ಮುಖಪುಟ /ಸುದ್ದಿ ಸಮಾಚಾರ   
 

ಯಡ್ಡಿ ತಿಪ್ಪರಲಾಗ ಹಾಕಿದರೂ ಸರ್ಕಾರ ಉಳಿಯಲ್ಲ - ಸಿದ್ದು

siddaramaiahಬೆಂಗಳೂರು, ಅ.೬ - ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮುಖ್ಯಮಂತ್ರಿ ಯಡಿಯೂರಪ್ಪ ಏನೇ ತಿಪ್ಪರಲಾಗ ಹಾಕಿದರೂ ಸರ್ಕಾರ ಉಳಿಸಿಕೊಳ್ಳುವುದು ಅಸಾಧ್ಯ ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿಂದು ಕಮಲ ಕಲಹದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಈಗ ಮತ್ತೆ ಕುದುರೆ ವ್ಯಾಪಾರಕ್ಕೆ ಮುಂದಾಗಿದೆ. ಕಾಂಗ್ರೆಸ್ ಶಾಸಕರನ್ನು ಪಕ್ಷಕ್ಕೆ ಸೆಳೆಯಲು ಮತ್ತೊಂದು ಸುತ್ತಿನ ಆಪರೇಷನ್ ಕಮಲಕ್ಕೆ ಕೈಹಾಕಿದೆ.

ನಮ್ಮ ಶಾಸಕರಿಗೆ ೨೦ರಿಂದ ೨೫ ಕೋಟಿ ರೂಪಾಯಿ ಆಮಿಷ ಒಡ್ಡುತ್ತಿದೆ. ಇವರು ಏನೇ ಮಾಡಿದರೂ ಸರ್ಕಾರ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ನಾಣಯ್ಯ ಅವರ ಭೇಟಿಗೆ ಹೆಚ್ಚಿನ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದ ಅವರು, ನಾಣಯ್ಯ ನಮ್ಮ ಹಳೆಯ ಸ್ನೇಹಿತರು ಅವರ ಮನೆಗೆ ನಾವು ನಮ್ಮ ಮನೆಗೆ ಅವರು ಹೋಗುವುದು ಸಾಮಾನ್ಯ ಎಂದು ಹೇಳಿದರು.

ರಾಜ್ಯಪಾಲರು ಮುಖ್ಯಮಂತ್ರಿಗೆ ೧೨ರೊಳಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ಹೇಳಿದ್ದಾರೆ. ಅವರು ಬಹುಮತ ಸಾಬೀತು ಪಡಿಸಲಿ ಇಲ್ಲ, ರಾಜೀನಾಮೆ ನೀಡಲಿ ಎಂದರು.

ದೇಶಪಾಂಡೆ ಮಾತನಾಡಿ, ನಾವು ಬಿಜೆಪಿಯ ಯಾವುದೇ ಶಾಸಕರೊಂದಿಗೆ ಸಂಪರ್ಕದಲ್ಲಿಲ್ಲ. ಬಿಜೆಪಿಯ ಯಾರೊಬ್ಬರೂ, ನಮ್ಮ ಶಾಸಕರನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದರು. ನೀವು ಬಂಡಾಯ ಹೋದರೆ, ನಾವು ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸೆಳೆದು ಸರ್ಕಾರ ಉಳಿಸುತ್ತೇವೆ ಎಂದು ಭೀತಿ ಹುಟ್ಟಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಇದು ತಂತ್ರ ಮಾತ್ರ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್ ಮಾತನಾಡಿ, ನಮ್ಮ ಶಾಸಕರ ಮೇಲೆ ಜಾತಿ ಆಧಾರದ ಮೇಲೆ ಒತ್ತಡ ಹೇರುವ ತಂತ್ರ ನಡೆಯುತ್ತಿದೆ. ಇದು ಹೀಗೇ ಮುಂದುವರಿದರೆ, ನಮ್ಮ ಶಾಸಕರು ಯಾರು ಯಾವ ಆಮಿಷ ಒಡ್ಡಿದರು ಎಂಬುದನ್ನು ಮಾಧ್ಯಮಗಳ ಮುಂದೆ ಪ್ರಕಟಿಸುತ್ತಾರೆ, ಸಾಕ್ಷ್ಯಗಳನ್ನೂ ಬಹಿರಂಗ ಪಡಿಸುತ್ತಾರೆ ಎಂದು ಎಚ್ಚರಿಸಿದರು.

ನಟ ಹಾಗೂ ಮಾಜಿ ಸಚಿವ ಅಂಬರೀಶ್ ಮಾತನಾಡಿ, ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರವನ್ನು ಉರುಳಿಸುವ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ನಮ್ಮಲ್ಲಿ ಒಗ್ಗಟ್ಟಿದೆ. ನಾವೆಲ್ಲರೂ ಒಮ್ಮತದಿಂದ ಇದ್ದೇವೆ. ನಮ್ಮ ಹೈಕಮಾಂಡ್ ಸೂಚಿಸಿದಂತೆ ನಾವು ನಡೆಯುತ್ತೇವೆ ಎಂದು ಸ್ಪಷ್ಟಪಡಿಸಿದರು.

ಶಾಸಕರು ರೆಸಾರ್ಟ್‌ಗೆ

ಈ ಮಧ್ಯೆ ಕಾಂಗ್ರೆಸ್ ತನ್ನ ಶಾಸಕರನ್ನು ಬಿಜೆಪಿ ಹೈಜಾಕ್ ಮಾಡುವ ಭೀತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪುಣೆಯ ಹೊರವಲಯದಲ್ಲಿರುವ ಅಂಬಿವ್ಯಾಲಿಗೆ ಕರೆದೊಯ್ದಿದೆ.

 ಮುಖಪುಟ /ಸುದ್ದಿ ಸಮಾಚಾರ