ಮುಖಪುಟ /ಸುದ್ದಿ ಸಮಾಚಾರ   
 

ಯಡಿಯೂರಪ್ಪ ಬದಲಾವಣೆಗೆ ಕಾಲ ಸನ್ನಿಹಿತ!

B.S. Yadiyurappaಬೆಂಗಳೂರು, ನ.19 - ಭ್ರಷ್ಟಾಚಾರ ಇಂದು ದೇಶ ವ್ಯಾಪಿಯಾಗಿದೆ. ಎಲ್ಲ ರಂಗದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಎಲ್ಲ ಸರ್ಕಾರಗಳಲ್ಲೂ ಒಂದಲ್ಲಾ ಒಂದು ಹಗರಣ ಸುದ್ದಿ ಮಾಡುತ್ತಿದೆ. ಮಹಾರಾಷ್ಟ್ರದಲ್ಲಿ  ಆದರ್ಶ ಹೌಸಿಂಗ್ ಸೊಸೈಟಿ ಹಗರಣದ ಫಲಶ್ರುತಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಪದಚ್ಯುತರಾದರೆ, ಇತ್ತ ಕಾಮನ್ವೆಲ್ತ್ ಕ್ರೀಡಾಕೂಟದ ಹಗರಣದಲ್ಲಿ ಸುರೇಶ್ ಕಲ್ಮಾಡಿ ತಲೆದಂಡವಾಗಿದೆ. ಕೇಂದ್ರ ಸರ್ಕಾರ ಕೂಡ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಸಿಲುಕಿ ಎ.ರಾಜಾ ರಾಜೀನಾಮೆ ಪಡೆದಿದೆ.

ಈಗ ರಾಜ್ಯದಲ್ಲೂ  ಭ್ರಷ್ಟಾಚಾರ ಹಗರಣ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಖುರ್ಚಿಯನ್ನು ಬಲಿ ತೆಗೆದುಕೊಳ್ಳುವ ಕಾಲವೂ ಸನ್ನಿಹಿತವಾಗುತ್ತಿದೆ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಕಾನೂನು ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಭೂಸ್ವಾಧೀನ ಕೈಬಿಟ್ಟಿರುವ ಡಿನೋಟಿಫಿಕೇಷನ್ ಹಗರಣ ಹಾಗೂ ಕೆ.ಐ.ಎ.ಡಿ.ಬಿ ಪ್ರಕರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರರೇ ನೇರವಾಗಿ ಭಾಗಿಯಾಗಿದ್ದಾರೆಂಬ ಆರೋಪಗಳು ಅವರ ಮುಖ್ಯಮಂತ್ರಿ ಪದವಿಗೇ ಎರವಾಗಿದೆ.

ಸಂಸತ್ತಿನಲ್ಲಿ ಮಾರ್ದನಿ!

ಈಗ ರಾಜ್ಯದಲ್ಲಿ ನಡೆದಿರುವ ಭೂ ಹಗರಣ ಸಂಸತ್ತಿನಲ್ಲೂ ಪ್ರತಿದ್ವನಿಸಿದ್ದು, ಕಾಂಗ್ರೆಸ್, ಜೆಡಿಎಸ್ ಹಾಗೂ ಡಿಎಂಕೆ ನಾಯಕರು ಕರ್ನಾಟಕ ಬಿಜೆಪಿ ಸರ್ಕಾರದ ವಜಾಕ್ಕೆ ಒತ್ತಾಯಿಸಿದ್ದಾರೆ. ಇದರಿಂದ ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ್ದ ಬಿಜೆಪಿ ನೇತೃತ್ವದ ಎನ್.ಡಿ.ಎ. ಸಂಕಷ್ಟಕ್ಕೆ ಸಿಲುಕಿದೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜೀನಾಮೆ ಪಡೆಯುವಂತೆ ಬಿಜೆಪಿ ಮೇಲೆ ಒತ್ತಡ ಹೆಚ್ಚಾಗಿದೆ. ಆರ್.ಎಸ್.ಎಸ್. ಪ್ರಮುಖರು ಕೂಡ ಯಡಿಯೂರಪ್ಪ ಅವರ ಸ್ವಾರ್ಥ ರಾಜಕಾರಣದಿಂದ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಬಿಜೆಪಿ ವರ್ಚಸ್ಸಿಗೆ ಕುಂದುಂಟಾಗಿದ್ದು, ಕೂಡಲೇ ಯಡಿಯೂರಪ್ಪ ಬದಲಾವಣೆ ಮಾಡುವಂತೆ ಒತ್ತಾಯಿಸಿದ್ದಾರೆ.

ಈ ಹಿನ್ನೆಲೆಯಲ್ಲಿ  ಗುರುವಾರ ರಾತ್ರಿ ಎಲ್.ಕೆ. ಅಡ್ವಾಣಿ ಅವರ ದೆಹಲಿ ನಿವಾಸದಲ್ಲಿ ಬಿಜೆಪಿ ನಾಯಕರು ಸಭೆ ನಡೆಸಿ, ಈ ವಿಚಾರದ ಬಗ್ಗೆ ಕೂಲಂಕಷವಾಗಿ ಚರ್ಚಿಸಿದ್ದಾರೆ. ಯಡಿಯೂರಪ್ಪ ಅವರಿಗೆ ದೆಹಲಿಗೆ ಬರುವಂತೆ ಸೂಚಿಸಿದ್ದಾರೆ.

ಇಂದು ಸಂಜೆ ಯಡಿಯೂರಪ್ಪ ಹಾಗೂ ಕೆ.ಎಸ್. ಈಶ್ವರಪ್ಪ ಅವರು, ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದು, ಪಕ್ಷದ ವರಿಷ್ಠರೊಂದಿಗೆ ಭೂ ಹಗರಣಗಳ ಕುರಿತಂತೆ ಚರ್ಚಿಸಲಿದ್ದಾರೆ. ಈ ಮಧ್ಯೆ ಮುಖ್ಯಮಂತ್ರಿ ಯಡಿಯೂರಪ್ಪ ಹಗರಣಕ್ಕೆ ಸಿಲುಕಿರುವ ಎಲ್ಲ ಜಮೀನು ಹಾಗೂ ನಿವೇಶನಗಳನ್ನು ಬಿಡಿಎ ಮತ್ತು ಕೆ.ಐ.ಎ.ಡಿ.ಬಿ.ಗೆ ಹಿಂತಿರುಗಿಸಿರುವುದಾಗಿ ಇಂದು ಹುಬ್ಬಳ್ಳಿಯಲ್ಲಿ ಪ್ರಕಟಿಸಿದ್ದಾರೆ.

ಈ ಬಗ್ಗೆ ಪ್ರತಿಪಕ್ಷಗಳು ಈಗಾಗಲೇ ಪ್ರತಿಕ್ರಿಯೆ ನೀಡಿದ್ದು, ಕಳ್ಳ ಸಿಕ್ಕಿ ಬಿದ್ದಾಗ ತಾನು ಕದ್ದ ವಸ್ತುಗಳನ್ನೆಲ್ಲಾ ವಾಪಸು ಮಾಡಿದರೆ ಅವನನ್ನು ಕಾನೂನು ಬಿಟ್ಟು ಬಿಡುತ್ತದೆಯೇ. ಹಾಗೆಯೇ ಮುಖ್ಯಮಂತ್ರಿ ಭೂಮಿ ವಾಪಸ್ ಮಾಡಿದ ಮಾತ್ರಕ್ಕೆ ಅವರು ಮಾಡಿದ ತಪ್ಪು ಮುಚ್ಚಿಕೊಳ್ಳಲು ಸಾಧ್ಯವಿಲ್ಲ ಎಂದಿವೆ.

ಈ ಎಲ್ಲ ಘಟನಾವಳಿಗಳ ನಡುವೆ ಸಂಸತ್ತಿನ ಒಳಗೆ ಹಾಗೂ ಹೊರಗೂ ರಾಜ್ಯ ಬಿಜೆಪಿ ಸರ್ಕಾರದ ವಜಾಕ್ಕೆ ಹೋರಾಟ ನಡೆದಿದ್ದು, ಕಲಾಪ ಕೂಡ ಬಲಿಯಾಗಿದೆ. ಈ ಹಂತದಲ್ಲಿ ಬಿಜೆಪಿ ರಾಷ್ಟ್ರಮಟ್ಟದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಯುಪಿಎ ಸರ್ಕಾರದ ವಿರುದ್ಧ ಹೋರಾಟ ಮಾಡಲು ಸಿಕ್ಕಿರುವ 2 ಜಿ ಅಸ್ತ್ರವನ್ನು ಬಿಟ್ಟುಕೊಡಲು ಸಿದ್ಧವಿಲ್ಲ.

ಯಡಿಯೂರಪ್ಪ ಅವರನ್ನು ಉಳಿಸಿಕೊಳ್ಳಲು ಕೇಂದ್ರ ಮಟ್ಟದಲ್ಲಿ ತನ್ನ ವರ್ಚಸ್ಸು ಹಾಳುಮಾಡಿಕೊಳ್ಳಲು ಇಚ್ಛಿಸದ ಬಿಜೆಪಿ ಇಂದು ಯಡಿಯೂರಪ್ಪ ಅವರ ವಿಷಯದಲ್ಲಿ ಕಠಿಣ ನಿರ್ಧಾರ ಕೈಗೊಳ್ಳುತ್ತದೆ ಎಂದೇ ಹೇಳಲಾಗುತ್ತಿದೆ. ಇಂದು ಸಂಜೆ ಅಥವಾ ನಾಳೆಯೊಳಗೆ  ಯಡಿಯೂರಪ್ಪ ಅವರ ಭವಿಷ್ಯ ನಿರ್ಧಾರವಾಗಲಿದೆ. ಯಡಿಯೂರಪ್ಪ ಅವರ ರಾಜೀನಾಮೆ ಪಡೆದರೆ ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಬಗ್ಗೆಯೂ ಬಿಜೆಪಿ ವರಿಷ್ಠ ಮಂಡಳಿ ಒಂದು ಸುತ್ತಿನ ಮಾತುಕತೆ ನಡೆಸಿದೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿನ ಪ್ರಮುಖ ವೀರಶೈವ ಸಮುದಾಯವನ್ನು ಸಂತೃಪ್ತಿಗೊಳಿಸಲು ಮತ್ತೆ ರಾಜ್ಯಕ್ಕೆ ಲಿಂಗಾಯಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನೇ ಮುಖ್ಯಮಂತ್ರಿ ಮಾಡುವ ಬಗ್ಗೆ ಚಿಂತಿಸಲಾಗುತ್ತಿದ್ದು, ಜಗದೀಶ ಶೆಟ್ಟರ್ ಮತ್ತು ಸಿ.ಎಂ. ಉದಾಸಿ ಅವರ ಹೆಸರು ಕೇಳಿಬರುತ್ತಿದೆ. ಈ ಮಧ್ಯೆ ಆರ್.ಎಸ್.ಎಸ್. ಡಾ.ವಿ.ಎಸ್. ಆಚಾರ್ಯ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಒತ್ತಾಯಿಸಿದೆ ಎಂದು ಗೊತ್ತಾಗಿದ್ದು, ಸುರೇಶ್ ಕುಮಾರ್ ಹೆಸರೂ ಸಹ ಕೇಳಿಬರುತ್ತಿದೆ.

 ಮುಖಪುಟ /ಸುದ್ದಿ ಸಮಾಚಾರ