ಮುಖಪುಟ /ಸುದ್ದಿ ಸಮಾಚಾರ   
 

ಯಡ್ಡಿ ಪದಚ್ಯುತಿಗಾಗೇ ಹೋರಾಟ - ಶಿವನಗೌಡನಾಯಕ್

shivanagowdaಕನ್ನಡರತ್ನವಾರ್ತೆ, ಬೆಂಗಳೂರು, ಅ.೬ :ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ನಿಕೃಷ್ಟವಾಗಿ ಕಾಣುತ್ತಿದ್ದ ಮುಖ್ಯಮಂತ್ರಿಗೆ ತಕ್ಕ ಪಾಠ ಕಲಿಸಿದ್ದೇವೆ ಎಂದು ದೇವದುರ್ಗ ಶಾಸಕ ಹಾಗೂ ಭಿನ್ನಮತೀಯ ಮುಖಂಡ ಶಿವನಗೌಡ ನಾಯಕ್ ತಿಳಿಸಿದ್ದಾರೆ.

ಕನ್ನಡರತ್ನದೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದಿಂದ ತಮ್ಮನ್ನು ಹಾಗೂ ಗೂಳಿಹಟ್ಟಿ ಶೇಖರ್ ಅವರನ್ನು ವಜಾಗೊಳಿಸಿದ್ದೇ ಭಿನ್ನಮತೀಯ ಚಟುವಟಿಕೆಯ ಮೂಲ. ಬಿಜೆಪಿಯ ಕಷ್ಟಕಾಲದಲ್ಲಿ ನಾವು ಜೊತೆಗಿದ್ದೆವು. ಬರುವ ೫ ವರ್ಷದವರೆಗೆ ನಮ್ಮನ್ನು ಸಚಿವ ಸ್ಥಾನದಲ್ಲಿ ಮುಂದುವರಿಸುವ ಭರವಸೆ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ವಚನಭ್ರಷ್ಟರಾದರು. ನಮ್ಮನ್ನು ವಿನಾ ಕಾರಣ ಸಂಪುಟದಿಂದ ಕೈಬಿಟ್ಟು, ಅಪಮಾನಗೊಳಿಸಿದರು. ಉಪ್ಪು ತಿಂದವರು ಈಗ ನೀರು ಕುಡಿಯುತ್ತಿದ್ದಾರೆ ಎಂದು ಖಾರವಾಗೇ ನುಡಿದರು.

ನಮಗಾದ ನೋವನ್ನು ಸರಿಪಡಿಸಲು ರೇಣುಕಾಚಾರ್ಯ ಪ್ರಯತ್ನಿಸಿದರು. ನಮ್ಮನ್ನು ಕೈಬಿಡದಂತೆ ಮನವಿ ಮಾಡಿದರು, ಇದಾವುದಕ್ಕೂ ಮುಖ್ಯಮಂತ್ರಿ ಕಿವಿಗೊಡಲಿಲ್ಲ. ಈಗ ನಾವು ರೇಣುಕಾಚಾರ್ಯ ಅವರ ನೇತೃತ್ವದಲ್ಲಿ ೨೦ ಸಚಿವ, ಶಾಸಕರು ಬಂಡಾಯದ ಬಾವುಟ ಹಾರಿಸಿದೆವು. ಈ ಕ್ರಮ ನಮಗೆ ಅನಿವಾರ್ಯವಾಗಿತ್ತು. ಇದು ಸ್ವಾಭಿಮಾನದ ಹೋರಾಟ ಎಂದು ತಿಳಿಸಿದರು.

ನಮ್ಮನ್ನು ಸಚಿವ ಸಂಪುಟದಿಂದ ಕೈಬಿಡದಂತೆ ರೆಡ್ಡಿ ಸೋದರರು ಮತ್ತು ರೇಣುಕಾಚಾರ್ಯ ಪರಿಪರಿಯಾಗಿ ಮನವಿ ಮಾಡಿದರೂ ಮುಖ್ಯಮಂತ್ರಿ ಅದನ್ನು ಲೆಕ್ಕಿಸಲಿಲ್ಲ. ಅದೇ ರೀತಿ, ಗೂಳಿಹಟ್ಟಿ ಶೇಖರ್ ಅವರನ್ನೂ ಕೈಬಿಟ್ಟರು. ಜೊತೆಗೆ ಬೇಳೂರು ಗೋಪಾಲಕೃಷ್ಣಗೆ ಸಂಪುಟದಲ್ಲಿ ಸ್ಥಾನ ನೀಡದೆ, ಈಡಿಗ ಸಮುದಾಯಕ್ಕೆ ಅವಮಾನ ಮಾಡಿದರು. ಎಲ್ಲಕ್ಕಿಂತ ಮಿಗಲಾಗಿ ಕೆ.ಎಸ್. ಈಶ್ವರಪ್ಪ ನಮ್ಮನ್ನು ನಿಕೃಷ್ಟವಾಗಿ ಕಾಣುತ್ತಿದ್ದರು. ಅವರ ಹಿಟ್ಲರ್ ಧೋರಣೆ ಖಂಡಿಸಿ ನಾವು ಈ ಹೋರಾಟಕ್ಕೆ ಇಳಿಯಲೇ ಬೇಕಾಯಿತು ಎಂದು ಹೇಳಿದರು.

ಮುಖ್ಯಮಂತ್ರಿಗಳು ನಮ್ಮನ್ನು ಸಚಿವ ಸಂಪುಟದಿಂದ ಕೈಬಿಟ್ಟ ಬಳಿಕ ಕನಿಷ್ಠ ಸೌಜನ್ಯಕ್ಕಾದರೂ ನಮ್ಮ ಜೊತೆ ಸಾಂತ್ವನದ ಮಾತನಾಡಲಿಲ್ಲ. ಅದರ ಫಲವನ್ನು ಯಡಿಯೂರಪ್ಪ ಇಂದು ಅನುಭವಿಸುತ್ತಿದ್ದಾರೆ. ಅವರೆ ತಮ್ಮ  ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುತ್ತಿದ್ದಾರೆ ಎಂದು ಶಿವನಗೌಡ ಹೇಳಿದರು.

ದೇವದುರ್ಗದಲ್ಲಿ ಶಕ್ತಿ ಪ್ರದರ್ಶನ

ದೇವದುರ್ಗದಲ್ಲಿ ನನ್ನ ರಾಜಕೀಯ ಶಕ್ತಿ ಏನೆಂಬುದು ಮುಖ್ಯಮಂತ್ರಿಗೆ ತೋರಿಸಲು ನಾನು ಸಿದ್ಧ, ನನಗೆ ಕ್ಷೇತ್ರದ ಜನರ ಹಾಗೂ ಸಂತ ಶರಣರ ಆಶೀರ್ವಾದ ಇದೆ. ಕ್ಷೇತ್ರದಲ್ಲಿ ಕಳೆದ ಮೂರು ವರ್ಷದಲ್ಲಿ ನಡೆದ ಎಲ್ಲ ಚುನಾವಣೆಯಲ್ಲಿ ಬಿಜೆಪಿಗೆ ಅತ್ಯಧಿಕ ಬಹುಮತ ತಂದುಕೊಟ್ಟ ನನಗೆ ಮುಖ್ಯಮಂತ್ರಿಗಳು ಈ ರೀತಿ ಅವಮಾನ ಮಾಡಿರುವುದು ಕ್ಷೇತ್ರದ ಜನರಿಗೂ ನೋವುಂಟು ಮಾಡಿದೆ ಎಂದರು.

ಅಗತ್ಯ ಬಿದ್ದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಸ್ಪರ್ಧಿಸಿ ಚುನಾವಣೆಯಲ್ಲಿ ಸ್ಪರ್ಧಿಸಿ ನನ್ನ ಶಕ್ತಿ ಪ್ರದರ್ಶಿಸುತ್ತೇನೆ ಎಂದರು.

ನಮಗೆ ಪ್ರತಿಪಕ್ಷಗಳು ಕೋಟ್ಯಂತರ ರುಪಾಯಿ ಹಣ ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿರುವ ಮಾತು ಶುದ್ಧ ಸುಳ್ಳು. ಇಂದು ಬೆಳಗ್ಗೆ ಮುಖ್ಯಮಂತ್ರಿಗಳ ಸಂದೇಶ ಹೊತ್ತು ತಂದ ಸಂಧಾನಕಾರರು ಭಿನ್ನಮತೀಯ ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ, ಲೋಕಾಪಯೋಗಿ, ಕೈಗಾರಿಕೆ ಮತ್ತು ನೀರಾವರಿ ಖಾತೆ ನೀಡುವುದಾಗಿ ಆಮಿಷ ಒಡ್ಡಿದರೆ, ಆದರೆ, ನಾವು ಇದಕ್ಕೆ ಒಪ್ಪಲಿಲ್ಲ ಎಂದರು. ಮುಖ್ಯಮಂತ್ರಿಗಳು ನನ್ನನ್ನು ಉಪ ಮುಖ್ಯಮಂತ್ರಿ ಮಾಡಿದರೂ, ಅವರ ಸಚಿವ ಸಂಪುಟದಲ್ಲಿ ಇರಲು ನಾನು ಸಿದ್ಧನಿಲ್ಲ ಎಂದು ಕನ್ನಡರತ್ನಕ್ಕೆ ಸ್ಪಷ್ಟಪಡಿಸಿದರು.

ಕಳೆದ ವರ್ಷದ ಕಹಿ ಅನುಭವದಿಂದ ಎಚ್ಚೆತ್ತುಕೊಂಡ ನಾವು ಪುನಾ ಮುಖ್ಯಮಂತ್ರಿಗಳ ಯಾವುದೇ ತಾತ್ಕಾಲಿಕ ಭರವಸೆಗೆ ಈಡಾಗುವುದಿಲ್ಲ. ಯಡಿಯೂರಪ್ಪ ನಾಯಕತ್ವ ಬದಲಾವಣೆ ಆಗುವ ತನಕ ನಮ್ಮ ಹೋರಾಟ ನಿಲ್ಲದು ಎಂದು ಹೇಳಿದರು. ನಮ್ಮ ನಿಲುವಲ್ಲಿ ಯಾವುದೇ ಕಾರಣಕ್ಕೂ ಬದಲಾವಣೆ ಇಲ್ಲ ಎಂದು ಹೇಳಿದರು. 

 ಮುಖಪುಟ /ಸುದ್ದಿ ಸಮಾಚಾರ