ಮುಖಪುಟ /ಸುದ್ದಿ ಸಮಾಚಾರ   
 

ಆರ್ಥಿಕ ಹಿನ್ನಡೆ ನಡುವೆಯೂ ನ. ೬ರಿಂದ ಬೆಂಗಳೂರಿನಲ್ಲಿ ಐಟಿ.ಬಿಜ್

ಬೆಂಗಳೂರು : ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ ೬ರಿಂದ ೮ರ ವರೆಗೆ ಐಟಿ.ಬಿಜ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಆರ್ಥಿಕ ಹಿಂಜರಿತವಿದ್ದರೂ ರಾಜ್ಯದಲ್ಲಿ ಸುಮಾರು ೫೦ ಸಾವಿರ ಕೋಟಿ ರೂಪಾಯಿ ಹೂಡಿಕೆಯಾಗುವ ಸಾಧ್ಯತೆ ಇದೆ ಎಂದು ವಾರ್ತಾ, ಐಟಿ, ಬಿಟಿ ಮತ್ತು ಅಬಕಾರಿ ಸಚಿವ ಶ್ರೀ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಈ ಕಾರ್ಯಕ್ರಮದಲ್ಲಿ ಸುಮಾರು ೧೫ ಸಾವಿರ ಉದ್ಯಮಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಮೆಕ್ಸಿಕೋ ದೇಶ ನಿಯೋಗವೂ ಐಟಿ.ಬಿಜ್‌ನಲ್ಲಿ ಪಾಲ್ಗೊಳ್ಳಲಿದೆ. ೧೨ ಸಾವಿರ ಚದರ ಮೀಟರ್ ವಿಸ್ತಾರದಲ್ಲಿ ಐಟಿ.ಬಿಜ್ ನಡೆಯಲಿದ್ದು, ೬ ಸಾವಿರ ಚದರ ಮೀಟರ್ ಪ್ರದೇಶದಲ್ಲಿ ಪ್ರದರ್ಶನಮಳಿಗೆಗಳು, ೪ ಸಾವಿರ ಚದರ ಮೀಟರ್ ಪ್ರದೇಶದಲ್ಲಿ ಸಮಾರಂಭ ಹಾಗೂ ೨ ಸಾವಿರ ಚದರ ಮೀಟರ್ ಪ್ರದೇಶದಲ್ಲಿ ವಿಚಾರಸಂಕಿರಣಗಳು ನಡೆಯಲಿವೆ. ಈ ಮೂರು ದಿನಗಳಲ್ಲಿ ೬೫ ಮಂದಿ ತಜ್ಞರು ತಮ್ಮ ವಿಚಾರ ಮಂಡಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.

ಐಟಿ. ಬಿಜ್‌ನಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದು, ಗ್ರಾಮೀಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಐಟಿ ರಸಪ್ರಶ್ನೆ ಕಾರ್ಯಕ್ರಮ ನಡೆಸಿದೆ. ಇದರಲ್ಲಿ ೧೦ ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ ಎಂದು ಅವರು ನುಡಿದರು.

ರಾಜ್ಯದ ಐಟಿ ಕಂಪೆನಿಗಳಿಂದ ಅವರ ಸಮಸ್ಯೆಗಳು, ವಿಸ್ತರಣಾ ಯೋಜನೆಗಳು ಹಾಗೂ ಸುಸ್ಥಿರತೆಯ ಬಗ್ಗೆ ಸವಿವರವಾದ ವರದಿಯನ್ನು ಮಾಹಿತಿ ತಂತ್ರಜ್ಞಾನ ಇಲಾಖೆಯು ತರಿಸಿಕೊಳ್ಳುತ್ತಿದ್ದು, ಈ ಅಭಿಪ್ರಾಯ ಸಂಗ್ರಹಣೆಯ ಆಧಾರದ ಮೇಲೆ ಐಟಿ ಉದ್ಯಮಕ್ಕೆ ಒದಗಿಸಬೇಕಾದ ಸೌಲಭ್ಯಗಳ ಕುರಿತು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.

ಏಕ ಗವಾಕ್ಷಿ ಯೋಜನೆ: ಐಟಿ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರವು ಏಕ ಗವಾಕ್ಷಿ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಿದ್ದು, ಎರಡು ತಿಂಗಳೊಳಗೆ ಇದನ್ನು ಐಟಿ ಬಿಟಿ ಪ್ರಾಧಿಕಾರವನ್ನು ರಚಿಸಲಾಗುವುದು. ರಾಜ್ಯ ಕೈಗಾರಿಕಾ ನೀತಿಗೆ ತೊಂದರೆಯಾಗದಂತೆ ಐಟಿ, ಬಿಟಿ ನೀತಿ ಹಾಗೂ ಸೆಮಿಕಂಡಕ್ಟರ್ ನೀತಿಯನ್ನೂ ರೂಪಿಸಲಾಗುವುದು. ಇದಲ್ಲದೆ ಐಟಿ ಕಂಪೆನಿಗಳಿಗೆ ಜಮೀನು ಒದಗಿಸುವ ಸಲುವಾಗಿ ಭೂಸ್ವಾಧೀನ ಕಾಯ್ದೆಗಳಲ್ಲಿ ತಿದ್ದುಪಡಿ ಮಾಡುವ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಹಾಗೂ ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು.

ಕರ್ನಾಟಕ ರಾಜ್ಯವು ಮಾಹಿತಿ ತಂತ್ರಜ್ಞಾನ ರಫ್ತಿನಲ್ಲಿ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದು, ಸದ್ಯ ಆರ್ಥಿಕ ಹಿಂಜರಿತದ ದುಷ್ಪರಿಣಾಮಗಳು ಇನ್ನೂ ರಾಜ್ಯದ ಐಟಿ ಉದ್ಯಮಗಳನ್ನು ತಟ್ಟಿಲ್ಲ. ಆದರೆ ಕಂಪೆನಿಗಳು ಹಲವಾರು ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದ್ದು, ಜಾಗತಿಕ ಆರ್ಥಿಕ ವಲಯದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ ಎಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಅಶೋಕ್ ಕುಮಾರ್ ಸಿ. ಮನೋಳಿ ಅವರು ತಿಳಿಸಿದರು. 

ಮುಖಪುಟ /ಸುದ್ದಿ ಸಮಾಚಾರ