ಮುಖಪುಟ /ಸುದ್ದಿ ಸಮಾಚಾರ   
 

ಯಡ್ಡಿಗೆ ತಲೆಬಾಗಿದ ಹೈಕಮಾಂಡ್, ವರವಾದ ಪಂಚಾಯ್ತಿ ಚುನಾವಣೆ

Yadiyurappaಬೆಂಗಳೂರು, ನ.24: ಕಳೆದ ಒಂದು ವಾರದಿಂದ ನಡೆದ ರಾಜಕೀಯ ನಾಟಕಕ್ಕೆ ಕೊನೆಗೂ ತೆರೆ ಬಿದ್ದಿದೆ. ಜೆಡಿಎಸ್ ನಡೆಸಿದ ಎಲ್ಲ ಕಾರ್ಯತಂತ್ರವೂ ಕೊನೆ ಕ್ಷಣದಲ್ಲಿ ಮುಗ್ಗರಿಸಿದೆ. ಯಡಿಯೂರಪ್ಪ ಅವರ ಬೆದರಿಕೆ ತಂತ್ರ ಫಲಕಾರಿಯಾಗಿದ್ದು, ಇಡೀ ವರಿಷ್ಠ ಮಂಡಳಿ ಯಡಿಯೂರಪ್ಪ ಅವರಿಗೆ ಶರಣಾಗಿದೆ.

ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅವರೇ ಮುಂದುವರಿಯುತ್ತಾರೆ ಎಂದು ಬಿಜೆಪಿ ವರಿಷ್ಠ ಮಂಡಳಿ ಇಂದು ಅಧಿಕೃತವಾಗಿ ಪ್ರಕಟಿಸುವ ಮೂಲಕ ಎಲ್ಲ ಊಹಾಪೋಹಗಳಿಗೆ, ವದಂತಿಗಳಿಗೆ ಮಂಗಳ ಹಾಡಿತು.

ದೆಹಲಿಯಲ್ಲಿಂದು ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಸುದ್ದಿಗಾರರಿಗೆ ವಿವರ ನೀಡಿದ ಪಕ್ಷದ ವಕ್ತಾರ ಪ್ರಕಾಶ್ ಜಾವಡೇಕರ್ ಯಡಿಯೂರಪ್ಪ ವಿರುದ್ಧ ಪ್ರತಿಪಕ್ಷಗಳು ಆರೋಪ ಮಾಡಿವೆಯೇ ಹೊರತು, ಯಾವುದೇ ನ್ಯಾಯಾಲಯ ಅಥವಾ ಪ್ರಾಧಿಕಾರ ಅಥವಾ ಸಂಸ್ಥೆ ಅವರನ್ನು ತಪ್ಪಿತಸ್ಥ ಎಂದು ಹೇಳಿಲ್ಲ. ಯಡಿಯೂರಪ್ಪ ಅವರು ಸಹ ತಮ್ಮ ವಿರುದ್ಧದ ಎಲ್ಲ ಆರೋಪ ಅಲ್ಲಗಳೆದಿದ್ದಾರೆ.  ಹೀಗಾಗಿ ಮುಖ್ಯಮಂತ್ರಿಯಾಗಿ ಅವರೇ ಮುಂದುವರಿಯುತ್ತಾರೆ ಎಂದರು.

ಕರ್ನಾಟಕದಲ್ಲಿ ನಡೆಯಲಿರುವ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳ ಹಿನ್ನೆಲೆಯಲ್ಲಿ ಸಹ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ, ಯಡಿಯೂರಪ್ಪ ಪಾಲಿಗೆ ವರದಾನವಾಗಿದೆ.

ವರಿಷ್ಠರ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ , ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಹೈಕಮಾಂಡ್ ತಮಗೆ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಸೂಚನೆ ನೀಡಿದ್ದಾರೆ. ರಾಜ್ಯದ ಶಾಸಕರು, ಸಂಸದರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಇನ್ನು ಮುಂದೆ ನಾನು ಮಾತು ಕಡಿಮೆ ಮಾಡಿ, ಅವರ ವಿಶ್ವಾಸ, ನಂಬಿಕೆಗೆ ಚ್ಯುತಿ ಆಗದ ರೀತಿ ಆಡಳಿತ ನಡೆಸುತ್ತೇನೆ ಎಂದು ಹೇಳಿದ್ದಾರೆ.

ತಮ್ಮ ಸರ್ಕಾರ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ. ಇದನ್ನು ಸಹಿಸಲಾರದೆ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮ ಮೇಲೆ ಆರೋಪ ಹೊರಿಸಿದರು. ಇದು ತಮ್ಮ ವರಿಷ್ಠರಿಗೆ ಮನವರಿಕೆ ಆಗಿದೆ ಎಂದು ಹೇಳಿದರು.

ಇದೇ ವೇಳೆ ದೆಹಲಿಯಲ್ಲೇ ಇರುವ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರನ್ನು ಸಹ ಭೇಟಿ ಮಾಡಿದ ಮುಖ್ಯಮಂತ್ರಿ ಸಮಾಲೋಚನೆ ನಡೆಸಿದರು.

ಈ ಮಧ್ಯೆ ಬಿಜೆಪಿಯೇತರ ಮತ್ತು ಎನ್.ಡಿ.ಎ.ಯೇತರ ಪ್ರತಿಪಕ್ಷಗಳ ನಾಯಕರು, ಕರ್ನಾಟಕದಲ್ಲಿ ಮತ್ತು ಆಂಧ್ರಪ್ರದೇಶದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಮತ್ತು ಕರ್ನಾಟಕದಲ್ಲಿ ನಡೆದಿರುವ ಎಲ್ಲ ಭೂ ಹಗರಣಗಳ ಕುರಿತು ತನಿಖೆಗೆ ಒತ್ತಾಯಿಸಿದ್ದಾರೆ.

 ಮುಖಪುಟ /ಸುದ್ದಿ ಸಮಾಚಾರ