ಮುಖಪುಟ /ಸುದ್ದಿ ಸಮಾಚಾರ   
 

ಚರ್ಚ್ ದಾಳಿ : ಆಯೋಗಕ್ಕೆ ಹೇಳಿಕೆ ನೀಡಲು ಅಧಿಸೂಚನೆ

ಬೆಂಗಳೂರು, ಅ.19: ರಾಜ್ಯದ ದಕ್ಷಿಣ ಕನ್ನಡ ಹಾಗೂ ಇತರ ಜಿಲ್ಲೆಗಳಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಪ್ರಾರ್ಥನಾ ಮಂದಿರಗಳ ಮೇಲೆ ಸಂಭವಿಸಿದ ಘಟನೆಗಳ ಬಗ್ಗೆ ನ್ಯಾಯಮೂರ್ತಿ ಬಿ.ಕೆ. ಸೋಮಶೇಖರ ವಿಚಾರಣಾ ಆಯೋಗದ ಮುಂದೆ ಸಂಘ ಸಂಸ್ಥೆಗಳು, ವ್ಯಕ್ತಿಗಳು ಹದಿನೈದು ದಿನದೊಳಗೆ ಹೇಳಿಕೆ ದಾಖಲಿಸುವಂತೆ ಅಕ್ಟೋಬರ್ ೧೩ರಂದು ಅಧಿಸೂಚನೆ ಹೊರಡಿಸಲಾಗಿದೆ.

ಈ ಘಟನೆಗಳಿಗೆ ಸಂಬಂಧಿಸಿದಂತೆ ವಸ್ತುವಿಷಯ ಅಥವಾ ಅದರ ಯಾವುದೇ ಅಂಶಗಳ ಬಗ್ಗೆ ಮಾಹಿತಿ ಹೊಂದಿರುವ ಎಲ್ಲಾ ವ್ಯಕ್ತಿಗಳು, ಸಂಸ್ಥೆಗಳು ಅಥವಾ ಸಂಘಟನೆಗಳು ಆಯೋಗದ ಮುಂದೆ ವಿಷಯಗಳನ್ನು ದಾಖಲೆ ಹಾಗೂ ಸಾಕ್ಷ್ಯಾಧಾರಗಳೊಂದಿಗೆ ಅಫಿಡವಿಟ್ ಮೂಲಕ ಸಲ್ಲಿಸುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ನೀಡುವ ಹೇಳಿಕೆಗಳು ಮತ್ತು ಸಲ್ಲಿಸುವ ಅಫಿಡವಿಟ್‌ಗಳು ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಇರತಕ್ಕದ್ದು, ಒಂದು ವೇಳೆ ಬೇರೆ ಭಾಷೆಗಳಲ್ಲಿದ್ದರೆ ಅವುಗಳನ್ನು ಕನ್ನಡ ಅಥವಾ ಇಂಗ್ಲಿಷ್‌ಗೆ ಭಾಷಾಂತರಿಸಿ ಸಲ್ಲಿಸಬೇಕು.

ದಾಖಲೆಗಳ ಮೂಲಪ್ರತಿಗಳನ್ನು ಅಥವಾ ದೃಢೀಕೃತ ಪ್ರತಿಗಳನ್ನು ಸಲ್ಲಿಸತಕ್ಕದ್ದು. ಒಂದು ವೇಳೆ ದಾಖಲೆಗಳನ್ನು ಬೇರೆ ವ್ಯಕ್ತಿಗಳಿಂದ ಪಡೆಯಲು ಸಾಧ್ಯವಿದ್ದಲ್ಲಿ, ಆ ವ್ಯಕ್ತಿಗಳ ಹೆಸರು ವಿಳಾಸವನ್ನು ತಿಳಿಸಬೇಕು ಹಾಗೂ ಮಾಹಿತಿ, ದಾಖಲೆ ಅಫಿಡವಿಟ್‌ಗಳನ್ನು ಸಲ್ಲಿಸುವವರು ಸಹ ಅವರ ಹೆಸರು ಹಾಗೂ ವಿಳಾಸದ ವಿವರಗಳನ್ನು ಕಡ್ಡಾಯವಾಗಿ ನೀಡತಕ್ಕದ್ದು. ಇವುಗಳನ್ನು ಆಯೋಗದ ಕಛೇರಿಯಲ್ಲಿ ನೇರವಾಗಿ ಅಥವಾ ಇನ್ನಾವುದೇ ಸಂಪರ್ಕ ಮಾಧ್ಯಮದ ಮೂಲಕ ಆಯೋಗವು ಕಾರ್ಯನಿರ್ವಹಿಸುವ ಯಾವುದೇ ದಿನದಂದು ಬೆಳಿಗ್ಗೆ ೧೦.೩೦ರಿಂದ ಸಂಜೆ ೫.೩೦ ರ ಅವಧಿಯಲ್ಲಿ ತಲುಪಿಸಬಹುದಾಗಿದೆ.

ಹೇಳಿಕೆಗಳನ್ನು ಕಾರ್ಯದರ್ಶಿ, ನ್ಯಾಯಮೂರ್ತಿ ಬಿ.ಕೆ. ಸೋಮಶೇಖರ ವಿಚಾರಣಾ ಆಯೋಗ, ಬಾಲಬ್ರೂಯಿ ಅತಿಥಿಗೃಹ, ಅರಮನೆ ರಸ್ತೆ, ಬೆಂಗಳೂರು ಜಲಮಂಡಳಿ ಕಛೇರಿ ಎದುರು, ಬೆಂಗಳೂರು, ೫೬೦೦೫೨ ಇಲ್ಲಿ ನೀಡಬಹುದಾಗಿದೆ. ಹಾಗೆಯೇ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ಇದೇ ವಿಳಾಸದಲ್ಲಿ ಕಛೇರಿ ವೇಳೆಯಲ್ಲಿ ಪಡೆಯಬಹುದು. enquiry@jbkscoi.org ಮೂಲಕವೂ ಹೇಳಿಕೆ ಸಲ್ಲಿಸಬಹುದು.

ಆಯೋಗದ ಮುಂದೆ ಹೇಳಿಕೆ, ದಾಖಲೆ, ಮಾಹಿತಿ, ಸಾಕ್ಷ್ಯಾಧಾರ ನೀಡುವ ವ್ಯಕ್ತಿಗಳಿಗೆ ರಕ್ಷಣೆ ಪಡೆಯಲು ಅವಕಾಶವಿದ್ದು, ಅವರು ಆಯೋಗವು ನಿರ್ದಿಷ್ಟಪಡಿಸಿದ ದಿನಾಂಕ, ಸಮಯ ಮತ್ತು ಬೆಂಗಳೂರು ಅಥವಾ ಇನ್ನಾವುದೇ ಸ್ಥಳದಲ್ಲಿ ಸಾಕ್ಷ್ಯ ನೀಡುವಂತೆ ಕೇಳಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಮುಖಪುಟ /ಸುದ್ದಿ ಸಮಾಚಾರ