ಮುಖಪುಟ /ಸುದ್ದಿ ಸಮಾಚಾರ   
 

ಚಂದನದಲ್ಲಿ ನಿತ್ಯ ಮಂಕುತಿಮ್ಮನ ಕಗ್ಗ - ಮಹೇಶ್ ಜೋಶಿ

S.V.Jayasheelarao, Dr.N.S.Lakshminarayana bhatt felicitation function. Dr. Mahesh Joshi and Manu Baligar were present at the functionಬೆಂಗಳೂರು, .31: ಜೀವನ ಸತ್ಯವನ್ನು ಸಾರುವ ಡಿ.ವಿ.ಗುಂಡಪ್ಪನವರ ಮಂಕುತಿಮ್ಮನ ಕಗ್ಗವನ್ನು ಶೀಘ್ರವೇ ಚಂದನ ವಾಹಿನಿಯಲ್ಲಿ ಪ್ರತಿನಿತ್ಯ ಪ್ರಸಾರ ಮಾಡಲಾಗುವುದು ಎಂದು ಬೆಂಗಳೂರು ದೂರದರ್ಶನ ಕೇಂದ್ರದ ಹಿರಿಯ ನಿರ್ದೇಶಕ ಡಾ. ಮಹೇಶ್ ಜೋಶಿ ಹೇಳಿದ್ದಾರೆ.

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿಂದು ಡಿ.ವಿ.ಜಿ. ವೇದಿಕೆ ಏರ್ಪಡಿಸಿದ್ದ  ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದ ಭಗವದ್ಗೀತೆ ಎಂದೇ ಖ್ಯಾತವಾದ ಮಂಕುತಿಮ್ಮನ ಕಗ್ಗದ ವಾಚನ ಹಾಗೂ ವ್ಯಾಖ್ಯಾನವನ್ನು ಪ್ರತಿನಿತ್ಯ ಪ್ರಸಾರ ಮಾಡುವ ಮೂಲಕ, ನಾಡಿನ ಜನತೆಗೆ  ವಿರಕ್ತ ರಾಷ್ಟ್ರಕನ ಸುಂದರ ಮುಕ್ತಕಗಳನ್ನು ಪರಿಚಯಿಸಲಾಗುವುದು ಎಂದರು.ಬೆಟ್ಟದಲಿ ಹುಲ್ಲಾಗಿ, ಮನೆಗೆ ಮಲ್ಲಿಗೆಯಾಗಿ, ಕಷ್ಟಗಳನ್ನು ವಿಧಿ ಸುರಿಸಿದಾಗಲೂ ಕಲ್ಲಾದ ಡಿ.ವಿ.ಜಿ. ಮನುಷ್ಯ ಹೇಗೆ ಬದುಕಬೇಕೆಂದು ಸಾಧಿಸಿ ತೋರಿಸಿದರೆಂದರು.

ಎಸ್.ವಿ. ಜಯಶೀಲರಾವ್ ಅವರು ತಮ್ಮ ಹೆಸರಿನಲ್ಲೇ ಶೀಲವನ್ನು ಹಾಗೂ ಜಯವನ್ನು ಹೊಂದಿದ್ದಾರೆ. ಪತ್ರಿಕೋದ್ಯಮದಲ್ಲಿ ಶೀಲವಂತರಾಗಿ, ಜಯ ಸಾಧಿಸಿದ ಸದ್ಗುಣಿ ಅವರಾದರೆ, ಡಾ. ಲಕ್ಷ್ಮೀನಾರಾಯಣ ಭಟ್ಟರು,  ಕಳಸದ ಗುರುಗೋವಿಂದ ಭಟ್ಟರ ಅಂತರಂಗದ ಶಿಷ್ಯರಾದ ಸಂತ ಶಿಶುನಾಳ ಷರೀಫರ ಗೀತೆಗಳನ್ನು ಸಂಗ್ರಹಿಸಿ ನಾಡಿನ ಜನರಿಗೆ ಒಪ್ಪಿಸಿದ ಶ್ರೇಷ್ಠ ಕವಿ ಎಂದು ಬಣ್ಣಿಸಿದರು. ಇಂಥ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶ ದೊರಕಿದ್ದು ತಮ್ಮ ಸುದೈವ ಎಂದು ಅಭಿಪ್ರಾಯಪಟ್ಟರು.

ಟಿ.ಎಸ್.ಆರ್. ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಎಸ್.ವಿ.ಜಯಶೀಲರಾವ್ ಹಾಗೂ ಕವಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ ಅವರಿಗೆ ಡಿ.ವಿ.ಗುಂಡಪ್ಪ ಪ್ರಶಸ್ತಿ ಪ್ರದಾನ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ, ಮನು ಬಾಳಿಗಾರ್, ಕನ್ನಡ ಸಾಹಿತ್ಯಕ್ಕೆ ಅದ್ಭುತ ಕೊಡುಗೆ ನೀಡಿದ ಡಿ.ವಿ.ಜಿ. ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಾರದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ ಅವರಿಗೆ ಈವರೆಗೆ ಕರ್ನಾಟಕ ಸಾಹಿತ್ಯ ಅಕಾಡಮಿಯ ಪ್ರಶಸ್ತಿಯೇ ಸಿಕ್ಕಿಲ್ಲ, ಆದರೆ, ಅವರ ಹಲವು ಶಿಷ್ಯರು ಈ ಪ್ರಶಸ್ತಿ ಪಡೆದಿದ್ದಾರೆ. ಈ ಬಾರಿಯಾದರೂ ಭಟ್ಟರನ್ನು ಅಕಾಡಮಿ ಗುರುತಿಸಬೇಕು ಎಂದರು.

ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿದ ಎಸ್.ವಿ. ಜಯಶೀಲರಾವ್ ಸಾಧನೆ ಅಪೂರ್ವ, ಅನುಕರಣೀಯ ಎಂದವರು ವಿಶ್ಲೇಷಿಸಿದರು.

ಪ್ರಶಸ್ತಿ ಪುರಸ್ಕೃತರಾದ ಎಸ್.ವಿ. ಜಯಶೀಲರಾವ್, ಡಿ.ವಿ.ಜಿ. ಅವರು ಎಲ್ಲರನ್ನೂ ಮಾನವೀಯತೆಯಿಂದ ಕಂಡ ಮಹಾನ್ ವ್ಯಕ್ತಿ, ಲೋಕದ ಎಲ್ಲ ಮಕ್ಕಳೂ ತಮ್ಮವರೆಂಬ ಭಾವನೆ ಬೆಳೆಸಿಕೊಳ್ಳುವಂತೆ ಹೇಳುತ್ತಿದ್ದ ಡಿ.ವಿ.ಜಿ. ವಿಶ್ವ ಮಾನವತಾ ಧರ್ಮ ಸಾರಿದ ಮೇರು ವ್ಯಕ್ತಿ ಎಂದರು.

ಸುವರ್ಣ ಸಂಭ್ರಮದಲ್ಲಿರುವ ದೂರದರ್ಶನ ಗ್ರಾಮೀಣ ಪ್ರದೇಶದ ಜನರಲ್ಲಿ ಜನಜಾಗೃತಿ ಹಾಗೂ ಆಧುನಿಕತೆಯ ಅರಿವು ಮೂಡಿಸುವಲ್ಲಿ ನೀಡಿರುವ ಕೊಡುಗೆ ಅನುಪಮ. ಈಗ ನಿತ್ಯ ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗವನ್ನು ಪ್ರಸಾರ ಮಾಡುವ ನಿರ್ದೇಶಕರ ನಿರ್ಧಾರ ನಿಜಕ್ಕೂ ಪ್ರಶಂಸನಾರ್ಹ ಎಂದರು.

ಡಾ.ಲಕ್ಷ್ಮೀನಾರಾಯಣ ಭಟ್ ಅವರು, ಡಿವಿಜಿ ಅವರಿಗೆ ನುಡಿ ನಮನ ಅರ್ಪಿಸಿದರು. ಹಿರಿಯ ಪತ್ರಕರ್ತರಾದ ನಾಗಮಣಿ ಎಸ್.ರಾವ್, ಟಿ.ನಾಗರಾಜ್, ರಂಗನಾಥ್, ಕನ್ನಡ ಸಾಹಿತ್ಯ ಪರಿಷತ್ ನಗರ ಜಿಲ್ಲಾಧ್ಯಕ್ಷ ಸಿ.ಕೆ. ರಾಮೇಗೌಡ ಮತ್ತಿತರರು ಪಾಲ್ಗೊಂಡಿದ್ದರು.

ಮುಖಪುಟ /ಸುದ್ದಿ ಸಮಾಚಾರ