ಮುಖಪುಟ /ಸುದ್ದಿ ಸಮಾಚಾರ   
 

ಈ ಬಾರಿಯ ಹಂಪಿ ಉತ್ಸವ ಗತವೈಭವವನ್ನು ನೆನಪಿಸಲಿದೆ : ಬಿ.ಜನಾರ್ಧನ ರೆಡ್ಡಿ

ಬೆಂಗಳೂರು ಅ ೩೦ (ಕರ್ನಾಟಕ ವಾರ್ತೆ)  ನವೆಂಬರ್ ೩, ೪ ಹಾಗೂ ೫ ರಂದು ಸುಮಾರು ೩ ಕೋಟಿ ರೂ ವೆಚ್ಚದಲ್ಲಿ ಆದ್ದೂರಿಯಾಗಿ ಜಗತ್ತಿನ ಅತ್ಯಂತ ವಿಶಾಲ ಜೀವಂತ ಬಯಲು ವಸ್ತು ಸಂಗ್ರಹಾಲಯವೆಂದು ಪ್ರಸಿದ್ಧವಾಗಿರುವ ಹಂಪಿಯಲ್ಲಿ ನಡೆಸಲಾಗುವ ಹಂಪಿ ಉತ್ಸವ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿಹಿಡಿಯುವುದಲ್ಲದೆ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ನೆನಪಿಸಲಿದೆ ಎಂದು ಪ್ರವಾಸೋದ್ಯಮ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ಶ್ರೀ ಬಿ . ಜನಾರ್ಧನ ರೆಡ್ಡಿ ಅವರು ತಿಳಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಲೋಕಸಭೆ ವಿರೋಧ ಪಕ್ಷ ನಾಯಕ ಶ್ರೀ ಎಲ್. ಕೆ. ಅದ್ವಾನಿ ಅವರು ಹಂಪಿ ಉತ್ಸವವನ್ನು ಉದ್ಫಾಟಿಸುವರು. ಹಂಪಿ ಕನ್ನಡ ವಿಶ್ವವಿದ್ಯಾಲಯ ಹೊರತಂದಿರುವ  ಶ್ರೀ ಕೃಷ್ಣದೇವರಾಯ ಮತ್ತು  ವಿಜಯನಗರ ಸಂಸ್ಕೃತಿ ಪುಸ್ತಕಗಳನ್ನು ಬಿಡುಗಡೆಮಾಡುವರು ಎಂದು ತಿಳಿಸಿದರು.

ಗತವೈಭವವನ್ನು ನೆನಪಿಸುವಂತೆ ಮೆರವಣಿಗೆಯಲ್ಲಿ ಗಣ್ಯ ಅತಿಥಿಗಳನ್ನು  ಮೂರು ರಥಗಳಲ್ಲಿ ವೇದಿಕೆಗೆ ಕರೆತರುವ  ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಪ್ರವಾಸೋದ್ಯಮ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆಸಲಾಗುತ್ತಿರುವ ಈ ಸಮಾರಂಭವನ್ನು ಉತ್ತಮವಾಗಿ ವ್ಯವಸ್ಥೆಗೊಳಿಸಲಾಗಿದ್ದು ಜಾಹೀರಾತಿಗಾಗಿಯೇ  ಸುಮಾರು ೨ ಕೋಟಿ ರೂ ಗಳನ್ನು ವೆಚ್ಚ ಮಾಡಲಾಗುತ್ತಿದೆ. ವಾರ್ತಾ ಇಲಾಖೆ ಹಂಪಿ ಉತ್ಸವದ ಬಗ್ಗೆ ಪ್ರತ್ಯೇಕ ವೆಬ್‌ಸೈಟ್‌ನ್ನು ನಿರ್ಮಿಸಿ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದೆ ಎಂದು ಸಚಿವರು ತಿಳಿಸಿದರು.

ಶ್ರೀ ಕೃಷ್ಣದೇವರಾಯ ವೇದಿಕೆ, ಹರಿಹರ ವೇದಿಕೆ, ಕನಕ ವೇದಿಕೆ, ಎಚ್ಚಮನಾಯಕ ವೇದಿಕೆ, ಬಳ್ಳಾರಿ ಬೀಚಿ ವೇದಿಕೆ ಹಾಗೂ ಜೋಳದ ರಾಶಿ ದೊಡ್ಡನಗೌಡ ವೇದಿಕೆಗಲ್ಲಿ  ಖ್ಯಾತ ಕಲಾವಿದರಾದ ಆಶಾ ಭೋಸ್ಲೆ,ಸೋನು ನಿಗಮ್, ಪಂಕಜ್ ಉದಾಸ್, ಶೋಭನ ನಾರಾಯಣ್, ಶೋಭಾ ನಾಯ್ಡು, ಕಸ್ತೂರಿ ಶಂಕರ್, ಬಿ.ಕೆ. ಸುಮಿತ್ರರವರಲ್ಲದೆ  ಶ್ರೀಲಂಕಾ ಮಾಲ್ಡೀವ್ಸ್, ತಾಂಜಾನೀಯ, ಇಥಿಯೋಪಿಯಾ ದೇಶದ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಗೂ  ಕನ್ನಡದ ಖ್ಯಾತ ಸಂಗೀತ ನಿರ್ದೇಶಕರಾದ  ಹಂಸಲೇಖ ಅವರು ವಿಜಯನಗರ ವೈಭವ ಕುರಿತು ಸಂಗೀತ ರೂಪಕವನ್ನು ನಡೆಸಿಕೊಡುವರೆಂದು ಸಚಿವರು ತಿಳಿಸಿದರು. 

ಉತ್ಸವದ ಅಂಗವಾಗಿ ನವೆಂಬರ್ ೨ರಿಂದ ೫ರ ವರೆಗೆ ಎರಡು ಬಿಸಿಗಾಳಿಯ ಬೆಲೂನ್‌ಗಳ ಹಾರಾಟ ನಡೆಸಿ ಒಮ್ಮೆಗೆ ಹನ್ನೆರಡು ಜನರು ಹಂಪಿಯ ಪಕ್ಷಿನೋಟವನ್ನು ವೀಕ್ಷಿಸಲು ವ್ಯವಸ್ಥೆಗೊಳಿಸಲಾಗಿದೆ   ಎಂದು  ತಿಳಿಸಿದರು.

ಉತ್ಸವವನ್ನು ನೋಡಲು ಬರುವವರು ತಂಗಲು ೧೫೦೦ ಟೆಂಟ್‌ಗಳನ್ನು  ಹಾಕಿ, ಶೌಚ ಹಾಗೂ ಸ್ನಾನಕ್ಕೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಹಾಗೂ ಪಟ್ಟದಕಲ್ಲು, ಬಾದಾಮಿ ಮತ್ತು ಹಂಪಿಯ ಸುತ್ತಮುತ್ತಲು ಇರುವ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮ ಪ್ಯಾಕೇಜ್ ಪ್ರವಾಸವನ್ನು ವ್ಯವಸ್ಥೆಗೊಳಿಸಲಾಗಿದೆ ಎಂದರು.

ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಶಿಷ್ಟಾಚಾರವನ್ನು ಅನುಸರಿಸಿ ಸಮಾರಂಭವನ್ನು ವ್ಯವಸ್ಥೆಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಶ್ರೀ ಸೋಮಶೇಖರ್, ಮೀನುಗಾರಿಕೆ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಶ್ರೀ ಆನಂದ್ ಅಸ್ನೋಟಿಕರ್, ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ                          ಶ್ರೀ ಸುಬೀರ್ ಹರಿಸಿಂಗ್, ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಕಾರ್ಯದರ್ಶಿ                ಶ್ರೀ ಜಯರಾಮರಾಜೇ ಅರಸ್ ಕರ್ನಾಟಕ ಸಂಸ್ಕೃತಿ ಇಲಾಖೆಯ ನಿರ್ದೇಶಕ ಶ್ರೀ ಮನು ಬಳಿಗಾರ್, ವಾರ್ತಾ ಇಲಾಖೆಯ ನಿರ್ದೇಶಕ ಶ್ರೀ ಎನ್. ಆರ್. ವಿಶುಕುಮಾರ್, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಶ್ರೀ ಸಿ. ವಿಶ್ವನಾಥರೆಡ್ಡಿ ಅವರೂ              ಸೇರಿದಂತೆ  ಹಿರಿಯ ಅಧಿಕಾರಿಗಳು  ಉಪಸ್ಥಿತರಿದ್ದರು.

ಮುಖಪುಟ /ಸುದ್ದಿ ಸಮಾಚಾರ