ಮುಖಪುಟ /ಸುದ್ದಿ ಸಮಾಚಾರ   
 

ಹಾಲೀ ಮಾಜಿ ಮುಖ್ಯಮಂತ್ರಿಗಳ ಹಾದಿರಂಪ ಬೀದಿ ರಂಪ

*ಟಿ.ಎಂ.ಸತೀಶ್
yadiyurappa h.d.kumaraswamyಬೆಂಗಳೂರು: ರಾಜ್ಯದಲ್ಲಿ ಹಿಂದೆಂದೂ ಹೀಗೆ ಆಗಿರಲಿಲ್ಲ. ಯಾವುದೇ ಮುಖ್ಯಮಂತ್ರಿಗಳು ತಮ್ಮ ಸ್ಥಾನದ ಘನತೆ ಮರೆತು ಹೀಗೆ ಹಾದಿ ಬೀದಿಯಲ್ಲಿ ಪರಸ್ಪರ ದೋಷಾರೋಪ ಮಾಡಿ ಒಬ್ಬರ ಮೇಲೆ ಒಬ್ಬರು ಕೆಸರು ಎರಚಿದ ಘಟನೆ ನಡೆದಿರಲಿಲ್ಲ.

ಈಗ ಕಳೆದ ಕೆಲವು ತಿಂಗಳುಗಳಿಂದ ರಾಜ್ಯದ ಜನತೆಗೆ ಪುಕ್ಕಟೆ ಮನರಂಜನೆ ದೊರಕುತ್ತಿದೆ. ವಿದ್ಯುನ್ಮಾನ ವಾಹಿನಿಗಳಲ್ಲಂತೂ ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳ ಮತ್ತು ಪ್ರತಿಪಕ್ಷ ನಾಯಕರ ಕೆಸರೆರಚಾಟವನ್ನು ಬಹಿರಂಗವಾಗಿಯೇ ಬಿತ್ತರಿಸುತ್ತಿದ್ದು, ರಾಜ್ಯ ರಾಜಕಾರಣದ ಬಗ್ಗೆ ಜನತೆಗೆ ಅಸಹ್ಯ ಮೂಡತೊಡಗಿದೆ.

ರಾಜಕಾರಣ ಎಂಬುದು ನೀಚರು ಆಡುವ ಕೊನೆಯ ಆಟ ಎಂದು ಬರ್ಟೆಂಡ್ ರೆಸೆಲ್ ಹೇಳಿದ್ದಾರೆ. ಈ ಮಾತನ್ನು ಪುಷ್ಟೀಕರಿಸಿದ್ದ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಇಂದು ರಾಜಕೀಯ ಹೊಲಬುಗೆಟ್ಟಿದೆ. ಚುನಾವಣೆ ವೇಳೆ ಮತದಾರರು ಯಾರು ಕಡಿಮೆ ನೀಚ ಎಂಬುದನ್ನು ನೋಡಿ ಆಯ್ಕೆ ಮಾಡಬೇಕಾದ ಸ್ಥಿತಿ ಬಂದಿದೆ ಎಂದು ಕಾರ್ಯಕ್ರಮವೊಂದರಲ್ಲಿ ವಿಷಾದ ವ್ಯಕ್ತಪಡಿಸಿದ್ದರು.

ಈಗ ರಾಜ್ಯದಲ್ಲಿ ಕೇಳಿಬರುತ್ತಿರುವ ಆರೋಪ ಪ್ರತ್ಯಾರೋಪ ಕೇಳಿದರೆ ಆ ಮಾತುಗಳು ನೆನಪಿಗೆ ಬಾರದಿರದು. ಯಡಿಯೂರಪ್ಪ ಅವರು ತಮ್ಮ ಗಂಡು ಮಕ್ಕಳಿಗೆ, ಹೆಣ್ಣುಮಕ್ಕಳಿಗೆ, ಮಗನ ನಾದಿನಿಗೆ, ಅಳಿಯನಿಗೆ ಹೀಗೆ ಬಂಧುಮಿತ್ರರಿಗೆಲ್ಲಾ ಜಮೀನು, ನಿವೇಶನ ನೀಡಿದ್ದಾರೆ ಎಂಬ ದಾಖಲೆಗಳನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಹಿರಂಗ ಮಾಡಿ ಸರ್ಕಾರದ ಮಾನ ಮರ್ಯಾದೆಯನ್ನು ಹರಾಜು ಹಾಕುತ್ತಿದ್ದಾರೆ.

ಇತ್ತ ಈ ಯಾವ ದಾಖಲೆಗಳನ್ನೂ ನಿರಾಕರಿಸದ ಮುಖ್ಯಮಂತ್ರಿ ಯಡಿಯೂರಪ್ಪ ತಾವು ಮಾಡಿದ್ದು ಏನೂ ತಪ್ಪಲ್ಲ. ಹಿಂದೆ ಆಡಳಿತ ನಡೆಸಿದವರೂ ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ನಿವೇಶನ ಕೊಟ್ಟಿದ್ದಾರೆ. ಅವರು ಮಾಡಿಲ್ಲವೇ ನಾನೇಕೆ ಮಾಡಬಾರದು ಎಂದು ವರಸೆ ತೆಗೆಯುವ ಮೂಲಕ ತಾವೂ ಕೂಡ ಅವರಂತೆಯೇ, ಬಿಜೆಪಿಯಿಂದ ಜನ ಏನೂ ಹೊಸತನ್ನು ನಿರೀಕ್ಷಿಸಬೇಡಿ ಎಂದು ಸಾಬೀತು ಮಾಡಿದ್ದಾರೆ. ಜೊತೆಗೆ ಅವರು ಮಾಡಿರುವ ಅವ್ಯವಹಾರಗಳನ್ನು ಜಾಹೀರಾತು ಮೂಲಕ ಜಗಜ್ಜಾಹೀರು ಮಾಡುವುದಾಗಿ ಹೇಳಿದ್ದಾರೆ. ಕೆಲವು ಆಯ್ದ ಪತ್ರಿಕೆಗಳಲ್ಲಿ ಈಗಾಗಲೇ ಇಂಥ ಜಾಹೀರಾತೂ ಪ್ರಕಟವಾಗಿದೆ. ಅಂದರೆ ನಮ್ಮ ಕಡೆ ಹೇಳುವಂತೆ ಎರಡೂ ದದ್ದ ಹೊರಗೆ ಹಾಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಒಟ್ಟಾರೆ ರಾಜಕೀಯಕ್ಕೆ ಬರುವುದೇ ತಾವು ಮಾಡಿಕೊಂಡಿರುವ ಹಣ, ಅಕ್ರಮ ಆಸ್ತಿ ಉಳಿಸಿಕೊಳ್ಳಲು ಇಲ್ಲವೇ ಹಣ ಮಾಡಲು ಎಂಬ ಸಾರ್ವಜನಿಕರ ಮಾತು ನಿಜವಾಗುತ್ತಿದೆ. ಅರ್ಹರು, ವಯೋವೃದ್ಧರು, ಗೌರವಾನ್ವಿತ ಜನತೆ ನಿವೇಶನಕ್ಕಾಗಿ ವರ್ಷಗಟ್ಟಲೆ ಅರ್ಜಿ ಹಾಕಿ ಕಾದು ಸಾಯುವ ಅಂಚಿನಲ್ಲಿ ನಿವೇಶನ ಪಡೆದರೆ ಮತ್ತೆ ಕೆಲವರಿಗೆ ಈ ಭಾಗ್ಯವೇ ಇಲ್ಲದಂತಾಗಿದೆ.

ಕನಕಪುರ ಕ್ಷೇತ್ರದ ಹಿರಿಯ ಗಾಂಧಿವಾದಿ ಮಾದೇಗೌಡ ಎನ್ನುವವರಿಗೆ ೧೯೭೦ರ ದಶಕದ ಕೊನೆಯಲ್ಲಿ ಅಂದಿನ ಸಿ.ಐ.ಟಿ.ಬಿ.ಯಿಂದ ನಿವೇಶನ ಮಂಜೂರಾಗಿತ್ತು. ಅದು ತೀರಾ ಹಳ್ಳದಲ್ಲಿ ಇದ್ದ ಕಾರಣ, ಇಲ್ಲಿ ಮನೆ ಕಟ್ಟಲು ಸಾಧ್ಯವಿಲ್ಲ ತಮಗೆ ಬೇರೆ ನಿವೇಶನ ಕೊಡಿ ಎಂದು ಅವರು ಅರ್ಜಿ ಕೊಟ್ಟರು. ಸ್ಥಳ ಪರಿಶೀಲಿಸಿದ ಎಂಜಿನಿಯರಿಂಗ್ ವಿಭಾಗ ಕೂಡ ಅದೇ ಅಭಿಪ್ರಾಯ ವ್ಯಕ್ತಪಡಿಸಿ ಇವರಿಗೆ ಪರ್ಯಾಯ ನಿವೇಶನ ಕೊಡಬಹುದು ಎಂದು ಹೇಳಿತು. ಆದರೆ, ಪಾಪ ಆ ಗಾಂಧೀ ವಾದಿಗಳು ಇನ್ನೂ ಬಿಡಿಎಗೆ ಅಲೆಯುತ್ತಿದ್ದಾರೆ. ಅವರಿಗೆ ನಿವೇಶನ ಸಿಕ್ಕಿಲ್ಲ. ನ್ಯಾಯಾಲಯ ಕೂಡ ಇವರ ಪರವಾಗಿ ತೀರ್ಪು ನೀಡಿದೆ. ಆದರೂ ಬಿಡಿಎ ತಲೆ ಕೆಡಿಸಿಕೊಂಡಿಲ್ಲ. ಆದರೆ ಮಂತ್ರಿಗಳ ಮಕ್ಕಳು ರಸ್ತೆಯನ್ನೇ ನಿವೇಶನ ಮಾಡಿಕೊಡಿ ಎಂದರೂ ಅದು ಕೇವಲ ನಾಲ್ಕಾರು ದಿನದಲ್ಲೇ ಆಗಿ ಹೋಗುತ್ತದೆ. ಅದಕ್ಕೇ ಬಂಡಾಯ ಕವಿ ಹೇಳಿದ್ದು ಶ್ರೀಮಂತ ಸೀನುತಿರೆ ಕೇರಿ ಕೇರಿಯಲಿ ಪ್ರತಿಧ್ವನಿ, ಬಡವ ಸನ್ನಿಪಾತದಲಿ ಸಾಯುತ್ತಿದ್ದರೂ ಕೇಳುವವರಿಲ್ಲ. ನೋಡುವವರಿಲ್ಲ ಎಂದು.

ಒಟ್ಟಿನಲ್ಲಿ ರಾಜ್ಯದಲ್ಲಿ ಸರ್ಕಾರಿ ಭೂಮಿ, ಖಾಸಗಿ ಭೂಮಿ ಎಲ್ಲವೂ ಇನ್ನು ಕೆಲವೇ ವರ್ಷಗಳಲ್ಲಿ ಬಲಿಷ್ಠರ, ರಾಜಕಾರಣಿಗಳ ಪಾಲಾಗುವುದರಲ್ಲಿ ಸಂದೇಹವಿಲ್ಲ ಎಂಬುದು ವೇದ್ಯವಾಗುತ್ತಿದೆ. ಮೊನ್ನೆ ಬಿಹಾರ ಚುನಾವಣೆ ಫಲಿತಾಂಶದ ಬಳಿಕ ಮಾತನಾಡಿದ ಅನಂತಕುಮಾರ್, ಬಿಹಾರ ಈಗ ರಾಮರಾಜ್ಯವಾಗಿದೆ. ಕರ್ನಾಟಕ ಲಾಲೂ ರಾಜ್ಯ ಆಗುತ್ತಿದೆ ಎಂದು ಹೇಳಿದರು. ಅದು ನಿಜವಾಗುವ ಎಲ್ಲ ಲಕ್ಷಣವೂ ಕಾಣಿಸುತ್ತಿದೆ. ಇದು ರಾಜ್ಯದ ಹಿತದೃಷ್ಟಿಯಿಂದ ಖಂಡಿತಾ ಸಾಧುವಲ್ಲ. ಪ್ರಜ್ಞಾವಂತರು ಈ ಬಗ್ಗೆ ಚಿಂತಿಸದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ.

 ಮುಖಪುಟ /ಸುದ್ದಿ ಸಮಾಚಾರ