ಮುಖಪುಟ /ಸುದ್ದಿ ಸಮಾಚಾರ   
 

ಬಿಜೆಪಿ ನೈತಿಕ ಅಧಃಪತನಕ್ಕೆ ಸಾಕ್ಷಿ - ಜಿ. ಪರಮೇಶ್ವರ್

G.Parameswaraಬೆಂಗಳೂರು, ನ.24: ಭ್ರಷ್ಟಾಚಾರದಲ್ಲಿ ಮುಳುಗಿರುವ, ಸ್ವಜನ ಪಕ್ಷಪಾತ ಮಾಡುತ್ತಾ ರಾಜ್ಯದ ಸಂಪತ್ತು ಲೂಟಿ ಮಾಡುತ್ತಿರುವ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸುವ ನಿರ್ಧಾರ ಕೈಗೊಂಡಿರುವ ಬಿಜೆಪಿ ವರಿಷ್ಠ ಮಂಡಳಿ ನೈತಿಕ ಅಧಃಪತನ ಕಂಡಿದೆ ಎಂದು ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ವರಿಷ್ಠರು ದೆಹಲಿಯಲ್ಲಿ ತಮ್ಮ ನಿರ್ಧಾರ ಪ್ರಕಟಿಸುತ್ತಿದ್ದಂತೆ, ಪ್ರತಿಕ್ರಿಯೆ ನೀಡಿದ ಅವರು, ಆರ್.ಎಸ್.ಎಸ್. ಆದಿಪತ್ಯವೂ ಸರ್ವನಾಶವಾಗಿದೆ. ಆರ್.ಎಸ್.ಎಸ್. ಹಾಗೂ ಬಿಜೆಪಿ ಎರಡೂ ಯಡಿಯೂರಪ್ಪ ಅವರ ಬೆದರಿಕೆ ತಂತ್ರಕ್ಕೆ ಸಂಪೂರ್ಣ ಶರಣಾಗಿದೆ ಎಂಬುದು ಜಗಜ್ಜಾಹೀರಾಗಿದೆ ಎಂದರು.

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನಡೆಸಿರುವ ಎಲ್ಲ ಹಗರಣಗಳನ್ನೂ ದಾಖಲೆಗಳ ಸಹಿತ ರಾಷ್ಟ್ರದ ಎಲ್ಲ ಮಾಧ್ಯಮಗಳೂ ಬಯಲು ಮಾಡಿದವು. ಆದರೆ, ಈ ಎಲ್ಲವನ್ನೂ ಮರೆಮಾಚಿ ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸದ ಬಿಜೆಪಿ ವರಿಷ್ಠರು ರಾಜ್ಯದ ಮತದಾರರಿಗೆ, ಸಮಾಜದ ನಾಲ್ಕನೇ ಅಂಗ ಮಾಧ್ಯಮಗಳಿಗೂ ಅವಮಾನ ಮಾಡಿದ್ದಾರೆ ಎಂದು ಹೇಳಿದರು.

ಯಡಿಯೂರಪ್ಪ ಅವರ ವಿರುದ್ಧ ಸ್ವಜನ ಪಕ್ಷಪಾತದ ಹಲವು ಹಗರಣಗಳಿವೆ. ಅವರ ಮಕ್ಕಳು ಕೋಟ್ಯಂತರ ರೂಪಾಯಿ ಭೂಮಿ ಪಡೆದಿದ್ದಾರೆ. ಇದೆಲ್ಲಾ ಮನಗಂಡು ನಾಯಕತ್ವ ತ್ಯಜಿಸುವಂತೆ ಹೇಳಿದ ಅಡ್ವಾಣಿ ಅವರ ಮಾತಿಗೂ ಪಕ್ಷದಲ್ಲಿ ಬೆಲೆ ಇಲ್ಲದಂತಾಗಿದೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದರು.

ಈ ಘಟನೆಯಿಂದಾಗಿ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರಾದ ಸುಷ್ಮಾ ಸ್ವರಾಜ್ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಅರುಣ್ ಜೈಟ್ಲಿ ಇನ್ನು ಮುಂದೆ ಸದನದಲ್ಲಿ ಗೌರವಯುತವಾಗಿ ಕುಳಿತುಕೊಳ್ಳಲೂ ಕಷ್ಟವಾಗುವ ಸ್ಥಿತಿ ನಿರ್ಮಾಣ ಮಾಡಿಕೊಂಡಿದ್ದಾರೆ ಎಂದೂ ವಿಷಾದಿಸಿದರು.

ಪ್ರಜಾಪ್ರಭುತ್ವದ ಕಗ್ಗೊಲೆ

ಬಿಜೆಪಿ ನೈತಿಕ ಅಧಃಪತನ ಆರಂಭವಾಗಿದೆ. ಬಿಜೆಪಿ ವರಿಷ್ಠರು ಇಂಥ ಕೆಟ್ಟ ನಿರ್ಧಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಈ ಇಡೀ ಪ್ರಕರಣದ ಬಗ್ಗೆ ಸಿ.ಬಿ.ಐ. ತನಿಖೆ ನಡೆಸಿದರೆ ಎಲ್ಲ ವಾಸ್ತವಾಂಶಗಳೂ ಬೆಳಕಿಗೆ ಬರುತ್ತವೆ. ಈಗ ನಡೆಸಲುದ್ದೇಶಿಸಿರುವ ನ್ಯಾಯಾಂಗ ತನಿಖೆಗೆ ಅರ್ಥವೇ ಇಲ್ಲ ಎಂದು ಪರಮೇಶ್ವರ್ ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ೧೫ ವರ್ಷಗಳ ಭೂ ಹಗರಣದ ತನಿಖೆಯನ್ನು ನಿವೃತ್ತ ನ್ಯಾಯಾಧೀಶರಿಂದ ನಡೆಸಲು ಆದೇಶ ಮಾಡಿದ್ದೀರಿ. ಇದು ಮುಗಿಯುವುದು ಯಾವಾಗ, ಜೊತೆಗೆ ಈ ವರದಿಯನ್ನು ಒಪ್ಪಿಕೊಳ್ಳುವುದು ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ ಹೀಗಾಗಿ, ಲೋಕಾಯುಕ್ತರಿಂದಲೇ ತನಿಖೆ ನಡೆಸಲಿ ಇಲ್ಲವೇ ಸಿಬಿಐಗೆ ಒಪ್ಪಿಸಲಿ ಎಂದು ಹೇಳಿದರು.

ರಾಜ್ಯಾದ್ಯಂತ ಹೋರಾಟ

ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕಾಂಗ್ರೆಸ್ ಈಗಾಗಲೇ ಸಂಸತ್ತಿನ ಒಳಗೆ ಹಾಗೂ ಹೊರಗೆ ಹೋರಾಟ ನಡೆಸಿದೆ. ಇದನ್ನು ಮುಂದುವರಿಸುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ತೀವ್ರಗೊಳ್ಳಲಿದೆ. ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲೂ ಹೋರಾಟ ನಡೆಸಲಾಗುವುದು ಎಂದರು.

ಯಡಿಯೂರಪ್ಪ ನೇತೃತ್ವದ ಸರ್ಕಾರದ ಹಗರಣಗಳ ಪಟ್ಟಿ ಸರಮಾಲೆಯಂತೆ ದಿನಕ್ಕೊಂದು ಬರುತ್ತಿದ್ದು, ನಾವು ಕಾನೂನಿನ ಚೌಕಟ್ಟಿನಲ್ಲಿಯೂ ಹೋರಾಟ ಮಾಡುತ್ತೇವೆ. ಜನತಾ ನ್ಯಾಯಾಲಯದ ಮುಂದೆಯೋ ಹೋಗುತ್ತೇವೆ ಎಂದರು.

 ಮುಖಪುಟ /ಸುದ್ದಿ ಸಮಾಚಾರ