ಮುಖಪುಟ /ಸುದ್ದಿ ಸಮಾಚಾರ   
 

ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚನೆ?

ಕನ್ನಡರತ್ನವಾರ್ತೆ, ಬೆಂಗಳೂರು, ಅ.೬ : ಬಿಜೆಪಿಯ ಚುನಾಯಿತ ಶಾಸಕರೆ ತಮ್ಮ ಸರ್ಕಾರಕ್ಕೆ ಬೆಂಬಲ ವಾಪಸು ಪಡೆದ ಅನಿರೀಕ್ಷಿತ ರಾಜಕೀಯ ನಾಟಕದ ನಂತರ ಮುಂದೇನು ಎಂಬ ಪ್ರಶ್ನೆ ಉದ್ಭವಿಸಿದೆ. ಜೆಡಿಎಸ್ - ಕಾಂಗ್ರೆಸ್ ಒಟ್ಟಾಗಿ ಸರ್ಕಾರ ರಚಿಸಬಹುದು ಎಂಬ ನಿರೀಕ್ಷೆಯೂ ಜನರಲ್ಲಿದೆ.

ಈ ನಿರೀಕ್ಷೆ ನಿಜವಾಗುವ ಎಲ್ಲ ಸಾಧ್ಯತೆಗಳೂ ಇವೆ. ಬಂಡಾಯ ಎದ್ದಿರುವ ಬಿಜೆಪಿ ಶಾಸಕರ ಪೈಕಿ ಅರ್ಧದಷ್ಟು ಜನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಕಾಂಗ್ರೆಸ್ ಸೇರಿದರೆ, ಜೆಡಿಎಸ್ ಜೊತೆ ಕೈಜೋಡಿಸಿ ಪರ್ಯಾಯ ಸರ್ಕಾರ ರಚಿಸಲು ಮುಂದಾಗುವ ಸೂಚನೆಯನ್ನು ಕಾಂಗ್ರೆಸ್ ನೀಡಿದೆ ಎಂದು ತಿಳಿದುಬಂದಿದೆ.

ಈಗಾಗಲೇ ಈ ಸಂಬಂಧ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಈ ಎಲ್ಲ ವಿಷಯವನ್ನು ಇತ್ತೀಚೆಗೆ ದೆಹಲಿಗೆ ಹೋಗಿದ್ದ ಸಿದ್ದರಾಮಯ್ಯ ಪಕ್ಷದ ವರಿಷ್ಠರಿಗೂ ತಿಳಿಸಿದ್ದರು. ಅವರ ಅನುಮತಿ ಪಡೆದ ಬಳಿಕವೇ ಈ ಎಲ್ಲ ಘಟನಾವಳಿಗಳು ನಡೆದಿದೆ ಎಂದು ತಿಳಿದುಬಂದಿದೆ. ಜೆಡಿಎಸ್ ಮುಖಂಡ ಎಂ.ಸಿ. ನಾಣಯ್ಯ ಹಾಗೂ ಸಿದ್ದರಾಮಯ್ಯ ರಹಸ್ಯ ಭೇಟಿಯೂ ಇದಕ್ಕೆ ಪುಷ್ಟಿ ನೀಡಿದೆ.

ಈ ಎರಡು ಪಕ್ಷಗಳ ನಡುವೆ ಆಗಿರುವ ಒಳ ಒಪ್ಪಂದದ ರೀತ್ಯ ಬಿಜೆಪಿಯಿಂದ ರಾಜೀನಾಮೆ ನೀಡುವ ಶಾಸಕರಿಗೆ, ಕಾಂಗ್ರೆಸ್ ಪಕ್ಷ ಅಥವಾ ಜೆಡಿಎಸ್ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡಲಾಗಿದೆ. ಅವರು ತಾವು ಆಯ್ಕೆ ಮಾಡಿಕೊಂಡ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವ ಆಶ್ವಾಸನೆಯನ್ನೂ ನೀಡಲಾಗಿದೆ ಎಂದು ತಿಳಿದುಬಂದಿದೆ.

ರಾಜು ಗೌಡ, ವೆಂಕಟರಮಣಪ್ಪ ಹಾಗೂ ನರೇಂದ್ರಸ್ವಾಮಿ ಅವರು ಕಾಂಗ್ರೆಸ್ ಟಿಕೆಟ್ ಆಶ್ವಾಸನೆ ಸಿಕ್ಕೆದೆ ಎಂದೂ ಗೊತ್ತಾಗಿದೆ. ಹೊಸ ಸರ್ಕಾರದಲ್ಲಿ ಸಚಿವರಾಗ ಬಯಸುವವರು ಬಿಜೆಪಿ ಸಂಬಂಧ ತೊರೆದುಕೊಂಡು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬರಬೇಕು ಎಂಬ ಷರತ್ತು ಹಾಕಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ತಂತ್ರ

ಮತ್ತೊಂದು ಮೂಲಗಳ ರೀತ್ಯ, ರಾಜ್ಯದ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಕಾಂಗ್ರೆಸ್ ಆತುರ ಪಡೆದಿರಲು ನಿರ್ಧರಿಸಿದೆ. ಬಿಜೆಪಿ ಶಾಸಕರು ರಾಜೀನಾಮೆ ನೀಡಿ ಸಂವಿಧಾನ ಬಿಕ್ಕಟ್ಟು ಉದ್ಭವವಾದರೆ, ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತಂದು, ರಾಜ್ಯದಲ್ಲಿ ಕಾಂಗ್ರೆಸ್ ವಾತಾವರಣ ಸೃಷ್ಟಿಸಿ ೬ ತಿಂಗಳ ಬಳಿಕ ಚುನಾವಣೆಗೆ ಹೋಗುವ ಹುನ್ನಾರ ಕಾಂಗ್ರೆಸ್ ಮಾಡಿದೆ ಎಂದೂ ತಿಳಿದುಬಂದಿದೆ. ಈ ಎಲ್ಲ ಪ್ರಶ್ನೆಗಳಿಗೂ ಅ.೧೨ರಂದು ಉತ್ತರ ಸಿಗಲಿದೆ.

ಬಿಜೆಪಿ ತಂತ್ರ

ಈ ಮಧ್ಯೆ ಶತಾಯಗತಾಯ ಬಿಜೆಪಿ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವ ಬಿಜೆಪಿ ವರಿಷ್ಠರು, ಹಿರಿಯ ಪಕ್ಷ ನಿಷ್ಠರಿಂದ ರಾಜೀನಾಮೆ ಪಡೆದು, ಬಂಡಾಯ ಶಾಸಕರಿಗೆ ಮಂತ್ರಿ ಸ್ಥಾನ ನೀಡುವಂತೆ ಸೂಚಿಸಿದೆ ಎಂದು ತಿಳಿದುಬಂದಿದೆ. ಮೈಸೂರಿನ ಶಂಕರಲಿಂಗೇಗೌಡ ಅವರ ಪುತ್ರನಿಗೆ ಮೂಡಾ (ಮೈಸೂರು ಅಭಿವೃದ್ಧಿ ಪ್ರಾಧಿಕಾರ)ದ ಅಧ್ಯಕ್ಷಗಿರಿಯ ಆಮಿಷ ನೀಡಿದ್ದು, ಶಂಕರಲಿಂಗೇಗೌಡರ ಪುತ್ರ ತಮ್ಮ ತಂದೆಯ ಮನವೊಲಿಕೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ ಪ್ರತಿಪಕ್ಷಗಳ ಶಾಸಕರನ್ನೇ ಪಕ್ಷಕ್ಕೆ ಸೆಳೆಯಲೂ ಬಿಜೆಪಿ ಮುಂದಾಗಿದೆ.

 ಮುಖಪುಟ /ಸುದ್ದಿ ಸಮಾಚಾರ