ಮುಖಪುಟ /ಸುದ್ದಿ ಸಮಾಚಾರ   
 

11 ಅನರ್ಹ ಶಾಸಕರ ಪ್ರಕರಣ ನಾಳೆಗೆ ಮುಂದೂಡಿಕೆ

Karnataka High courtಬೆಂಗಳೂರು, ಅ.2೦ - ರಾಜ್ಯದ ಕುತೂಹಲ ಕೆರಳಿಸಿರುವ ೧೧ ಬಿಜೆಪಿ ಅತೃಪ್ತ ಶಾಸಕರ ಅನರ್ಹತೆ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ವಿ.ಜಿ.ಸಭಾಹಿತ್ ನಾಳೆಗೆ ಮುಂದೂಡಿದ್ದಾರೆ.

ಇಂದು ನ್ಯಾಯಮೂರ್ತಿಗಳು ಅನರ್ಹ ಶಾಸಕರ ಪರ ವಕೀಲರುಗಳಾದ  ಕೆ.ಜಿ. ರಾಘವನ್, ಬಿ.ವಿ. ಆಚಾರ್ಯ ಹಾಗೂ ರವಿವರ್ಮ ಕುಮಾರ್ ಅವರ ಸುದೀರ್ಘ ವಾದ ಆಲಿಸಿದರು.

ಕಲಾಪದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ನರಗುಂದ್ ಅವರು, ಮಾನ್ಯ ನ್ಯಾಯಮೂರ್ತಿಗಳು ಅನರ್ಹ ಶಾಸಕರ ಪರ ವಕೀಲರ ವಾದವನ್ನು ಆಲಿಸಿದ್ದಾರೆ, ವಾದ ಇನ್ನೂ ಬಾಕಿ ಇದ್ದು, ನಾಳೆ ಮತ್ತೆ ವಿಚಾರಣೆ ನಡೆಯಲಿದೆ ಎಂದು ಹೇಳಿದರು.

ಇದರಿಂದಾಗಿ ರಾಜಕೀಯ ಕುತೂಹಲ ಮತ್ತೊಂದು ದಿನ ಮುಂದಕ್ಕೆ ಹೋಗಿದೆ. ನಾಳೆ ಮತ್ತೆ ತಮ್ಮ ಕಕ್ಷಿದಾರರುಗಳ ಪರ ವಕೀಲರು ವಾದ ಮಂಡಿಸಿದ ಬಳಿಕ, ಪ್ರತಿವಾದಿಗಳ ಪರ ಹೆಸರಾಂತ ವಕೀಲ ಸೋಲಿ ಸೊರಾಬ್ಜಿ ಅವರು ತಮ್ಮ ವಾದ ಮಂಡಿಸಲಿದ್ದಾರೆ.

ಇಂದು ಬೆಳಗ್ಗೆ ಅನರ್ಹ ಶಾಸಕರ ಪರ ವಕಾಲತ್ತು ವಹಿಸಿದ ನ್ಯಾಯವಾದಿ ರವಿವರ್ಮ ಕುಮಾರ್ ಅವರು ಶಾಸಕರು ಸರ್ಕಾರಕ್ಕೆ ಬೆಂಬಲ ವಾಪಸು ಪಡೆದ ರಾಜ್ಯಪಾಲರಿಗೆ ನೀಡಿದ್ದರಲ್ಲಿ ತಪ್ಪೇನಿಲ್ಲ. ಕಾರಣ ರಾಜ್ಯಪಾಲರೇ ಸಚಿವರುಗಳಿಗೆ ಗೌಪ್ಯತೆಯ ಮತ್ತು ಅಧಿಕಾರದ ಪ್ರಮಾಣವಚನ ಬೋಧಿಸುತ್ತಾರೆ ಎಂದು ವಾದಿಸಿದರು ಎಂದು ವರದಿಯಾಗಿದೆ.

ಕೆ.ಜಿ. ರಾಘವನ್ ಅವರು ಶಾಸಕರು ಬೇರೆ ಪಕ್ಷಕ್ಕೆ ಸೇರಿದರೆ ಮಾತ್ರವೇ ಪಕ್ಷಾಂತರ ನಿಷೇಧ ಕಾಯಿದೆಯಡಿ ಶಾಸಕರು ಅನರ್ಹರಾಗುತ್ತಾರೆ. ಈಗಲೂ ೧೧ ಜನ ಶಾಸಕರು ಬಿಜೆಪಿಯಲ್ಲೇ ಇದ್ದು, ಇವರ ಅನರ್ಹತೆ ಸರಿಯಿಲ್ಲ ಎಂದು ವಾದಿಸಿದರು. ಸಂವಿಧಾನದ ಷೆಡ್ಯೂಲ್ ೧೦ರ (೨)(ಎ)ಗೆ ಸಂಬಂಧಿಸಿದಂತೆ ಸ್ಪೀಕರ್ ಕೈಗೊಂಡಿರುವ ಕ್ರಮ ಸರಿ ಇಲ್ಲ ಎಂದು ವಾದಿಸಿದರು.

ಬಿ.ವಿ. ಆಚಾರ್ಯ ಅವರು ಸಾಂದರ್ಭಿಕ ಸಾಕ್ಷ್ಯಗಳು ಸರಿಯಾಗಿಲ್ಲ. ಮುಖ್ಯಮಂತ್ರಿಗಳು ನೀಡಿರುವ ದೂರಿನಲ್ಲಿ ಪಕ್ಷದ ಶಾಸಕರು ಬೇರೆ ಪಕ್ಷಕ್ಕೆ ಸೇರಿದ್ದಾರೆ ಎಂಬ ಅಂಶವೇ ಇಲ್ಲ. ಇದರಿಂದಾಗಿ ಅನರ್ಹತೆಯ ಪ್ರಶ್ನೆಯೇ ಬರುವುದಿಲ್ಲ ಎಂದು ತಮ್ಮ ವಾದ ಮುಂದಿಟ್ಟರು.

೧೮ರಂದು ದ್ವಿಸದಸ್ಯ ನ್ಯಾಯಪೀಠದಲ್ಲಿ ವಿಚಾರಣೆ ನಡೆದ ಬಳಿಕ ಬಂದ ತೀರ್ಪಿನಲ್ಲಿ ಮುಖ್ಯನ್ಯಾಯಮೂರ್ತಿ ಜೆ.ಎಸ್. ಖೇಹರ್ ಹಾಗೂ ನ್ಯಾಯಮೂರ್ತಿ ಎನ್. ಕುಮಾರ್ ಅವರು ಶಾಸಕರು ಸ್ವಇಚ್ಛೆಯಿಂದ ಪಕ್ಷ ತೊರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಭಿನ್ನ ನಿಲುವು ತಳೆದಿದ್ದ ಕಾರಣ, ಪ್ರಕರಣವನ್ನು ಮೂರನೇ ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.

ಅದರಂತೆ ಇಂದು ಸಭಾಹಿತ್ ಅವರ ಏಕ ಸದಸ್ಯ ಪೀಠದ ಮುಂದೆ ಪ್ರಕರಣದ ವಿಚಾರಣೆ ನಡೆಯಿತು. ವಾದ ಪ್ರತಿವಾದ ತೀವ್ರ ಕುತೂಹಲ ಕೆರಳಿಸಿದ್ದು, ಈಗ ನ್ಯಾಯಮೂರ್ತಿ ಸಭಾಹಿತ್ ಅವರು ನೀಡುವ ತೀರ್ಪಿನತ್ತ ಎಲ್ಲರ ಚಿತ್ತ ನೆಟ್ಟಿದೆ. ನಾಳೆ ಸಂಜೆಯ ಹೊತ್ತಿಗೆ ನ್ಯಾಯಮೂರ್ತಿಗಳು ತಮ್ಮ ತೀರ್ಪನ್ನು ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇಲ್ಲವೇ ವಾದ ಪ್ರತಿವಾದ ಆಲಿಸಿ ನ್ಯಾಯಮೂರ್ತಿಗಳು ತೀರ್ಪು ಕಾಯ್ದಿರಿಸಲೂ ಬಹುದಾಗಿದೆ. ಇಲ್ಲವೇ ಇನ್ನೂ ಹೆಚ್ಚಿನ ವಿಚಾರಣೆಗಾಗಿ ಮುಂದೂಡುವ ಅವಕಾಶವೂ ಇದೆ ಎಂದು ಹಿರಿಯ ವಕೀಲರು ಅಭಿಪ್ರಾಯಪಟ್ಟಿದ್ದಾರೆ.

 ಮುಖಪುಟ /ಸುದ್ದಿ ಸಮಾಚಾರ