ಮುಖಪುಟ /ಸುದ್ದಿ ಸಮಾಚಾರ   
 

ಮುಂದಿನ ೫ ವರ್ಷಗಳಲ್ಲಿ ೧೦ ಲಕ್ಷ ಉದ್ಯೋಗ
ಕೌಶಲ್ಯ ತರಬೇತಿಗಾಗಿ ೨೫ ಕೋಟಿ

ಬೆಂಗಳೂರು, ಅ.19: ವಿದ್ಯಾವಂತ  ಯುವಕ ಯುವತಿಯರು ಶಾಲೆಗಳಿಂದ ವಂಚಿತರಾದವರು ಎಸ್.ಎಸ್.ಎಲ್.ಸಿ. ಪಿ.ಯು.ಸಿ.  ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ರಾಷ್ಟ್ರದಲ್ಲೇ ಪ್ರಪ್ತಥಮವಾಗಿ  ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಶ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಕೌಶಲ್ಯ ಆಯೋಗ ಕಾರ್ಮಿಕ ಇಲಾಖೆ, ಉದ್ಯೋಗ ಮತ್ತು ತರಬೇತಿ ಇಲಾಖೆ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ, ಎಂಇಎಸ್ ಮತ್ತು ಟೈಮ್‌ಲೀಸ್  ಸಂಯುಕ್ತವಾಗಿ ಏರ್ಪಡಿಸಿರುವ  ೨ ದಿನಗಳ  ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳವನ್ನು  ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟಿಸಿ  ಮಾತಾಡುತ್ತಿದ್ದ ಅವರು ಈ ವಿಷಯ ತಿಳಿಸಿದರು.

 ಕೌಶಲ್ಯಂ ಬಲಂ ಎಂಬುದನ್ನು ಅರಿತಿರುವ ಸರ್ಕಾರ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲೆಂದೇ  ಕೌಶಲ್ಯ ಆಯೋಗದ ರಚನೆ ಮಾಡಲಾಗಿದೆ.  ಇದೇ ಮಾದರಿಯಲ್ಲಿ ರಾಜ್ಯಾದ್ಯಂತ ಜಿಲ್ಲಾವಾರು ಮೇಳಗಳನ್ನು ನಡೆಸಿ  ಮಾರ್ಚ್ ೨೦೦೯ ರ ವೇಳೆಗೆ ೧ ಲಕ್ಷ ಜನರಿಗೆ ಕೌಶಲ್ಯ ತರಬೇತಿ ಮೂಲಕ ಉದ್ಯೋಗ  ನೀಡುವ ಗುರಿಯಿದೆ ಎಂದರು. ಈ ಕಾರ್ಯಕ್ರಮಕ್ಕಾಗಿ ಸರ್ಕಾರದಿಂದ ೨೫ ಕೋಟಿ ರೂ.ಗಳನ್ನು ಈಗಾಗಲೆ ಬಿಡುಗಡೆ ಮಾಡಲಾಗಿದೆ.  ಇನ್ನೂ ಹೆಚ್ಚಿನ  ಅವಶ್ಯಕತೆಯಿದ್ದಲ್ಲಿ ಪೂರಕ ಬಜೆಟ್‌ನಲ್ಲಿ ಇನ್ನೂ ೨೫ ಕೋಟಿ ಬಿಡುಗಡೆ ಮಾಡಲಾಗುವುದೆಂದು ತಿಳಿಸಿದರು.    

ಮುಂದಿನ ೫ ವರ್ಷಗಳ ಅವಧಿಯಲ್ಲಿ ೧೦ ಲಕ್ಷ ಯುವಕ ಯುವತಿಯರಿಗೆ ಉದ್ಯೋಗ ಕೌಶಲ್ಯ ತರಬೇತಿ ನೀಡಲಾಗುತ್ತಿದೆ.  ಜವಳಿ ಕ್ಷೇತ್ರದಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಉದ್ದಿಮೆಯಲ್ಲಿ ಕೌಶಲ್ಯ ಕಾರ್ಮಿಕರ ಬೇಡಿಕೆಯು ಅತಿ ಹೆಚ್ಚಾಗಿದ್ದು ನೆರೆಯ ಮತ್ತು ದೂರದ ರಾಜ್ಯಗಳ ಕಾರ್ಮಿಕರು ಬಂದು ಈ ಅವಕಾಶ  ಬಳಸಿಕೊಳ್ಳುತ್ತಿದ್ದಾರೆ.  ಟ್ಯಾಲಿ ಮತ್ತು ಎನ್.ಐ.ಐ.ಟಿ. ಯಂತ ಪ್ರತಿಷ್ಠಿತ ಸಂಸ್ಥೆಗಳು ಕಂಪ್ಯೂಟರ್ ಸಂಬಂಧ ತರಬೇತಿಯನ್ನು ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದ ೧೦ ಕೈಗಾರಿಕಾ ಸಂಸ್ಥೆಗಳ ತರಬೇತಿ ನೀಡಲಿವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.  ಉದ್ಯೋಗ ತರಬೇತಿ ಒಡಂಬಡಿಕೆಯನ್ನು ರಾಜೀವ್‌ಗಾಂಧಿ ಗ್ರಾಮೀಣ ಗೃಹ ನಿರ್ಮಾಣ ನಿಗಮ (ಕೌಶಲ್ಯ ಶಾಲೆ, ೧೨,೯೬೦ ಜನರಿಗೆ) ಕರ್ನಾಟಕ ರಾಜ್ಯ ಪೋಲಿಸ್ ಗೃಹ ನಿರ್ಮಾಣ ನಿಗಮ, ಲಾರ್ಸೆನ್ ಮತ್ತು ಟ್ಯೂಬ್ರೋ ಸಂಸ್ಥೆಯನ್ನೊಳಗೊಂಡಂತೆ ೫ ಸಂಸ್ಥೆಗಳೊಂದಿಗೆ ಮಾಡಲಾಯಿತು.  ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕೌಶಲ್ಯ ಆಯೋಗದ ವೆಬ್‌ಸೈಟ್ www.karskills.com ನ್ನು ಅನಾವರಣಗೊಳಿಸಿದರು. 

ಕಾರ್ಮಿಕ ಸಚಿವರಾದ ಶ್ರೀ ಬಚ್ಚೇಗೌಡ ಅವರು ತಮ್ಮ ಪ್ರಸ್ಥಾವಿಕ ಭಾಷಣದಲ್ಲಿ ನಮ್ಮಲ್ಲಿ ಪದವಿ ಪಡೆದ ಯುವ ಜನರಕೊರತೆಯಿಲ್ಲ.  ಆದರೆ ಇಂದಿನ ಆಧುನಿಕ ಕೈಗಾರಿಕೆಗೆ ಅಗತ್ಯವಾದ ನಿಪುಣತೆ ಕೌಶಲ್ಯ ಹೊಂದಿರುವವರ ಸಂಖ್ಯೆ ಕಡಿಮೆ ಇದೆ.  ಈ ಸ್ಕಿಲ್ ಗ್ಯಾಪ್ ಅನ್ನು ತುಂಬಬೇಕಾಗಿದೆ.  ರಾಜ್ಯದಲ್ಲಿ ೯೫೮ ಸರ್ಕಾರಿ ಮತ್ತು ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಿದ್ದು ೯೦೦೦ ಕುಶಲ ಕರ್ಮಿಗಳು ತರಬೇತಿ ಪಡೆದು ಹೊರ ಬರುತ್ತಿದ್ದಾರೆ.  ೧೦ ಹೊಸ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಪ್ರಾರಂಭಿಸಲಾಗುತ್ತದೆ.  ಉನ್ನತ ಗುಣಮಟ್ಟದ  ತರಬೇತಿ  ನೀಡಿ ಕೈಗಾರಿಕೆಗಳಿಗೆ ಗುಣಮಟ್ಟದ  ಕುಶಲಕರ್ಮಿಗಳನ್ನು ಪೂರೈಸಲು ೩೬ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಸೆಂಟರ್ ಆಫ್ ಎಕ್ಸಲೆನ್ಸ್ ಎಂದು ಮೇಲ್ದರ್ಜೆಗೆ ಏರಿಸಲಾಗಿದೆ.  ಇದಕ್ಕಾಗಿ ಕೇಂದ್ರ ಸರ್ಕಾರದಿಂದ  ತಲಾ ೨.೫ ಕೋಟಿ ರೂ.ಗಳ  ಅನುದಾನ ಪಡೆಯಲಾಗಿದೆ.  ಇದಲ್ಲದೆ ತರಬೇತಿ ಸಂಸ್ಥೆಗಳನ್ನು  ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಲು ೫೬ ಸರ್ಕಾರಿ ಕೈಗಾರಿಕಾ  ತರಬೇತಿ ಸಂಸ್ಥೆಗಳನ್ನು ಸಾರ್ವಜನಿಕ ಖಾಸಗಿ ವಲಯಗಳ ಸಹಭಾಗಿತ್ವದ  ಅಡಿಯಲ್ಲಿ ಉನ್ನತ ದರ್ಜೆಗೇರಿಸಲು  ಕ್ರಮ ಜರುಗಿಸಲಾಗಿದೆಯೆಂದು ತಿಳಿಸಿದರು.  ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೌಶಲ್ಯ ಆಯೋಗ ರಚಿಸಿರುವುದರೊಂದಿಗೆ  ಈ ಯೋಜನೆ ಜಾರಿಗಾಗಿ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ದಿ  ನಿಗಮವನ್ನು ಉದ್ಯೋಗ ಮತ್ತು ತರಬೇತಿ ಇಲಾಖೆಯಲ್ಲಿ ರಚಿಸಲಾಗಿದ್ದು ೫ ಕೋಟಿ ಷೇರು ಬಂಡವಾಳ  ಹೂಡಲು ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ  ಈ ಪ್ರಮಾಣದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ೧೦೦ ಕ್ಕೂ ಹೆಚ್ಚು ಉದ್ದಿಮೆದಾರರು ಮೇಳದಲ್ಲಿ ಪಾಲ್ಗೊಂಡಿದ್ದಾರೆ.  ಮುಖ್ಯಮಂತ್ರಿಗಳ ಕನಸಿನ ಕೂಸಾದ ಈ ಯೋಜನೆಯಡಿ ಮುಂದಿನ  ೫ ವರ್ಷಗಳಲ್ಲಿ ೧೦ ಲಕ್ಷ  ಯುವಕರು ಪ್ರಮುಖವಾಗಿ ಶಾಲೆಬಿಟ್ಟು, ಹೆಚ್ಚಿನ ವಿಧ್ಯಾಭ್ಯಾಸ ಇಲ್ಲದ ಬಡಮಧ್ಯಮ ವರ್ಗದವರು, ಮಹಿಳೆಯರು, ಹಿಂದುಳಿದವರು, ಶೋಷಿತರು, ನಿರುದ್ಯೋಗಿ ಪದವೀಧರರಿಗೆ ಉದ್ಯೋಗ  ತರಬೇತಿ ನೀಡಿ ಸನ್ನದ್ದಗೊಳಿಸಲಾಗುವುದೆಂದರು.

ಸಂಸತ್‌ಸದಸ್ಯ ಶ್ರೀ ಅನಂತಕುಮಾರ್ ಅವರು ಈ ಕೌಶಲ್ಯ ಅಭಿವೃದ್ಧಿ ಮೇಳವು ಬಡ ನಿರುದ್ಯೋಗಿ ಯುವಕರಿಗೆ ಒಂದು ಸುವರ್ಣ ಸೇತುವೆಯಾಗಿದೆ.  ಕಾರ್ಮಿಕ ಇಲಾಖೆಗೆ ಹೊಸ ರೂಪ ನೀಡಿದ ಸಚಿವ ಶ್ರೀ ಬಚ್ಚೇಗೌಡ ಈ ದೂರದೃಷ್ಟಿಯ ಕಾರ್ಯಕ್ರಮ ರೂಪಿಸಿರುವ  ಮುಖ್ಯಮಂತ್ರಿಗಳು ಅಭಿನಂದನಾರ್ಹರೆಂದರು.  ಉದ್ಯೋಗ ಭರವಸೆಯಲ್ಲಿ ರಾಜ್ಯಾಸ್ಥಾನ ರಾಷ್ಟ್ರದಲ್ಲಿ ಮೊದಲ ಸ್ಥಾನದಲ್ಲಲಿದೆ.  ಮುಂದಿನ ಒಂದು ವರ್ಷದಲ್ಲಿ ಕರ್ನಾಟಕವು  ಮೊದಲ ಸ್ಥಾನದಲ್ಲಿ ಇರುತ್ತದೆಂದು ಆಶಿಸಿದರಲ್ಲದೆ ಕೌಶಲ್ಯ ಆಯೋಗದ ಘೋಷವಾಕ್ಯ ಮುಖ್ಯಮಂತ್ರಿಗಳು ಬಹಳಷ್ಟು ಬಳಸುವ ಕಾಯಕವೇ ಕೈಲಾಸ ಆದರೆ ಉತ್ತಮವಾಗಿರುತ್ತದೆಂದರು. 

ತಮ್ಮ ಅಧ್ಯಕ್ಷ ಭಾಷಣದಲ್ಲಿ ಶಾಸಕರಾದ ಶ್ರೀ ರಾಮಲಿಂಗಾರೆಡ್ಡಿಯವರು ಸರ್ಕಾರವು  ಕೈಗೆತ್ತಿಕೊಂಡಿರುವ ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ಮೇಳವು ಸ್ತುತ್ಯಾರ್ಹವಾದದ್ದು, ರಾಜ್ಯದ  ಪ್ರಗತಿಗೆ   ಇದು ಹೆಚ್ಚಿನ ಬಲವನ್ನು ನೀಡಲಿದೆಯೆಂದರು.

ಸಾರಿಗೆ ಸಚಿವರಾದ ಶ್ರೀ ಅಶೋಕ್, ಐ.ಟಿ.ಬಿ.ಟಿ. ಅಬಕಾರಿ ಮತ್ತು ವಾರ್ತಾ ಸಚಿವರಾದ           ಶ್ರೀ ಕಟ್ಟಾ ಸುಬ್ರಮಣ್ಯನಾಯ್ಡು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕು: ಶೋಭಾ ಕರಂದ್ಲಾಜೆ, ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಮುರುಗೇಶ್ ನಿರಾಣಿ, ಸಂಸತ್ ಸದಸ್ಯರಾದ ಶ್ರೀ ಹೆಚ್.ಟಿ. ಸಾಂಗ್ಲಿಯಾನ, ಶ್ರೀ ಮನೀಶ್ ಸಬರ್‌ವಾಲ್ ಶ್ರೀ ಸಿ.ಆರ್. ಚಿಕ್ಕಮಠ್ ಮತ್ತಿತರ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.  ಕೌಶಲ್ಯ ಆಯೋಗದ ಆಯುಕ್ತರಾದ ರಮೇಶ್ ಬಿ. ಝಳಕಿ ಅವರು ಸ್ವಾಗತಿಸಿದರು.

ಮುಖಪುಟ /ಸುದ್ದಿ ಸಮಾಚಾರ