ಮುಖಪುಟ /ಸುದ್ದಿ ಸಮಾಚಾರ   
 

ಹೈಕಮಾಂಡ್ ಜೊತೆ ಮಾತುಕತೆಗೆ ಸಿದ್ಧ - ಭಿನ್ನರು

Jarkiholiಬೆಂಗಳೂರು, ಅ.2೦ - ತಾವುಗಳಾರೂ ಗೃಹ ಬಂಧನದಲ್ಲಿಲ್ಲ. ತಮ್ಮನ್ನು ಕಾಂಗ್ರೆಸ್ ಆಗಲಿ, ಜೆಡಿಎಸ್ ಆಗಲಿ ಗೃಹ ಬಂಧನದಲ್ಲಿ ಇಟ್ಟಿಲ್ಲ. ನಾವು ರಾಜ್ಯದ ಹಿತಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ನಾವೆಲ್ಲರೂ ಒಟ್ಟಿಗೆ ಇದ್ದೇವೆ. ಸರ್ಕಾರದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರದ ವಿರುದ್ಧ ತಮ್ಮ ಹೋರಾಟ ನಡೆದಿದೆ ಎಂದು ಬಿಜೆಪಿಯ ೧೧ ಬಿಜೆಪಿ ಅತೃಪ್ತ ಶಾಸಕರು ಹೇಳಿದ್ದಾರೆ.

ಗೋಲ್ಡನ್ ಫಾಮ್ ರೆಸಾರ್ಟ್‌ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ತಮ್ಮನ್ನು ಅನಗತ್ಯವಾಗಿ ಕಾನೂನು ಬಾಹಿರವಾಗಿ ಅನರ್ಹಗೊಳಿಸಲಾಯಿತು ಎಂದು ಹೇಳಿದರು. ತಾವು ರಾಜ್ಯದ ಹಿತದಿಂದ ಈ ಹೋರಾಟ ಮಾಡುತ್ತಿದ್ದೇವೆಯೇ ಹೊರತು ಬೇರೆ ವಿಚಾರಕ್ಕಲ್ಲ ಎಂದು ಹೇಳಿದರು.

ನಮ್ಮನ್ನು ಬಂದೂಕಿನ ತುದಿಯಲ್ಲಿ ಹೆದರಿಸಲು ಸಾಧ್ಯವಿಲ್ಲ. ಇಂದು ಅಶೋಕ್ ಸೇರಿ ಹಲವು ಸಚಿವರು ಸುದ್ದಿಗೋಷ್ಠಿಯಲ್ಲಿ ಮಾಡಿರುವ ಆರೋಪಗಳೆಲ್ಲಾ ಸುಳ್ಳು ತಾವು ಬಂಧನದಲ್ಲಿಲ್ಲ. ಈ ಸುದ್ದಿಗೋಷ್ಠಿಯಲ್ಲಿ ಅವರು ನಮ್ಮನ್ನು ತಮ್ಮ ಪಕ್ಷದ ಶಾಸಕರು ಎಂದು ಅವರು ಹೇಳಿಕೊಂಡಿದ್ದಾರೆ ಅದು ತೃಪ್ತಿ ತಂದಿದೆ ಎಂದರು.

ತಾವುಗಳಾರೂ ಯಾವುದೇ ಕಾರಣಕ್ಕೂ ರಾಜ್ಯದ ನಾಯಕರ ಜೊತೆ ಮಾತುಕತೆಗೆ ಸಿದ್ಧರಿಲ್ಲ, ತಮಗೆ ಯಾರಿಗೂ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಸೇರಿದಂತೆ ಯಾರ ಬಗ್ಗೆಯೂ ನಂಬಿಕೆ ಇಲ್ಲ ಎಂದು ಹೇಳಿದ ಜಾರಕಿಹೊಳಿ, ನಿತಿನ್ ಗಡ್ಕರಿ ತಮ್ಮೊಂದಿಗೆ ಮಾತುಕತೆಗೆ ಬಂದರೆ ತಾವು ಮಾತುಕತೆಗೆ ಸಿದ್ಧ ಎಂದು ಸ್ಪಷ್ಟಪಡಿಸಿದರು.

ಆನಂದ್ ಆಸ್ನೋಟಿಕರ್ ಮಾತನಾಡಿ, ನಾವು ಎಲ್ಲೇ ಹೋದರೂ ನಮ್ಮ ಒಗ್ಗಟ್ಟು ಒಡೆಯಲು ಸಾಧ್ಯವಿಲ್ಲ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು. ತಾವುಗಳಾರೂ ಭಾರತೀಯ ಜನತಾಪಾರ್ಟಿ ತೊರೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

 ಮುಖಪುಟ /ಸುದ್ದಿ ಸಮಾಚಾರ