ಮುಖಪುಟ /ಸುದ್ದಿ ಸಮಾಚಾರ   
 

1994ರಿಂದೀಚೆಗಿನ ಎಲ್ಲ ಭೂಹಗರಣದ ನ್ಯಾಯಾಂಗ ತನಿಖೆ

kageriಬೆಂಗಳೂರು, ನ.18 - ಕೆ.ಐ.ಎ.ಡಿ.ಬಿ. ಜಮೀನು ಹಂಚಿಕೆ, ಡಿನೋಟಿಫಿಕೇಷನ್ ಸೇರಿದಂತೆ 1994ರಿಂದ ಅಂದರೆ ಬಹುತೇಕ ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಿಂದ ರಾಜ್ಯದಲ್ಲಿ ನಡೆದಿದೆ ಎನ್ನಲಾದ ಎಲ್ಲ ಭೂ ಹಗರಣಗಳ ಕುರಿತಂತೆ ನ್ಯಾಯಾಂಗ ತನಿಖೆ ನಡೆಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.

ಸಭೆಯ ಬಳಿಕ ವಿವರ ನೀಡಿದ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯ ಸರ್ಕಾರ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾರದೆ ಪ್ರತಿಪಕ್ಷ ಜೆಡಿಎಸ್ ಹಾಗೂ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳಿಂದ ಜನರು ಗೊಂದಲಕ್ಕೀಡಾಗಿದ್ದು, ಈ ಹಿನ್ನೆಲೆಯಲ್ಲಿ ವಾಸ್ತವಾಂಶ ಜನರಿಗೆ ತಿಳಿಯಲಿ ಎಂದು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಿಂದ ಎಲ್ಲ ಭೂ ವ್ಯವಹಾರದ ಬಗ್ಗೆ ತನಿಖೆ ನಡೆಸಲು ತೀರ್ಮಾನಿಸಲಾಯಿತು ಎಂದು ಹೇಳಿದರು.

ರಾಜ್ಯದಲ್ಲಿ ಜಾಬ್ ಓರಿಯೆಂಟೆಂಡ್ ಕೋರ್ಸ್‌ಗಳ ಆಕರ್ಷಣೆ ಕ್ಷಿಣಿಸಿದ್ದು, ವೃತ್ತಿ ಶಿಕ್ಷಣ ಆಧಾರಿತ ಶಿಕ್ಷಕರ ಸ್ಥಿತಿ ಅತಂತ್ರವಾಗಿದೆ. ಅವರು ಕಳೆದ ೨೦-೩೦ ವರ್ಷಗಳಿಂದ ಈ ಬಗ್ಗೆ ಹೋರಾಟಗಳು ನಡೆಯುತ್ತಿವೆ, ಸದನದಲ್ಲೂ ಚರ್ಚೆಗೆ ಬಂದಿತ್ತು. ಈಗ ರಾಜ್ಯ ಸರ್ಕಾರ ಮಾನವೀಯತೆಯ ಹಿನ್ನೆಲೆಯಲ್ಲಿ ಸುಮಾರು ೩೭೪೬ ಶಿಕ್ಷಕರನ್ನು ಇತರ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಲು ನಿರ್ಧರಿಸಿದೆ ಎಂದರು.

ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಚೆಕ್‌ಪೋಸ್ಟ್‌ಗಳನ್ನು ಈಗಾಗಲೇ ಕಂಪ್ಯೂಟರೀಕರಿಸಿದ್ದು, ಇಲಾಖೆಯ ಗಣಕೀಕರಣಕ್ಕೆ ೫೦ಕೋಟಿ ೭೬ ಲಕ್ಷ ರೂಪಾಯಿ ಒದಗಿಸಲು ತೀರ್ಮಾನಿಸಿತು ಎಂದರು.

ಅದೇ ರೀತಿ ನ್ಯಾಯಾಂಗ ಅಧಿಕಾರಿಗಳ ವೇತನ, ನಿವೃತ್ತ ನ್ಯಾಯಾಂಗ ಅಧಿಕಾರಿಗಳ ನಿವೃತ್ತವೇತನ ಹಾಗೂ ಕುಟುಂಬ ಪಿಂಚಣಿಯನ್ನು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹೆಚ್ಚಳ ಮಾಡಲು ಸಂಪುಟ ತೀರ್ಮಾನಿಸಿದೆ ಎಂದು ತಿಳಿಸಿದರು.

ನಬಾರ್ಡ್ ಹಣಕಾಸು ಸೇವಾ ನಿಗಮದ ವತಿಯಿಂದ ಸಣ್ಣ ಪುಟ್ಟ ಹಣಕಾಸು ಸಂಸ್ಥೆಗಳಿಗೆ ನೆರವು ನೀಡಲು ಆ ಸಂಸ್ಥೆಯಲ್ಲಿ ೧೦ ಕೋಟಿ ರೂಪಾಯಿ ಷೇರು ಬಂಡವಾಳ ಹೂಡಲು ತೀರ್ಮಾನಿಸಲಾಗಿದೆ. ಮೊರಾರ್ಜಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ಆಡಳಿತವನ್ನು ಜಿಲ್ಲಾಪಂಚಾಯ್ತಿಗಳಿಂದ ಬೇರ್ಪಡಿಸಿ ಸಮಾಜ ಕಲ್ಯಾಣ ಇಲಾಖೆಗೆ ನೀಡಲು ಸಮ್ಮತಿಸಲಾಯಿತು ಎಂದು ವಿವರಿಸಿದರು.

ಮರಳು ಗಣಿಗಾರಿಕೆಗೆ ಕಡಿವಾಣ ಹಾಕಲು ಹೊಸ ನೀತಿಯೊಂದನ್ನು ರೂಪಿಸಲು ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಸಂಪುಟ ಸಮಿತಿ ಸಭೆ ರಚಿಸಲಾಗುವುದು, ಈ ಸಮಿತಿಯಲ್ಲಿ ನೀರಾವರಿ, ಲೋಕೋಪಯೋಗಿ, ಪರಿಸರ ಮತ್ತು ಆರ್.ಡಿ.ಪಿ.ಆರ್. ಮತ್ತಿತರ ಸಚಿವರು ಇರುವರೆಂದು ಹೇಳಿದರು.

ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳು ರಾಜ್ಯದ ಅತ್ಯಂತ ಹಿರಿಯ ವಿಶ್ವವಿದ್ಯಾಲಯಗಳಾಗಿದ್ದು, ಇವುಗಳನ್ನು ಸಂಶೋಧನಾತ್ಮಕ ವಿವಿ (ಇನೋವೇಟಿವ್)ಯಾಗಿ ಘೋಷಿಸಲು ವಿಶೇಷ ಮಸೂದೆ ತರಲೂ ಸಂಪುಟ ಸಭೆ ತೀರ್ಮಾನಿಸಿದೆ.

ಬೃಹತ್ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ರಿಯಾಯಿತಿಗಳನ್ನು ನೀಡಲು ನಿಯಮಾವಳಿ ಸಡಿಲಿಸಲು, ತಳ್ಳುಗಾಡಿಯ ವ್ಯಾಪಾರಿಗಳು, ಹಾಲು ಮಾರಾಟಗಾರರು ಸೇರಿದಂತೆ ಅಸಂಘಟಿತ ವಲಯದ ಸಣ್ಣ ವ್ಯಾಪಾರಿಗಳಿಗೆ ಹಾಗೂ ಮಹಿಳಾ ಸ್ವಸಹಾಯ ಗುಂಪುಗಳಿಗೆ ಶೇಕಡಾ ೪ರ ಬಡ್ಡಿ ದರದಲ್ಲಿ ಸಹಕಾರ ಸಂಘಗಳ ಮೂಲಕ ಸಾಲ ಸೌಲಭ್ಯ ಕಲ್ಪಿಸಲೂ ತೀರ್ಮಾನಿಸಲಾಯಿತು ಎಂದು ಹೇಳಿದರು.

 ಮುಖಪುಟ /ಸುದ್ದಿ ಸಮಾಚಾರ