ಮುಖಪುಟ /ಸುದ್ದಿ ಸಮಾಚಾರ   
 

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ
ಕೇಂದ್ರದಿಂದ ಕನ್ನಡಿಗರಿಗೆ ರಾಜ್ಯೋತ್ಸವ ಕೊಡುಗೆ

ನವದೆಹಲಿ:  ಕೊನೆಗೂ ಕನ್ನಡಿಗರ ಬಹುದಿನಗಳ ಬೇಡಿಕೆ ಈಡೇರಿದೆ. ಸಮಸ್ತ  ಕನ್ನಡಿಗರ, ಕನ್ನಡ ಸಾಹಿತಿಗಳ, ಕಲಾವಿದರ ಹಾಗೂ ಕನ್ನಡಪರ ಸಂಸ್ಥೆಗಳ ಹೋರಾಟಕ್ಕೆ ಜಯ ಸಂದಿದೆ.

ಕೇಂದ್ರ ಸರ್ಕಾರ ರಾಜ್ಯೋತ್ಸವದ ಮುನ್ನಾ ದಿನವಾದ ಇಂದು ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸ ಇರುವ ಕನ್ನಡಕ್ಕೆ ಅಧಿಕೃತವಾಗಿ ಶಾಸ್ತ್ರೀಯ ಭಾಷೆಯ ಸ್ಥಾನ ಮಾನ ನೀಡಿ ಗೌರವಿಸಿದೆ.

ದೆಹಲಿಯಲ್ಲಿಂದು ಕೇಂದ್ರ ಸಂಸ್ಕೃತಿ ಸಚಿವೆ ಅಂಬಿಕಾ ಸೋನಿ, ಕನ್ನಡ ಮತ್ತು ತೆಲುಗು ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನ ಮಾನ ನೀಡಲಾಗಿದೆ ಎಂದು ಅಧಿಕೃತವಾಗಿ ಘೋಷಿಸಿದರು.

ವಿಷಯ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ರಾಜ್ಯದಲ್ಲಿ ಕನ್ನಡ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. ರಾಜ್ಯೋತ್ಸವಕ್ಕೆ ಒಂದು ದಿನ ಮೊದಲೇ ರಾಜ್ಯದ ರಾಜಧಾನಿಯಲ್ಲಿ ಕನ್ನಡ ಬಾವುಟಗಳು ರಾರಾಜಿಸಿದವು.

ವಿಷಯ ತಿಳಿದ ಕೂಡಲೇ ತುರ್ತು ಪತ್ರಿಕಾಗೋಷ್ಠಿ ಕರೆದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನಾಳಿನ ರಾಜ್ಯೋತ್ಸವ ವಿಜಯೋತ್ಸವವಾಗಿ ಮಾರ್ಪಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನ ನೀಡಿದ ಪ್ರಧಾನಿ ಡಾ. ಮನಮೋಹನಸಿಂಗ್ ಅವರನ್ನು ಅಭಿನಂದಿಸಿದರು.

ಕೆ.ಪಿ.ಸಿ.ಸಿ. ಅಧ್ಯಕ್ಷ ಆರ್.ವಿ. ದೇಶಪಾಂಡೆ ಅವರೂ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕನ್ನಡಿಗರಿಗೆ ರಾಜ್ಯೋತ್ಸವದ ಕೊಡುಗೆ ನೀಡಿದ ಯು.ಪಿ.ಎ. ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಇದು ಸಮಸ್ತ ಕನ್ನಡಿಗರ ಹೋರಾಟಕ್ಕೆ ಸಂದ ಜಯ ಎಂದು ಕನ್ನಡ ಪರ ಸಂಘಟನೆಗಳು ಸಂತಸ ವ್ಯಕ್ತಪಡಿಸಿವೆ. ಸರೋಜಿನಿ ಮಹಿಷಿ ವರದಿಯನ್ನೂ ಕೂಡಲೇ ಜಾರಿಗೆ ತರುವಂತೆ ಆಗ್ರಹಿಸಿವೆ.

ಚಲನಚಿತ್ರ ನಟಿಯರಾದ ತಾರಾ, ಜಯಮಾಲ ಮೊದಲಾದ ಕಲಾವಿದರೂ ಕೇಂದ್ರವನ್ನು ಅಭಿನಂದಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಲ್ಲೂರು ಪ್ರಸಾದ್ ಕನ್ನಡಕ್ಕೆ ಎಂದೋ ಈ ಸ್ಥಾನ ದೊರೆಯಬೇಕಿತ್ತು. ತಡವಾದರೂ ಕನ್ನಡಿಗರೆಲ್ಲರ ಹೋರಾಟಕ್ಕೆ ಕೊನೆಗೂ ಜಯ ಸಂದಿದೆ ಎಂದು ಹೇಳಿದ್ದಾರೆ.

ಮುಖಪುಟ /ಸುದ್ದಿ ಸಮಾಚಾರ