ಮುಖಪುಟ /ಸುದ್ದಿ ಸಮಾಚಾರ   
 

ಬೆಂಗಳೂರಿನಲ್ಲಿ ಐಸಿಟಿಎಸ್ ಸ್ಥಾಪನೆ
ಭಾರತದ ಮೊಟ್ಟ ಮೊದಲ ಇಂಟರ್‌ನ್ಯಾಷನಲ್
ಸೆಂಟರ್ ಫಾರ್ ಥಿಯಾರಿಟಿಕಲ್ ಸೈನ್ಸ್

ಬೆಂಗಳೂರು, ಅ.19: ಬೆಂಗಳೂರಿನ ಹೆಸರ ಘಟ್ಟ ಹೋಬಳಿಯ ಶಿವಕೋಟೆ ಗ್ರಾಮದಲ್ಲಿ ಭಾರತದ ಮೊಟ್ಟ ಮೊದಲ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಥಿಯಾರಿಟಿಕಲ್ ಸೈನ್ಸ್ (ಐಸಿಟಿಎಸ್) ಸ್ಥಾಪನೆಯಾಗಲಿದೆ.

ಕೇಂದ್ರ ಸರ್ಕಾರದ ಅಣುಶಕ್ತಿ ಇಲಾಖೆಯ ಟಾಟಾ ಇನ್ಸ್‌ಟಿಟ್ಯೂಟ್ ಫಾರ್ ಫಂಡಮೆಂಟಲ್ ರಿಸರ್ಚ್ ಸಂಸ್ಥೆಯು ಸ್ಥಾಪಿಸಲಿರುವ ಈ ಸಂಸ್ಥೆಗೆ ರಾಜ್ಯ ಸರ್ಕಾರವು ಶಿವಕೋಟೆ ಗ್ರಾಮದಲ್ಲಿ ದೀರ್ಘಾವಧಿ ಗುತ್ತಿಗೆ ಆಧಾರದ ಮೇಲೆ ೩೦ ವರ್ಷಗಳ ಅವಧಿಗೆ ೧೭.೩೫ ಎಕರೆ ಜಮೀನು ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಐಟಿ, ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಅಶೋಕ್ ಕುಮಾರ್ ಸಿ. ಮನೋಳಿ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನ್ಯಾನೋ ತಂತ್ರಜ್ಞಾನದ ರಾಜಧಾನಿಯಾಗಿ ಹೊರ ಹೊಮ್ಮುತ್ತಿರುವ ಬೆಂಗಳೂರಿನಲ್ಲಿ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಥಿಯಾರಿಟಿಕಲ್ ಸೈನ್ಸ್ ಕಾರ್ಯನಿರ್ವಹಿಸಲಿರುವುದು ಅತ್ಯಂತ ಹೆಮ್ಮೆಯ ವಿಷಯ. ರಾಜ್ಯದ ವಿದ್ಯಾರ್ಥಿಗಳಿಗೂ ಈ ಕೇಂದ್ರದಿಂದ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೆ ಬೆಂಗಳೂರು ಜ್ಞಾನದ ರಾಜಧಾನಿ ಯಾಗಿಯೂ ಬೆಳೆಯಲು ವೇದಿಕೆ ಕಲ್ಪಿಸಿದಂತಾಗುವುದು ಎಂದು ತಿಳಿಸಿದರು.

ಮೂಲ ವಿಜ್ಞಾನದ ಅಧ್ಯಯನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕೇಂದ್ರವು ಮಹತ್ವಪೂರ್ಣ ಪಾತ್ರ ವಹಿಸುವುದು ಎಂದು ಅವರು ಆಶಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಐಸಿಟಿಎಸ್‌ನ ನಿರ್ದೇಶಕ ಪ್ರೊ. ಸ್ಪೆಂಟಾವಾಡಿಯಾ ಅವರು ಈ ಸಂಸ್ಥೆಯ ಕಿರುಪರಿಚಯ ಮಾಡಿಕೊಟ್ಟರು. ಮೂಲ ವಿಜ್ಞಾನದ ಬೆಳವಣಿಗೆಗಾಗಿ ಟಾಟಾ ಇನ್ಸ್‌ಟಿಟ್ಯೂಟ್ ಫಾರ್ ಫಂಡಮೆಂಟಲ್ ರಿಸರ್ಚ್ ಸಂಸ್ಥೆಯು ಅಮೆರಿಕಾದ ಕಾವ್ಲಿ ಇನ್ಸ್‌ಟಿಟ್ಯೂಟ್ ಆಫ್ ಥಿಯರಿಟಿಕಲ್ ಫಿಸಿಕ್ಸ್, ಕೇಂಬ್ರಿಜ್‌ನ ಐಸಾಕ್ ನ್ಯೂಟನ್ ಇನ್ಸ್‌ಟಿಟ್ಯೂಟ್ ಹಾಗೂ ಇಟಲಿಯ ಅಬ್ದುಸ್ ಸಲಾಮ್ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಥಿಯಾರಿಟಿಕಲ್ ಸೈನ್ಸ್ ಸಂಸ್ಥೆಗಳ ಮಾದರಿಯಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಥಿಯಾರಿಟಿಕಲ್ ಸೈನ್ಸ್ ಸಂಸ್ಥೆಯನ್ನು ಸ್ಥಾಪಿಸಲಾಗುತ್ತಿದೆ.

ವಿಜ್ಞಾನದ ಸಾಂಪ್ರದಾಯಿಕ ವಿಷಯಗಳ ಕುರಿತ ಕಾರ್ಯಕ್ರಮಗಳಿಗೆ ವೇದಿಕೆಯನ್ನೊದಗಿಸುವುದರೊಂದಿಗೆ ಆಂತರಿಕ ಶಿಸ್ತಿನ ವಿಷಯಗಳಾದ ಬಯಲಾಜಿಕಲ್ ಫಿಸಿಕ್ಸ್, ಕಾಂಪ್ಯುಟೇಷನ್ ಸೈನ್ಸ್, ಕಾಂಪ್ಲೆಕ್ಸ್ ಸಿಸ್ಟಮ್, ಫ್ಲೂಯಿಡ್ಸ್ ಮುಂತಾದ ವಿಷಯಗಳಿಗೆ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಯುವ ಮತ್ತು ಪದವೀಧರ ವಿದ್ಯಾರ್ಥಿಗಳಿಗೆ ಪುನರ್‌ಮನನ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಐಸಿಟಿಎಸ್ ಹಮ್ಮಿಕೊಳ್ಳುತ್ತದೆ. ಈ ಕಾರ್ಯಕ್ರಮಗಳು ಭಾರತದ ವಿಶ್ವವಿದ್ಯಾಲಯಗಳಲ್ಲಿನ ಬೋಧನಾ ಮತ್ತು ಸಂಶೋಧನಾ ಮಟ್ಟದ ಮೌಲ್ಯಮಾಪನ ಮಾಡಲಿದೆ ಎಂದು ಅವರು ವಿವರಿಸಿದರು.

ಈ ಸಂಸ್ಥೆಯ ಸಲಹಾ ಸಮಿತಿಯಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡೇವಿಡ್ ಗ್ರಾಸ್ ಸೇರಿದಂತೆ ೧೦ ಸದಸ್ಯರಿದ್ದು, ಈ ಕೇಂದ್ರವು ದೇಶದ ವಿವಿಧ ಸಂಸ್ಥೆಗಳಲ್ಲಿ ಮತ್ತು ಪ್ರದೇಶಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈ ಕೇಂದ್ರದ ಕಟ್ಟಡ ನಿರ್ಮಾಣ ಪೂರ್ಣಗೊಂಡ ನಂತರ ಅಂದಾಜು ೨೦೧೦ರ ವೇಳೆಗೆ ಬೆಂಗಳೂರಿನಲ್ಲಿಯೇ ಹಮ್ಮಿಕೊಳ್ಳಲು ಸಾಧ್ಯವಾಗುವುದು ಎಂದು ಅವರು ತಿಳಿಸಿದರು.

ಐಸಿಟಿಎಸ್ ಆವರಣದಲ್ಲಿ ಉಪನ್ಯಾಸ ಕೊಠಡಿಗಳು, ಮುಕ್ತ ಚರ್ಚೆಗೆ ಪೂರಕ ವಾತಾವರಣವಿರುವ ಚರ್ಚಾ ಸ್ಥಳಗಳು ಹಾಗೂ ಮಾಹಿತಿ ಸೇವಾ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಕೇಂದ್ರದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳ ಮಾಹಿತಿಯನ್ನು ಈ ಮಾಹಿತಿ ಸೇವಾ ಕೇಂದ್ರದ ಮೂಲಕ ಎಲ್ಲರಿಗೂ ತಲುಪಿಸಲಾಗುವುದು ಎಂದು ಅವರು ತಿಳಿಸಿದರು.

ಇದಕ್ಕೆ ಅಗತ್ಯವಿರುವ ಹಣಕಾಸು ವ್ಯವಸ್ಥೆಯನ್ನು ಟಾಟಾ ಇನ್ಸ್‌ಟಿಟ್ಯೂಟ್ ಫಾರ್ ಫಂಡಮೆಂಟಲ್ ರಿಸರ್ಚ್ ಒದಗಿಸಲಿದೆ ಎಂದು ಅವರು ತಿಳಿಸಿದರು.

ಬೆಂಗಳೂರಿನಲ್ಲಿ ಹಲವಾರು ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರಗಳಿದ್ದು, ಅವುಗಳ ಸಹಕಾರದೊಂದಿಗೆ, ಅವುಗಳಿಗೆ ಪೂರಕವಾಗಿ ಈ ಕೇಂದ್ರವು ಕಾರ್ಯನಿರ್ವಹಿಸಲಿದೆ. ಬೆಂಗಳೂರಿನಲ್ಲಿ ವಿಜ್ಞಾನಿಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದು, ಅವರ ವಿಚಾರಧಾರೆಗಳನ್ನು ಹಂಚಿಕೊಳ್ಳಲು ಈ ಕೇಂದ್ರವು ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದರು.

ಮುಖಪುಟ /ಸುದ್ದಿ ಸಮಾಚಾರ