ಮುಖಪುಟ /ಸುದ್ದಿ ಸಮಾಚಾರ   
 

ಸಾಹಿತಿ, ಕಥೆಗಾರ ಕಡೂರು ರಾಮಸ್ವಾಮಿ ನಿಧನ

Kaduru Ramaswamyಬೆಂಗಳೂರು, ಅ.16- ವಿದ್ಯಾರ್ಥಿಗಳ ನೆಚ್ಚಿನ ಮೇಸ್ಟ್ರು, ಕಥೆಗಾರ, ಸಾಹಿತಿ ಕಡೂರು ರಾಮಸ್ವಾಮಿ  ಅವರು ಬೆಂಗಳೂರಿನ ಬನಶಂಕರಿಯಲ್ಲಿಂದು ನಿಧನಹೊಂದಿದರು. ಅವರಿಗೆ 79 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಚಿಕಿತ್ಸೆ ಫಲ ಕಾಣದೆ ವಿಧಿವಶರಾದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಕಡೂರು ರಾಮಸ್ವಾಮಿ ಅವರು ಪತ್ನಿ ಶೈಲಜಾ, ಒಬ್ಬ ಪುತ್ರ, ಪುತ್ರಿಯರಾದ ಪ್ರತಿಭಾ, ಸುಮತಿ ಹಾಗೂ ಅಪಾರ ಶಿಷ್ಯವರ್ಗವನ್ನು ಅಗಲಿದ್ದಾರೆ. 

ಕೆ.ಆರ್. ಪರಿಚಯ - ಹಲವು ದಶಕಗಳ ಕಾಲ ವೃತ್ತಿಯಲ್ಲಿ ಅಧ್ಯಾಪಕರಾಗಿ ಪ್ರವೃತ್ತಿಯಲ್ಲಿ ಲೇಖಕರಾಗಿ ದುಡಿದ ಕಡೂರು ರಾಮಸ್ವಾಮಿ ಅವರು, ತಮ್ಮ ಶಿಷ್ಯವೃಂದಕ್ಕೆ ಕೆ.ಆರ್. ಎಂದೇ ಸುಪರಿಚಿತರಾಗಿದ್ದರು. ಕಡೂರು, ಗುಬ್ಬಿ, ತುರುವೇಕೆರೆ ಹಾಗೂ ಬೆಂಗಳೂರಿನ ಬಸವನಗುಡಿಯ ಸರ್ಕಾರಿ ಶಾಲೆ ಮತ್ತು ಕಾಲೇಜುಗಳ ಸಹಸ್ರಾರು ವಿದ್ಯಾರ್ಥಿಗಳಿಗೆ ತಮ್ಮೆಲ್ಲಾ ವಿದ್ಯೆಯನ್ನೂ ಧಾರೆ ಎರೆದಿದ್ದ ಕಡೂರು ರಾಮಸ್ವಾಮಿ ಅವರ ಶಿಷ್ಯರು ಯಾರೂ ಇಂದು ನಿಷ್ಪ್ರಯೋಜಕರಾಗಿಲ್ಲ ಎಂಬುದು ಅತಿಶಯೋಕ್ತಿಯ ಮಾತಲ್ಲ.

ತಮ್ಮ ಸೋದರ ಮಾವ ಹಾಗೂ ಪ್ರಸಿದ್ಧ ಕಥೆಗಾರರಾದ ಅಶ್ವತ್ಥ್ ಅವರ ಉತ್ತೇಜನದಿಂದ ಸಣ್ಣ ಕಥೆಗಳನ್ನು ಬರೆಯಲು ಆರಂಭಿಸಿದ ಕೆ.ಆರ್. ನೂರಾರು ಕಥೆ, ಹಲವು ವಿಚಾರ ಪೂರ್ಣ ಲೇಖನಗಳನ್ನೂ ಬರೆದಿದ್ದಾರೆ. ಇವರ ನೂರಾರು ಕಥೆ, ಕವನ, ಲೇಖನಗಳು ನಾಡಿನ ಎಲ್ಲ ಪ್ರಮುಖ ದಿನಪತ್ರಿಕೆಗಳಲ್ಲೂ ಪ್ರಕಟವಾಗಿವೆ.

ಕಡೂರು ರಾಮಸ್ವಾಮಿ ಅವರು ಲವ್ವು, ಮುಖವಾಡ, ಬೆಳಗಾದರೆ, ಸಮಗ್ರ ಸಾಹಿತ್ಯ ಲೋಕ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.

2002ರ ಫೆಬ್ರವರಿಯಲ್ಲಿ ಅಮೆರಿಕೆಯ ಸಾಹಿತ್ಯಾಸಕ್ತರ ಬಳಗ ಏರ್ಪಡಿಸಿದ್ದ ಸಾಹಿತ್ಯಗೋಷ್ಠಿಯಲ್ಲಿ ನಾನೇಕೆ ಸಣ್ಣಕಥೆ ಬರೆಯುತ್ತೇನೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ್ದ ಕಡೂರು ರಾಮಸ್ವಾಮಿ ಅವರು ತಮ್ಮ ಮಾತುಗಾರಿಕೆ ಹಾಗೂವಿಚಾರವಂತಿಕೆಯಿಂದ ಅನಿವಾಸಿ ಕನ್ನಡಿಗರ ಮನಗೆದ್ದದ್ದರು.

 ಮುಖಪುಟ /ಸುದ್ದಿ ಸಮಾಚಾರ