ಮುಖಪುಟ /ಸುದ್ದಿ ಸಮಾಚಾರ   
 

ಲಕ್ಷಾಂತರ ಜನರಿಂದ ಮೈಸೂರು ದಸರಾ ವೀಕ್ಷಣೆ

dasaraಮೈಸೂರು, .೧೮ - ಅರಮನೆಗಳ ನಗರಿ ಕರ್ನಾಟಕದ ಸಾಂಸ್ಕೃತಿಕ ತವರು ಮೈಸೂರಿನಲ್ಲಿ ನಿನ್ನೆ ನಾಡಹಬ್ಬ ದಸರೆಯ ಕೊನೆಯ ದಿನವಾದ ವಿಜಯದಶಮಿಯಂದು ವಿಶ್ವವಿಖ್ಯಾತ ಜಂಬೂಸವಾರಿಯ ಸಂಭ್ರಮ. ಮೈಸೂರು ಅರಮನೆಯ ಬಲರಾಮದ್ವಾರದಲ್ಲಿ ಮಧ್ಯಾಹ್ನ ೧.೪೫ ಸರಿಯಾಗಿ ಶುಭ ಕುಂಭ ಲಗ್ನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.

ನಂತರ ಬಲರಾಮನ ಮೇಲಿದ್ದ ೭೫೦ ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ತಾಯಿ ಚಾಮುಂಡಾಂಬಿಕೆಗೆ ಅವರು ಪುಷ್ಪಾರ್ಚನೆ ಮಾಡುವುದರೊಂದಿಗೆ ಭವ್ಯ ಜಂಬೂಸವಾರಿ ಅರಮನೆಯಿಂದ ಹೊರಬಂದು ರಾಜ ಮಾರ್ಗದಲ್ಲಿ ಐದೂವರೆ ಕಿಲೋ ಮೀಟರ್ ದೂರದ ಬನ್ನಿ ಮಂಟಪದತ್ತ ಹೆಜ್ಜೆ ಹಾಕತೊಡಗಿದಾಗ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ, ಎಲ್ಲ ಕಟ್ಟಡಗಳ ಮೇಲೆ ಹತ್ತಿ ನಿಂತಿದ್ದ ಲಕ್ಷಾಂತರ ಜನರು ಹರ್ಷೋದ್ಗಾರ ಮಾಡಿದರು.

ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಮೈಸೂರಿಗೆ ಆಗಮಿಸಿದ್ದ ೭ ಲಕ್ಷಕ್ಕೂ ಹೆಚ್ಚು ಜನರು ಧನ್ಯತೆಯ ಭಾವ ಮೆರೆದರು. ಚಿನ್ನದಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಕಂಡು ಭಕ್ತಿಭಾವದಿಂದ ಪುಳಕಿತರಾದರು.

೧೩ನೇ ಬಾರಿ ಅಂಬಾರಿ ಹೊತ್ತ ೫೨ವರ್ಷ ವಯಸ್ಸಿನ ಬಲರಾಮ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ

ಹೆಜ್ಜೆ ಹಾಕಿದಾಗ ಈ ಬಾರಿ ಝಳ್ ಝಳ್ ಶಬ್ದ ಮನಸೆಳೆಯಿತು. ಇದೇ ಮೊದಲ ಬಾರಿಗೆ ಬಲರಾಮನ ನಾಲ್ಕೂ ಕಾಲಿಗೆ ಪಂಚಲೋಹದ ಕಡಗ ಹಾಕಲಾಗಿತ್ತು. ೪೦೦ನೇ ಜಂಬೂಸವಾರಿಯ ಹಿನ್ನೆಲೆಯಲ್ಲಿ ಬಲರಾಮನನ್ನು ಪ್ರತಿವರ್ಷಕ್ಕಿಂತ ಈ ವರ್ಷ ಹೆಚ್ಚು ಆಕರ್ಷಕವಾಗಿ ಅಲಂಕರಿಸಲಾಗಿತ್ತು.

ಮುತ್ತಿನಹಾರ, ಸಿಂಗೋಟಿ, ಗಂಟೆಸರ, ಚಾಮರ ಹಾಗೂ ಕೆಂಪುವರ್ಣದ ಮಿರಿಮಿರಿವಸ್ತ್ರದಿಂದ ಹಾಗೂ ಮೈಮೇಲೆ ಬರೆದ ವರ್ಣಮಯ ಚಿತ್ತಾರದಿಂದ ಕಂಗೊಳಿಸುತ್ತಿದ್ದ ಬಲರಾಮ ಶಾಂತಚಿತ್ತನಾಗಿ ತನ್ನ ಸೊಂಡಿಲನ್ನು ಅತ್ತಿಂದಿತ್ತ ಇತ್ತಿದ್ದಂತ ಆಡಿಸುತ್ತಾ ಹೆಜ್ಜೆಹಾಕುತ್ತಿದ್ದರೆ ಆತನ ಎಡಬಲದಲ್ಲಿ ಹಾಗೂ ಹಿಂದೆ ಅರ್ಜುನ, ನಿಶಾನೆ, ನೌಷತ್, ಶ್ರೀರಾಮ, ಸರಳ, ಅಭಿಮನ್ಯು, ಹರ್ಷ, ವಿಕ್ರಮ, ಕಾಂತಿ, ವರಲಕ್ಷ್ಮೀ, ಮೇರಿ, ಪಟ್ಟದ ಆನೆ ಗಜೇಂದ್ರ ಸೇರಿದಂತೆ ೧೨ ಆನೆಗಳು ಹೆಜ್ಜಹಾಕಿದ ದೃಶ್ಯವಂತೂ ಮನಮೋಹಕವಾಗಿತ್ತು.

ಸ್ತಬ್ಧಚಿತ್ರ

ನಾಡಿನ ಮೂಲೆ ಮೂಲೆಗಳಿಂದ ಸುಮಾರು ೭೨ಕ್ಕೂ ಹೆಚ್ಚು ಜನಪದ ತಂಡಗಳು ಆಗಮಿಸಿದ್ದವು. ತಮಟೆ, ಡೊಳ್ಳು, ಕರಡಿ ಮಜಲು, ಬೇಡರ ಕುಣಿತ, ಹುಲಿವೇಷ, ಪೂಜಾ ಕುಣಿತ, ಗಾರುಡಿ ಸೇರಿದಂತೆ ಹಲವು ವಾದ್ಯದಂಡಗಳು ಮನಸೆಳೆದವು.

೪೦೦ನೇ ದಸರಾ ವರ್ಷಾಚರಣೆ ಅಂಗವಾಗಿಈಬಾರಿ ರಾಜ್ಯವನ್ನಾಳಿದ ರಾಜಮನೆತನಗಳ ಅನಾವರಣ ಸ್ತಬ್ಧಚಿತ್ರಗಳಲ್ಲಿ ಒಡಮೂಡಿತ್ತು. ಗಂಗ, ಕದಂಬ, ಚಾಲುಕ್ಯ, ರಾಷ್ಟ್ರಕೂಟ, ಬಾದಾಮಿ ಚಾಲುಕ್ಯರು, ಕೆಳದಿಯ ಅರಸರು, ಮದಕರಿ ನಾಯಕ, ಹೊಯ್ಸಳರು, ನೊಳಂಬರು, ಆಳುಪರು, ವಿಜಾಪುರದ ಸುಲ್ತಾನರು.. ಹೀಗೆ ಎಲ್ಲ ರಾಜಮನೆತನಗಳನ್ನು ಲಕ್ಷಾಂತರ ಜನರಿಗೆ ಪರಿಚಯ ಮಾಡಿಸುವಲ್ಲಿ ಸ್ತಬ್ಧಚಿತ್ರಗಳು ಯಶಸ್ವಿಯಾದವು.

ಬೆಳಗ್ಗೆ ಸುಡುತ್ತಿದ್ದ ಬಿಸಿಲನ್ನು ಲೆಕ್ಕಿಸದೆ ಕಾದು ಕುಳಿತಿದ್ದ ಜನತೆ, ಮಧ್ಯಾಹ್ನ ತುಂತುರು ಮಳೆಯನ್ನೂ ಲೆಕ್ಕಿಸದೆ ಜಂಬೂಸವಾರಿ ವೀಕ್ಷಿಸಿದರು.

ಸಂಜೆ ನಡೆದ ಪಂಜಿನ ಮೆರವಣಿಗೆ, ಲೇಸರ್ ಷೋ ಹಾಗೂ ಬೈಕ್ ಚಮತ್ಕಾರ ಮನಮೋಹಕವಾಗಿತ್ತು. ಒಟ್ಟಾರೆಯಾಗಿ ಮೈಸೂರು ದಸರಾ ಬಹುಕಾಲ ಜನಮನದಲ್ಲಿ ಉಳಿಯುವಂತಿತ್ತು. ಈ ಸಮಾರಂಭದಲ್ಲಿ ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್, ಸಚಿವರುಗಳಾದ ಆರ್. ಅಶೋಕ, .ರಾಮದಾಸ್, ವಿಜಯಶಂಕರ್, ಗೋವಿಂದಕಾರಜೋಳ, ಮುಖ್ಯನ್ಯಾಯಮೂರ್ತಿ ಜೆ.ಎಸ್. ಖೇಹರ್, ಮುಖ್ಯ ಕಾರ್ಯದರ್ಶಿ ರಂಗನಾಥ್, ಮೈಸೂರು ಮೇಯರ್ ಸಂದೇಶ ಸ್ವಾಮಿ ಮತ್ತಿರರ ಗಣ್ಯರು ಪಾಲ್ಗೊಂಡಿದ್ದರು

 ಮುಖಪುಟ /ಸುದ್ದಿ ಸಮಾಚಾರ