ಮುಖಪುಟ /ಸುದ್ದಿ ಸಮಾಚಾರ   
 

ಜನತೆಯ ಸಮಸ್ಯೆಗಳಿಗೆ ಸ್ಪಂದಿಸಬೇಕು -ಶಾಸಕ ವಿಶ್ವನಾಥ್

ಬೆಂಗಳೂರು, ಅ.19: ಜನತೆಯ ಸಮಸ್ಯೆಗಳಿಗೆ ಅದರಲ್ಲೂ ಗ್ರಾಮೀಣ ಪ್ರದೇಶದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ, ಸಮಸ್ಯೆಗಳನ್ನು ನಿವಾರಣೆ ಮಾಡುವುದೇ ನನ್ನ ಆಧ್ಯ ಕರ್ತವ್ಯವಾಗಿದೆ ಎಂದು ಯಲಹಂಕ ಕ್ಷೇತ್ರದ ಶಾಸಕ ಶ್ರೀ ಎಸ್. ಆರ್. ವಿಶ್ವನಾಥ್ ಅವರು ತಿಳಿಸಿದರು.

ಇಂದು ಯಲಹಂಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪ್ರಜಾವಾಣಿ ಹಾಗೂ ಡೆಕ್ಕನ್‌ಹೆರಾಲ್ಡ್, ಸಮೂಹದ ಪ್ರಾಯೋಜಿಸಿದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಯಲಹಂಕ ಉಪನಗರ ಹಾಗೂ ಹಳೆ ನಗರಗಳ ಮಧ್ಯೆ ನನಗೆ ಯಾವುದೇ ತಾರತಮ್ಯ ಇಲ್ಲ ಎರಡೂ ನಗರಗಳನ್ನು ಮಾದರಿ ನಗರವನ್ನಾಗಿ ಅಭಿವೃದ್ಧಿಪಡಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಅವರು ಘೋಷಿಸಿದರು.  ತಮ್ಮ ಸರ್ಕಾರ ಬಂದ ನಾಲ್ಕು ತಿಂಗಳುಗಳ ಅವಧಿಯಲ್ಲಿಯೇ ಸುಮಾರು ೧೦೦ ಕೋಟಿ ರೂಗಳಿಗೂ ಹೆಚ್ಚು ಅನುದಾನದ ಮಂಜೂರಾತಿ ಪಡೆದು ರಸ್ತೆ ಅಗಲೀಕರಣ, ಚರಂಡಿ ನಿರ್ಮಾಣ, ರಸ್ತೆಗಳನ್ನು ಉನ್ನತೀಕರಿಸುವುದು, ಕುಡಿಯುವ ನೀರಿನ ಸಮರ್ಪಕ ವಿತರಣೆ, ಗುಣಮಟ್ಟದ ವಿದ್ಯುತ್ ಸರಬರಾಜು, ಬೀದಿ ದೀಪಗಳನ್ನು ಅಳವಡಿಸುವುದು, ಪಾರ್ಕ್‌ಗಳ ಸಮರ್ಪಕ ನಿರ್ವಹಣೆ, ಕೆರೆ ಅಭಿವೃದ್ಧಿ, ಅಲ್ಲದೇ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನತೆಗೆ ಮುಚ್ಚಿಸಲು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಶಾಲಾ ಕಟ್ಟಡದಲ್ಲಿಯೇ ಕಾಲೇಜು ನಡೆಯುತ್ತಿರುವ ಹಿನ್ನೆಲೆಯಲ್ಲಿ ತೊಂದರೆ ಉಂಟಾಗಿದ್ದು, ಕಾಲೇಜಿಗಾಗಿ ಪ್ರತ್ಯೇಕ ಸ್ಥಳಾವಕಾಶ ಒದಗಿಸುವುದು ಬಹಳ ಅವಶ್ಯಕವಿದ್ದು, ಈ ಕುರಿತು ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದೆಂದು ಶಾಸಕರು ತಿಳಿಸಿದರು.

ಶಾಸಕರು ಈ ಸಂದರ್ಭದಲ್ಲಿ ನಾಗರೀಕರ ಅಹವಾಲುಗಳನ್ನು ಸ್ವೀಕರಿಸಿ ಜನತೆಯ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಹಾಗೂ ಸಂಧ್ಯಾ ಸುರಕ್ಷ ಯೋಜನೆಯಡಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿದರು.

ಸಭೆಯಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಗಣ್ಯರು ಹಾಗೂ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.  ಪ್ರಾರಂಭದಲ್ಲಿ ಪ್ರಜಾವಾಣಿ ಪತ್ರಿಕೆಯ ಸಹಸಂಪಾದಕ ಶ್ರೀ ಪದ್ಮರಾಜ್ ದಂಡಾವತೆ ಅವರು ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ ಅತಿಥಿಗಳನ್ನು ಸ್ವಾಗತಿಸಿದರು.

ಮುಖಪುಟ /ಸುದ್ದಿ ಸಮಾಚಾರ