ಮುಖಪುಟ /ಸುದ್ದಿ ಸಮಾಚಾರ   
 

ಯಡ್ಡಿಯಿಂದ ಟೆಲಿಫೋನ್ ಕದ್ದಾಲಿಕೆ - ಎಚ್.ಡಿ.ಕೆ.

kumaraswamyಬೆಂಗಳೂರು, ಅ.೫ - ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಹಾಗೂ ಪ್ರತಿಪಕ್ಷ ನಾಯಕರ ಟೆಲಿಫೋನ್ ಕದ್ದಾಲಿಕೆಯಲ್ಲಿ ತೊಡಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಸಚಿವ ಸಂಪುಟದ ತುರ್ತು ಸಭೆಯ ಬಳಿಕ ಮುಖ್ಯಮಂತ್ರಿಗಳು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆಗಳ ಬಗ್ಗೆ ಖಾರವಾಗೇ ಪ್ರತಿಕ್ರಿಯೆ ನೀಡಿದರು.

ದೇವೇಗೌಡರು ಮತ್ತು ಅವರ ಮಕ್ಕಳು ಸರ್ಕಾರಕ್ಕೆ ಶಾಪ ಎಂದು ಯಡಿಯೂರಪ್ಪ ಹೇಳಿದ್ದಾರೆ. ಅವರು, ಈ ರಾಜ್ಯಕ್ಕೇ ಶಾಪ ಎಂದರು.

ದೇವೇಗೌಡರ ಹಾಗೂ ಅವರ ಕುಟುಂಬದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಯಡಿಯೂರಪ್ಪನವರಿಗೆ ಇಲ್ಲ. ನಾವು ಅವರಂತೆ ಸ್ವಾರ್ಥ ರಾಜಕೀಯ ಮಾಡಿಲ್ಲ. ಮಕ್ಕಳು, ಅಳಿಯಂದಿರಿಗಾಗಿ ಕೆರೆ, ಕುಂಟೆಯನ್ನೇ ಗುಳುಂ ಮಾಡಿಲ್ಲ. ಅವರ ಮನೆಯಲ್ಲಿ ಆದಂತೆ ಯಾವುದೇ ಘಟನೆ ನಮ್ಮ ಮನೆಯಲ್ಲಿ ನಡೆದಿಲ್ಲ ಎಂದು ನೇರ ಆರೋಪ ಮಾಡಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಕೆಲಸ ನಿರ್ವಹಿಸಲು ತಾವು ಅಸಮರ್ಥ ಎಂದು ಸಾಬೀತು ಪಡಿಸಿಕೊಂಡಿದ್ದಾರೆ. ಅವರು ಪ್ರತಿಪಕ್ಷ ನಾಯಕರಾಗಿ ಕರ್ತವ್ಯ ನಿರ್ವಹಿಸಲು ಅಸಮರ್ಥರು ಎಂದು ಕುಮಾರಸ್ವಾಮಿ ಹೇಳಿದರು.

ಕೆ.ಎಸ್. ಈಶ್ವರಪ್ಪ ಅವರು ಈ ಭಗವಂತ ಬಂದರೂ ಬಿಜೆಪಿ ಸರ್ಕಾರ ಉರುಳಿಸಲು ಸಾಧ್ಯವಿಲ್ಲ. ಪ್ರತಿಪಕ್ಷಗಳು ಅಧಿಕಾರದ ಭ್ರಮೆಯಲ್ಲಿದ್ದಾರೆ ಎಂದೆಲ್ಲಾ ಮಾತನಾಡಿದರು. ಈಗ ಯಾರು ಸರ್ಕಾರ ಉರುಳಿಸುತ್ತಿದ್ದಾರೆ. ಅವರ ಪಾಪದ ಕೊಡ ತುಂಬಿ ಅವರೇ ಪತನವಾಗುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ಭಿನ್ನಮತೀಯ ಶಾಸಕರಿಗೆ ೨೦-೨೫ ಕೋಟಿ ರೂಪಾಯಿ ನೀಡಲಾಗಿದೆ ಎಂಬ ಮುಖ್ಯಮಂತ್ರಿಗಳ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಅವರು, ಆಪರೇಷನ್ ಕಮಲದಲ್ಲಿ ಏನು ಮಾಡಿದ್ದರೋ ಅದನ್ನು ಈಗ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ತಮ್ಮ ಪಕ್ಷದ ಶಾಸಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನದಲ್ಲಿ ಯಡಿಯೂರಪ್ಪ ಸಫಲರಾಗುವುದಿಲ್ಲ ಎಂದು ಹೇಳಿದರು.

 ಮುಖಪುಟ /ಸುದ್ದಿ ಸಮಾಚಾರ