ಮುಖಪುಟ /ಸುದ್ದಿ ಸಮಾಚಾರ   
 

ನಾಲ್ಕು ಪಕ್ಷೇತರ ಸಚಿವರ ವಜಾ

Narendraswamyಕನ್ನಡರತ್ನವಾರ್ತೆ, ಬೆಂಗಳೂರು, ಅ.೬ : ಬಂಡಾಯ ಎದ್ದಿರುವ ಪಕ್ಷೇತರ ಸಚಿವರನ್ನು ವಜಾ ಮಾಡುವ ಧೈರ್ಯವನ್ನು ಮುಖ್ಯಮಂತ್ರಿ ಪ್ರದರ್ಶಿಸಿದ್ದಾರೆ. ಪಕ್ಷೇತರರಾಗಿ ಜಯ ಸಾಧಿಸಿ, ಬಿಜೆಪಿ ಸಂಪುಟದಲ್ಲಿ ಸಚಿವ ಸ್ಥಾನ ಪಡೆದಿದ್ದ ಶಿವರಾಜ ತಂಗಡಗಿ, ಡಿ.ಸುಧಾಕರ್, ಪಿ.ಎಂ. ನರೇಂದ್ರಸ್ವಾಮಿ ಹಾಗೂ ವೆಂಕಟರಮಣಪ್ಪ ಅವರನ್ನು ವಜಾ ಮಾಡುವ ಶಿಫಾರಸನ್ನು ಅವರು ಇಂದು ರಾಜ್ಯಪಾಲರಿಗೆ ಕಳುಹಿಸಿದರು.

Sudhakarರಾಜ್ಯಪಾಲರು ಈ ಶಿಫಾರಸನ್ನು ಅಂಗೀಕರಿಸಿದ್ದಾರೆ ಎಂದು ಮುಖ್ಯಮಂತ್ರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಾಲ್ಕು ಸಚಿವರ ವಜಾದಿಂದ ತೆರವಾಗಿರುವ ಸ್ಥಾನಗಳಿಗೆ ಹೊರಬರನ್ನು ಸೇರಿಸಿಕೊಳ್ಳುವುದಾಗಿ ಹೇಳಿದ ಮುಖ್ಯಮಂತ್ರಿ, ಕೆಲವು ಹಿರಿಯ ಸಚಿವರ ರಾಜೀನಾಮೆಯನ್ನೂ ಪಡೆದು, ಸಂಪುಟ ವಿಸ್ತರಣೆ ಮಾಡಿ ಅತೃಪ್ತ ಶಾಸಕರಿಗೆ ಸ್ಥಾನ ನೀಡುವ ಮೂಲಕ ಪಕ್ಷದಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯವನ್ನು ಹೋಗಲಾಡಿಸುವ ಪ್ರಯತ್ನಮಾಡಲಾಗುವುದು ಎಂದರು.

Venkataramanappaಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಂಡಿರುವ ಬಿಜೆಪಿ ಶಾಸಕರು, ಈ ಸಂಬಂಧ ರಾಜ್ಯಪಾಲರಿಗೆ ನೀಡಿರುವ ಪತ್ರವನ್ನು ಹಿಂದೆ ಪಡೆಯದಿದ್ದರೆ ಪಕ್ಷದಿಂದ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸರ್ಕಾರಕ್ಕೆ ಬೆಂಬಲ ವಾಪಸ್ ಪಡೆಯುವ ಪತ್ರವನ್ನು ರಾಜ್ಯಪಾಲರಿಗೆ ನೀಡಿರುವ ಬಿಜೆಪಿ ಶಾಸಕರು, ಪಕ್ಷಾಂತರ ನಿಷೇಧ ಕಾಯ್ದೆಗೆ ಒಳಪಡುವರಲ್ಲದೆ, ಮುಂದಿನ ಆರು ವರ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ, ಪಕ್ಷಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯದ ತೀರ್ಪು ಇದೆ ಎಂದು ಅವರು ಪ್ರತಿಪಾದಿಸಿದರು.

Tangadagiಪಕ್ಷದ ಹೆಸರಿನಲ್ಲಿ ಚುನಾವಣೆಯಲ್ಲಿ ಗೆದ್ದು ಬಂದು ಸರ್ಕಾರಕ್ಕೆ ಬೆಂಬಲ ಹಿಂದೆ ಪಡೆದಿರುವುದಾಗಿ ಘೋಷಿಸಿರುವ ಬಿಜೆಪಿ ಶಾಸಕರು, ಪಕ್ಷಕ್ಕೆ ಹಿಂತಿರುಗಿ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.

ರಾಜಕಾರಣಿಗಳು ಪರಿಸ್ಥಿತಿಗೆ ತಕ್ಕಂತೆ ಬದಲಾಗುತ್ತಿರುವುದು ರಾಜ್ಯದ ಜನತೆಯಲ್ಲಿ ಬೇಸರ ತಂದಿದೆ. ಇಂದು ಸಂಜೆಯೊಳಗೆ ಬೆಂಬಲ ವಾಪಸು ಪಡೆಯುವ ಪತ್ರ ನೀಡಿರುವ ಶಾಸಕರು ತಮ್ಮ ಪತ್ರ ಹಿಂದಕ್ಕೆ ಪಡೆಯಬೇಕು. ರಾಜ್ಯದ ಜನತೆಯ ಕ್ಷಮೆ ಕೋರಬೇಕು ಎಂದು ಹೇಳಿದರು.

ಭೂಸ್ವಾಧೀನ ಕೈಬಿಟ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕಮಾರಸ್ವಾಮಿ ತಮ್ಮ ವಿರುದ್ಧ, ಎರಡು ರೀತಿಯ ಸಹಿ ಮಾಡಿರುವ ಆರೋಪ ಹೊರಿಸಿದ್ದು, ಅವರು ಮುಖ್ಯಮಂತ್ರಿಯಾಗಿದ್ದ  ಸಂದರ್ಭದಲ್ಲಿ ಎರಡು ರೀತಿಯ ಸಹಿ ಮಾಡಿದ ಉದಾಹರಣೆಗಳಿವೆ ಎಂದು ಯಡಿಯೂರಪ್ಪ ಕೆಲವು ದಾಖಲೆ ಪ್ರತಿಗಳನ್ನು ಮಾಧ್ಯಮಗಳ ಮುಂದಿಟ್ಟರು.

ಜೆಡಿಎಸ್ ವಿರುದ್ಧ ದೇವೇಗೌಡರ ಹಾಗೂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮತ್ತೆ ಜೆಡಿಎಸ್ ಜೊತೆ ಕೈಜೋಡಿಸಿದಂತೆ ಕಾಂಗ್ರೆಸ್‌ಗೆ ಕಿವಿ ಮಾತು ಹೇಳಿದರು. ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವ ವಿಶ್ವಾಸ ತಮಗಿದೆ ಎಂದರು. 

 ಮುಖಪುಟ /ಸುದ್ದಿ ಸಮಾಚಾರ