ಮುಖಪುಟ /ಸುದ್ದಿ ಸಮಾಚಾರ   
 

೧೨ರೊಳಗೆ ವಿಶ್ವಾಸಮತ ಸಾಬೀತು ಪಡಿಸಲು ರಾಜ್ಯಪಾಲರ ಸೂಚನೆ

BJPಕನ್ನಡರತ್ನವಾರ್ತೆ, ಬೆಂಗಳೂರು, ಅ.೬ :ಆಡಳಿತಾರೂಢ ಬಿಜೆಪಿಯ ೧೪ ಹಾಗೂ ಪಕ್ಷೇತರ ೫ ಮಂದಿ  ಶಾಸಕರು ಸರ್ಕಾರಕ್ಕೆ ಬೆಂಬಲ ವಾಪಸ್ ಪಡೆದ ಹಿನ್ನೆಲೆಯಲ್ಲಿ, ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು  ಅಕ್ಟೋಬರ್ ೧೨ರ ಸಂಜೆ ೫ ಗಂಟೆಯೊಳಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ.

ಈ ಸಂಬಂಧ ರಾಜಭವನದಿಂದ ಮುಖ್ಯಮಂತ್ರಿ ಅವರ ಕಾರ್ಯಾಲಯಕ್ಕೆ ಸಂದೇಶ ರವಾನಿಸಲಾಗಿದ್ದು ಸರ್ಕಾರಕ್ಕೆ ಬೆಂಬಲ ಹಿಂದೆ ಪಡೆದ ಸಚಿವರಲ್ಲಿ ರೇಣುಕಾಚಾರ್ಯ, ಆನಂದ್ ಅಸ್ನೋಟಿಕರ್, ಬಾಲಚಂದ್ರ ಜಾರಕಿಹೊಳಿ, ಶಿವರಾಜ್ ತಂಗಡಗಿ, ಸುಧಾಕರ್, ನರೇಂದ್ರಸ್ವಾಮಿ ಹಾಗೂ ವೆಂಕಟರಮಣಪ್ಪ ಸೇರಿದ್ದಾರೆ.

ಬೆಂಬಲ ಹಿಂದೆ ಪಡೆದ ಶಾಸಕರಲ್ಲಿ ಗೋಪಾಲಕೃಷ್ಣ ಬೇಳೂರು, ಡಾ. ಬಗಲಿ ಸಾರ್ವಭೌಮ, ಭರಮಗೌಡ ಕಾಗೆ, ಸಂಪಂಗಿ, ನಂಜುಂಡಸ್ವಾಮಿ, ನಾಗರಾಜು, ದೊಡ್ಡನಗೌಡ ಪಾಟೀಲ್, ಸಂಗಪ್ಪ ಕಾಳಪ್ಪ ಬೆಳ್ಳುಬ್ಬಿ, ಶಿವನಗೌಡ ನಾಯಕ್, ಶಂಕರಲಿಂಗೇಗೌಡ, ಗೂಳಿಹಟ್ಟಿ ಶೇಖರ್ ಹಾಗೂ ನರಸಿಂಹ ನಾಯಕ್ ಸೇರಿದ್ದಾರೆ.

ಅಲ್ಪಮತಕ್ಕೆ ಕುಸಿದ ಸರ್ಕಾರ

ಸರ್ಕಾರಕ್ಕೆ ೧೯ ಶಾಸಕರು ಬೆಂಬಲ ವಾಪಸ್ ಪಡೆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪ ನೇತೃತ್ವದ ೨೮ ತಿಂಗಳ ಬಿಜೆಪಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ.

೨೨೪ ಸದಸ್ಯ ಸ್ಥಾನದ ವಿಧಾನಸಭೆಯಲ್ಲಿ ಆಡಳಿತರೂಢ ಬಿಜೆಪಿ ೧೧೭, ಪ್ರತಿಪಕ್ಷಗಳಾದ ಕಾಂಗ್ರೆಸ್-೭೪, ಜೆಡಿಎಸ್-೨೮ ಸದಸ್ಯಬಲ ಹೊಂದಿದ್ದು, ಆರು ಮಂದಿ ಪಕ್ಷೇತರ ಶಾಸಕರಿದ್ದಾರೆ. 

ಕಳೆದವಾರ ನಡೆದ ಸಂಪುಟ ಪುನರ್ರಚನೆ ಸಂದರ್ಭದಲ್ಲಿ ಪಕ್ಷೇತರರಾದ  ಗೂಳಿಹಟ್ಟಿ ಶೇಖರ್ ಹಾಗೂ ಬಿಜೆಪಿಯ ಶಿವನಗೌಡ ನಾಯಕ್ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟ ನಂತರ ಬಿಜೆಪಿಯಲ್ಲಿ ಆಂತರಿಕ ಬಿಕ್ಕಟ್ಟು ಕಾಣಿಸಿಕೊಂಡಿತು.

ರಾಜ್ಯ ಬಿಜೆಪಿ ಸರ್ಕಾರ ಅಲ್ಪಮತಕ್ಕೆ ಕುಸಿದ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಪ್ರತ್ಯೇಕ ಸಭೆಗಳನ್ನು ನಡೆಸಿ, ಪರಿಸ್ಥಿತಿಯ ಪರಾಮರ್ಶೆ ನಡೆಸುತ್ತಿದ್ದಾರೆ.

ಇದಕ್ಕೂ ಮುನ್ನ ಇಂದು ಬೆಳಿಗ್ಗೆ ಸಚಿವ ಆನಂದ್ ಅಸ್ನೋಟಿಕರ್ ಪಕ್ಷದ ಕೆಲವು ಶಾಸಕರೊಂದಿಗೆ ರಾಜಭವನಕ್ಕೆ ತೆರಳಿ, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆದ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆಗೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಸರ್ಕಾರಕ್ಕೆ  ಬೆಂಬಲ ಹಿಂದೆ ಪಡೆಯುತ್ತಿರುವುದಾಗಿ ತಿಳಿಸಿದರು.

 ಮುಖಪುಟ /ಸುದ್ದಿ ಸಮಾಚಾರ