬ್ಬರು ಶಾಸಕರು ಅತ್ತಿತ್ತ ವಾಲಿದರೂ ಸರ್ಕಾರದ ಪತನ ಖಚಿತ. ಈ ನಿಟ್ಟಿನಲ್ಲಿ ಆಪರೇಷನ್ ಕಮಲ ಒಂದೇ ಮಾರ್ಗ ಎಂದು ಜನಾರ್ದನ ರೆಡ್ಡಿ ಪ್ರತಿಪಾದಿಸಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಮ್ಮೆ ಆಪೇಷನ್ ಕಮಲ ನಡೆಸಲು ಬಳ್ಳಾರಿ ಸಚಿವ ತ್ರಯರಿಗೆ ಬಿಜೆಪಿ ಗ್ರೀನ್ ಸಿಗ್ನಲ್ ನೀಡಿದ್ದು, ದೆಹಲಿಯ ಬಿಜೆಪಿ ವರಿಷ್ಠರೂ ಇದೇ ಸರಿಯಾದ ಮಾರ್ಗ ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ದಶಹರದ ರಾಮಲೀಲಾ ಉತ್ಸವದ ಬಳಿಕ ಆಡ್ವಾಣಿ, ಸುಷ್ಮಾ ಸ್ವರಾಜ್, ಗಡ್ಕರಿ ಅವರು ಸಭೆ ಸೇರಿ ಈ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಮೂಲಗಳು ತಿಳಿಸಿವೆ. 

 ಮುಖಪುಟ /ಸುದ್ದಿ ಸಮಾಚಾರ