ಮುಖಪುಟ /ಸುದ್ದಿ ಸಮಾಚಾರ   
 

ವಿಷ್ಣುವರ್ಧನ್ ಸ್ಮಾರಕಕ್ಕೆ ತಕ್ಷಣ 3 ಕೋಟಿ ಸಂಪುಟ ನಿರ್ಧಾರ

Vishnuvardhanಬೆಂಗಳೂರು, ನ.೨೯ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಆಡಳಿತಾತ್ಮಕ ಒಪ್ಪಿಗೆ ನೀಡಿದ್ದು, ೩ ಕೋಟಿ ರೂಪಾಯಿ ಹಣವನ್ನು ಕೂಡಲೇ ಬಿಡುಗಡೆ ಮಾಡಲು ಇಂದು ಸಂಜೆ ನಡೆದ ಸಚಿವ ಸಂಪುಟ ನಿರ್ಧರಿಸಿದೆ.

ಇಂದು ನಡೆದ ಸಚಿವ ಸಂಪುಟ ಸಭೆಯ ಬಳಿಕ ವಿವರ ನೀಡಿದ ಡಾ. ವಿ.ಎಸ್.ಆಚಾರ್ಯ  ಒಟ್ಟು ೧೦ ಕೋಟಿ ರೂಪಾಯಿ ವೆಚ್ಚದಲ್ಲಿ ಕೆಂಗೇರಿ ಬಳಿಯ ಅಭಿಮಾನ್ ಸ್ಟುಡಿಯೋದ ೨ ಎಕರೆ ಪ್ರದೇಶದಲ್ಲಿ ಸ್ಮಾರಕ ನಿರ್ಮಾಣಕ್ಕೆ ಸರ್ಕಾರದ ಮುಂದಾಗಿದ್ದು, ಉಳಿದ ೫ ಕೋಟಿ ರೂಪಾಯಿ ಹಣದ ಬಿಡುಗಡೆಗೆ ಸಂಪುಟ ಅನುಮತಿ ನೀಡಿದೆ ಎಂದರು.

ಕೃಷ್ಣ ಮೇಲ್ದಂಡೆ ಯೋಜನೆಯಲ್ಲಿ ೧೯೯೪-೯೫, ೧೯೯೫-೯೬ ಹಾಗೂ ೧೯೯೬-೯೭ನೇ ಸಾಲಿನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಸೋಮಶೇಖರ ರೆಡ್ಡಿ ಎನ್ನುವವರು ಹೈಕೋರ್ಟ್‌ಗೆ ಸಲ್ಲಿಸಿದ್ದ ರಿಟ್ ಅರ್ಜಿ ಅನ್ವಯ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿ.ಐ.ಡಿ. ತನಿಖೆಗೆ ಒಪ್ಪಿಸಲು ತೀರ್ಮಾನಿಸಿದೆ.

೯ ತುಂಡುಗುತ್ತಿಗೆ ಪ್ರಕರಣಗಳಲ್ಲಿ ಅವ್ಯವಹಾರ ಆಗಿದ್ದು, ೮೫ ಕೋಟಿ ರೂಪಾಯಿ ಕಾಮಗಾರಿಯಲ್ಲಿ ಅವ್ಯವಹಾರ ಆಗಿದೆ. ಸಿ.ಎ.ಜಿ. ವರದಿ ಮಾಡಿದೆ. ಸೋಮಶೇಖರ ರೆಡ್ಡಿ ಅವರು ಈ ಸಂಬಂಧ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ಹಿನ್ನೆಲೆಯಲ್ಲಿ ಕೋರ್ಟ್ ತೀರ್ಪಿನನ್ವಯ ಸಿ.ಐ.ಡಿ. ತನಿಖೆ ನಡೆಸಿ, ಸಾಧ್ಯವಾದಷ್ಟು ಶೀಘ್ರ ವರದಿ ನೀಡುವಂತೆ ಸೂಚಿಸಲು ಸಭೆ ತೀರ್ಮಾನಿಸಿತು ಎಂದರು.

ಭದ್ರಾ ಮೇಲ್ದಂಡೆ ಯೋಜನೆಯಿಂದ ತರೀಕೆರೆ ತಾಲೂಕಿನ ೫೨ ಕೆರೆಗಳಿಗೆ ಕುಡಿಯುವ ನೀರು, ೧೩ ಸಾವಿರ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸಲು ರಾಜ್ಯ ಸಚಿವ ಸಂಪುಟ ಅನುಮತಿ ನೀಡಿದೆ ಎಂದು ತಿಳಿಸಿದರು. ಇದಕ್ಕೆ ೦.೮ ಟಿ.ಎಂ.ಸಿ. ಅಡಿ ನೀರು ಬೇಕಿದ್ದು, ಕೇಂದ್ರ ಜಲ ಆಯೋಗ ಅನುಮತಿ ನೀಡಿದೆ ಎಂದು ಸಚಿವರು ಹೇಳಿದರು.

ಆರೋಗ್ಯ ಕವಚ ಯೋಜನೆಯಡಿ ೧೦೮ ಆಂಬುಲೆನ್ಸ್‌ನ  ೫೧೭ ವಾಹನ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ಒಟ್ಟು ವಾರ್ಷಿಕ ೬ಕೋಟಿ ೭೦ ಲಕ್ಷ ವೆಚ್ಚವಾಗುತ್ತಿದೆ. ಇದಕ್ಕೆ ತಗಲುವ ಶೇ.೧೦೦ರಷ್ಟು ಹಣವನ್ನು ರಾಷ್ಟ್ರೀಯ ಗ್ರಾಮೀಣ ಅಭಿಯಾನದಡಿ ಭರಿಸಲು ತೀರ್ಮಾನಿಸಲಾಯಿತು ಎಂದು ಸಚಿವರು ಹೇಳಿದರು.

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಆರು ವಲಯಗಳಲ್ಲಿ ೧೭ ಲಕ್ಷ ೮೩ಸಾವಿರದ ೯೧೫ ಪಡಿತರ ಚೀಟಿದಾರರಿಗೆ ಪಡಿತರ ವಸ್ತು ನೀಡಲು ಈ ವಲಯ ಸ್ಥಾಪನೆಗೆ ಸಂಪುಟ ಅನುಮತಿ ನೀಡಿತು ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ಕಾಯಿದೆಗೆ ೩ ತಿದ್ದುಪಡಿಗೆ ಸಂಪುಟ ಅನುಮತಿ ನೀಡಿದೆ. ಸೆಕ್ಷನ್ ೩ರ ಅನ್ವಯ ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಭೌಗೋಳಿಕವಾಗಿ ರಾಮನಗರ, ಚನ್ನಪಟ್ಟಣ ಸೇರಿಸಲು ನಿರ್ಧಾರ. ಗುಲ್ಬರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬೀದರ್, ಗುಲ್ಬರ್ಗಾ, ರಾಯಚೂರು, ಯಾದಗಿರಿ ಸೇರ್ಪಡೆಗೆ ತೀರ್ಮಾನಿಸಲಾಯಿತು. ಸೆಕ್ಷನ್ ೧೪ರ ಅನ್ವಯ ಕುಲಪತಿಗಳ ನಿವೃತ್ತಿ ವಯಸ್ಸನ್ನು ಯು.ಜಿ.ಸಿ ಮಾರ್ಗಸೂಚಿಯನ್ವಯ ೬೫ರಿಂದ ೬೭ಕ್ಕೆ ಏರಿಕೆ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಸೆಕ್ಷನ್ ೧೭ರನ್ವಯ ಕುಲಸಚಿವರ ಹುದ್ದೆಗೆ ಹಿರಿಯ ಕೆ.ಎ.ಎಸ್. ಅಥವಾ ಪ್ರಾಧ್ಯಾಪಕರಾಗಿ ೫ ವರ್ಷ ಪೂರ್ಣ ಸೇವೆ ಸಲ್ಲಿಸಿದವರನ್ನು ಪರಿಗಣಿಸಲು ತಿದ್ದುಪಡಿಯನ್ನು ಸುಗ್ರೀವಾಜ್ಞೆ ಮೂಲಕ ತರಲು ಸಂಪುಟ ತೀರ್ಮಾನಿದೆ ಎಂದರು.

 ಮುಖಪುಟ /ಸುದ್ದಿ ಸಮಾಚಾರ