ಮುಖಪುಟ /ಸುದ್ದಿ ಸಮಾಚಾರ   
 

ಬಿಜೆಪಿಗೀಗ ರೆಡ್ಡಿ ಸಂಧಾನ ಕೊನೆಯ ಆಸರೆ

Janardhanareddyಕನ್ನಡರತ್ನವಾರ್ತೆ, ಬೆಂಗಳೂರು, ಅ.೬ :ಬಿಜೆಪಿಯಲ್ಲಿ ನಿನ್ನೆ ದಿಢೀರನೆ ಕಾಣಿಸಿಕೊಂಡ ಭಿನ್ನಮತ ಇಂದು ಸರ್ಕಾರ ಉರುಳಿಸುವ ಹಂತಕ್ಕೂ ಹೋಗಿ ಮುಟ್ಟಿದೆ. ಐವರು ಪಕ್ಷೇತರರು ಹಾಗೂ ೧೪ಮಂದಿ ಚುನಾಯಿತ ಬಿಜೆಪಿ ಶಾಸಕರೇ ಸರ್ಕಾರಕ್ಕೆ ತಮ್ಮ ಬೆಂಬಲ ವಾಪಸು ಪಡೆಯುವ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಪತನ ಸನ್ನಿಹಿತವಾಗಿದೆ.

ನಿನ್ನೆ ಚೆನ್ನೈನ ಫಾರ್ಚ್ಯೂನ್ ಫಾಂನಲ್ಲಿ ತಂಗಿದ್ದ ಅತೃಪ್ತ ಶಾಸಕರ ಮನವೊಲಿಸಲು ಹೋಗಿದ್ದ ಆರ್. ಅಶೋಕ, ಶ್ರೀರಾಮುಲು ಹಾಗೂ ಸಂಸದ ಸಿದ್ದೇಶ್ ಅವರು ಅತೃಪ್ತರ ಮನಗೆಲ್ಲುವಲ್ಲಿ ವಿಫಲರಾಗಿದ್ದು, ಇಂದು ಅತೃಪ್ತ ಶಾಸಕರ ಪ್ರತಿನಿಧಿಗಳು ರಾಜಭವನಕ್ಕೆ ಬಂದು ಬೆಂಬಲ ವಾಪಸು ಪಡೆಯುವ ಪತ್ರವನ್ನೇ ರಾಜ್ಯಪಾಲರಿಗೆ ಸಲ್ಲಿಸಿಬಿಟ್ಟರು.

ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಅ.೧೨ರ ಸಂಜೆ ೫ಗಂಟೆಯೊಳಗೆ ಬಹುಮತ ಸಾಬೀತು ಪಡಿಸಲು ಸೂಚಿಸಿದ್ದು, ಸರ್ಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಹರಸಾಹಸ ಮಾಡುತ್ತಿದ್ದಾರೆ. ಪ್ರತಿಪಕ್ಷ ಶಾಸಕರನ್ನು ಮತ್ತೆ ಪಕ್ಷಕ್ಕೆ ಸೆಳೆದು ಆಪರೇಷನ್ ಕಮಲಕ್ಕೂ ಕೈಹಾಕುವ ಸೂಚನೆಯನ್ನು ಮುಖ್ಯಮಂತ್ರಿ ನೀಡಿದ್ದಾರಾದರೂ ಅವರಿಗೆ ಈಗ ಕೊನೆಯ ಆಸರೆ ಆಗಿರುವುದು ಜನಾರ್ದನರೆಡ್ಡಿ ಮಾತ್ರ.

ಕಳೆದ ಬಾರಿ ಬಂಡಾಯದ ನೇತೃತ್ವ ವಹಿಸಿದ್ದ ಜನಾರ್ದನ ರೆಡ್ಡಿ ಈಗ, ಸರ್ಕಾರವನ್ನು ಉಳಿಸಲು ಸಂಧಾನಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಚೆನ್ನೈಗೆ ಹೋಗಿರುವ ಜನಾರ್ದನ ರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಎಲ್ಲ ಅತೃಪ್ತ ಶಾಸಕರೊಂದಿಗೆ ಮಾತನಾಡಿದ್ದೇನೆ, ಅವರ ನೋವುಗಳೇನು, ಅವರ ಬೇಡಿಕೆ ಏನು ಎಂಬುದನ್ನು ಪಕ್ಷದ ರಾಜ್ಯಾಧ್ಯಕ್ಷರಿಗೆ, ರಾಷ್ಟ್ರೀಯ ನಾಯಕರಿಗೆ ಮನವರಿಕೆ ಮಾಡಿಸಿದ್ದೇನೆ.

ಪರಿಸ್ಥಿತಿ ತಿಳಿಗೊಳಿಸಿ ಸರ್ಕಾರ ಉಳಿಸುವುದು ಈಗ ತಮ್ಮ ಪ್ರಥಮ ಆದ್ಯತೆಯಾಗಿದ್ದು, ಈ ಪ್ರಯತ್ನದಲ್ಲಿ ಯಶಸ್ವಿಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 ಮುಖಪುಟ /ಸುದ್ದಿ ಸಮಾಚಾರ