ಮುಖಪುಟ /ಸುದ್ದಿ ಸಮಾಚಾರ   
 

ಬಿಜೆಪಿ ದ್ವಂದ್ವ ನೀತಿ : ಸೋನಿಯಾ ಗಾಂಧಿ ಟೀಕೆ

Soniyagandhiನವದೆಹಲಿ, ನ.24: ಬಿಜೆಪಿ ದ್ವಂದ್ವ ನೀತಿ ಅನುಸರಿಸುತ್ತಿದೆ, ಆ ಪಕ್ಷಕ್ಕೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕೇ ಇಲ್ಲ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವು ಆರೋಪ ಬಂದ ಕೂಡಲೇ ಶಶಿ ತರೂರ್, ನಟ್ವರ್ ಸಿಂಗ್ ಹಾಗೂ ಅಶೋಕ್ ಚೌವ್ಹಾಣ್ ಅವರ ರಾಜೀನಾಮೆ ಪಡೆದಿದ್ದೇವೆ. ಆದರೆ, ೨ಜಿ ಸ್ಪೆಕ್ಟ್ರಂ ವಿಚಾರದಲ್ಲಿ ಜಂಟಿ ಸಂಸದೀಯ ಪಕ್ಷದ ತನಿಖೆ ಆಗಲೇಬೇಕು ಎಂದು ಒತ್ತಾಯಿಸುತ್ತಿರುವ ಬಿಜೆಪಿ ಯಡಿಯೂರಪ್ಪ ವಿಚಾರದಲ್ಲಿ ಮಾತ್ರ ಮೃದು ಧೋರಣೆ ತಳೆದಿದೆ ಎಂದು ಹೇಳಿದರು.

ನಾವು ಭ್ರಷ್ಟಾಚಾರದ ಪ್ರಕರಣಗಳನ್ನು ಹೇಗೆ ನಿಬಾಯಿಸುತ್ತೇವೆ ಎಂಬುದು ನಿಮ್ಮೆಲ್ಲರಿಗೂ ತಿಳಿದಿದೆ. ನಮ್ಮ ಪಕ್ಷದ ಮಂತ್ರಿಗಳ ಮೇಲೆ, ಮುಖ್ಯಮಂತ್ರಿಗಳ ಮೇಲೆ ಆರೋಪ ಬಂದರೆ ತಕ್ಷಣವೇ ರಾಜೀನಾಮೆ ಪಡೆದಿದ್ದೇವೆ. ಆದರೆ, ಇತರ ಪಕ್ಷಗಳ ಭ್ರಷ್ಟಾಚಾರದ ವಿಷಯವನ್ನು ದೊಡ್ಡದು ಮಾಡುವ ಅವರ ರಾಜೀನಾಮೆಗೆ ಒತ್ತಾಯಿಸಿ ಪಡೆಯುವ ಬಿಜೆಪಿ ತಾನು ಮಾತ್ರ ಹಾಗೆ ನಡೆದುಕೊಳ್ಳದಿರುವುದು ಆ ಪಕ್ಷದ ನಿಜ ಬಣ್ಣ ಬಯಲು ಮಾಡಿದೆ ಎಂದು ವಿಶ್ಲೇಷಿಸಿದರು.

ಇದೆಲ್ಲಾ ಘಟನೆಯನ್ನು ನೋಡುತ್ತಿರುವ ದೇಶದ ಜನತೆಯೇ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ವ್ಯತ್ಯಾಸ ಅರಿಯುತ್ತಾರೆ. ಕಾಂಗ್ರೆಸ್ ಪಕ್ಷದ ಬಗ್ಗೆ ಜನರ ಗೌರವ ಈಗ ಮತ್ತಷ್ಟು ಹೆಚ್ಚಲಿದೆ ಎಂದು ಹೇಳಿದರು. ಭ್ರಷ್ಟಾಚಾರ ಒಂದು ಕಾಯಿಲೆ ಎಂದ ಅವರು, ಇದನ್ನು ನಿವಾರಿಸಲು ಒಂದು ವ್ಯವಸ್ಥೆ ರೂಪಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

 ಮುಖಪುಟ /ಸುದ್ದಿ ಸಮಾಚಾರ