ಮುಖಪುಟ /ಸುದ್ದಿ ಸಮಾಚಾರ   
 

ಬಿಜೆಪಿ ನಾಯಕರ ಮನೆ, ಕಚೇರಿ ಮೇಲೆ ಐ.ಟಿ. ದಾಳಿ

ಬೆಂಗಳೂರು, ಅ.೨೫ - ಉಡುಪಿಯಲ್ಲಿ ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಮ್ಮ ಪಕ್ಷದವರ ಮೇಲೆ ಆದಾಯ ತೆರಿಗೆ ದಾಳಿ ನಡೆಸಿ ಸೇಡಿನ ರಾಜಕೀಯಕ್ಕೆ ಕೇಂದ್ರ ಮುಂದಾಗಿದೆ ಎಂದು ಹೇಳಿದ ೨೪ ಗಂಟೆ ಅವಧಿಯೊಳಗೆ ಇಂದು ಬಿಜೆಪಿಯ ಹಲವು ನಾಯಕರ ಮನೆಯ ಮೇಲೆ ರಾಜ್ಯಾದ್ಯಂತ ೬೦ಕ್ಕೂ ಹೆಚ್ಚು ಕಡೆ ದಾಳಿ ನಡೆದಿರುವುದು ಅನೇಕ ಅನುಮಾನ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ಅಂತೆಯೇ ಬಿಜೆಪಿ ಪಾಳಯದಲ್ಲಿ ಆಂತಕವನ್ನೂ ಸೃಷ್ಟಿಸಿದೆ.

ಮಹತ್ವದ ಬೆಳವಣಿಗೆಯೊಂದರಲ್ಲಿ ಇಂದು ಕೇಂದ್ರ ಆದಾಯ ತೆರಿಗೆ ಅಧಿಕಾರಿಗಳ ತಂಡ ಬೆಂಗಳೂರು, ಬಳ್ಳಾರಿ ಹಾಗೂ ಹೈದರಾಬಾದ್‌ನ ಹಲವೆಡೆ ಬಿಜೆಪಿ ನಾಯಕರ ಹಾಗೂ ಅವರ ಬಂಧು, ಮಿತ್ರರ ಮನೆ, ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿವೆ.

ಆರೋಗ್ಯ ಸಚಿವ ಶ್ರೀರಾಮುಲು ಅವರ ಬೆಂಗಳೂರು, ಚಾಲುಕ್ಯ ಹೊಟೆಲ್ ಬಳಿ ಇರುವ ಹೈಪಾಯಿಂಟ್ ಕಚೇರಿಯ ಮೇಲೆ ಐ.ಟಿ. ದಾಳಿ ನಡೆದಿದೆ.  ಕಂಪ್ಲಿಯ ಶಾಸಕರಾದ ಸುರೇಶ್ ಬಾಬು ಹಾಗೂ ಕೂಡ್ಲಿಗಿ ಶಾಸಕ ನಾಗೇಂದ್ರ ಅವರುಗಳಿಗೆ ಸೇರಿದ ಬೆಂಗಳೂರಿನ ಸುರೇಶ್ ಕನ್‌ಸ್ಟ್ರಕ್ಷನ್, ಜಿ.ಜಿ. ಮೈನ್ಸ್, ಐ.ಎಲ್.ಸಿ. ಕಂಪನಿ ಸೇರಿದಂತೆ ವಿವಿಧ ಸಂಸ್ಥೆ, ನಿವಾಸದ ಮೇಲೆ ವರಮಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬಳ್ಳಾರಿಯ ರೆಡ್ಡಿ ಸಚಿವರ ಆಪ್ತರಾಗಿರುವ ಈ ಇಬ್ಬರು ಶಾಸಕರು, ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಲಾಗಿದ್ದು, ಇವರುಗಳ ಮನೆ, ಕಚೇರಿಯ ಮೇಲೆ ಆದಾಯ ತೆರಿಗೆ ದಾಳಿ ನಡೆದಿರುವುದು ಕುತೂಹಲ ಮೂಡಿಸಿದೆ. ಈ ದಾಳಿಯ ವೇಳೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಇದಲ್ಲದೆ ಜನಾರ್ದನ ರೆಡ್ಡಿ ಅವರ ಕಾನೂನು ಸಲಹೆಗಾರ  ನಿವಾಸದ ಮೇಲೂ ದಾಳಿ ನಡೆದಿದೆ ಎಂದು ವರದಿಯಾಗಿದೆ. ಇನ್ನೂ ಕೆಲವೆಡೆ ದಾಳಿ ಮುಂದುವರಿದಿದ್ದು, ದಾಳಿಯ ವಿವರಗಳು ತಿಳಿದುಬಂದಿಲ್ಲ. ಆದರೆ ಈ ದಾಳಿಯಲ್ಲಿ ೧೦೦ಕ್ಕೂ ಹೆಚ್ಚು ಅಧಿಕಾರಿಗಳು ಪಾಲ್ಗೊಂಡಿದ್ದರು ಎಂದು ಮೂಲಗಳು ಹೇಳಿವೆ.

ಹೈದರಾಬಾದ್‌ನಲ್ಲೂ ದಾಳಿ

ಈ ಮಧ್ಯೆ ಬಂಜಾರ ಹಿಲ್ಸ್, ಜುಬಿಲಿ ಹಿಲ್ಸ್‌ನಲ್ಲಿರುವ ಜನಾರ್ದನ ರೆಡ್ಡಿ ಅವರ ಆಪ್ತರ ನಿವಾಸ, ಅಪಾರ್ಟ್‌ಮೆಂಟ್ ಮೇಲೂ ದಾಳಿ ನಡೆದಿದೆ ಎಂದು ವರದಿಯಾಗಿದೆ.

ಬಿಜೆಪಿ ಖಂಡನೆ: ರಾಜ್ಯದಲ್ಲಿ ನಡೆಯುತ್ತಿರುವ ವರಮಾನ ತೆರಿಗೆ ದಾಳಿಯನ್ನು ಬಿಜೆಪಿ ಖಂಡಿಸಿದೆ. ದೆಹಲಿಯಲ್ಲಿನ ರಾಜ್ಯದ ಪ್ರತಿನಿಧಿ ಧನಂಜಯಕುಮಾರ್ ಪ್ರತಿಕ್ರಿಯೆ ನೀಡಿ, ಇದೊಂದು ದುರುದ್ದೇಶಪೂರಿತ ಕ್ರಮ ಎಂಬುದು ಎಲ್ಲರಿಗೂ ತಿಳಿಯುತ್ತದೆ ಎಂದು ಹೇಳಿದ್ದಾರೆ.

ಕೇವಲ ಬಿಜೆಪಿ ನಾಯಕರುಗಳ ಕಚೇರಿ ಮನೆಗಳ ಮೇಲೆ ನಡೆಯುವ ದಾಳಿ ವೈಯಕ್ತಿಕ ನೆಲೆಯಲ್ಲಿ ನಡೆಯಲು ಸಾಧ್ಯವಿಲ್ಲ. ಇದರ ಹಿಂದೆ ರಾಜಕೀಯ ದುರುದ್ದೇಶವಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಹೇಳಿದರು. ರಾಜ್ಯದ ಕಾಂಗ್ರೆಸ್ ನಾಯಕರು ಕೇಂದ್ರದ ಮೇಲೆ ಒತ್ತಡ ತಂದು, ಈ ಕೆಲಸ ಮಾಡಿಸಿದ್ದಾರೆ ಎಂದು ಗುಡುಗಿದರು.

 ಮುಖಪುಟ /ಸುದ್ದಿ ಸಮಾಚಾರ