ಮುಖಪುಟ /ಸುದ್ದಿ ಸಮಾಚಾರ   
 

ಜನತೆಯ ಮುಂದೆ ಹೋಗ್ತೇವೆ - ಎಚ್ಡಿಕೆ

H.D.Kumaraswamy

ಬೆಂಗಳೂರು, ನ.24:ಭ್ರಷ್ಟಾಚಾರದಲ್ಲಿ ಮುಳುಗಿರುವ ಯಡಿಯೂರಪ್ಪ ಅವರ ರಾಜೀನಾಮೆ ಪಡೆಯದೆ ಅವರನ್ನೇ ಮುಂದುವರಿಸಿರುವ ಬಿಜೆಪಿ ವರಿಷ್ಠರು ರಾಜ್ಯದ ಜನತೆಗೆ ಘನಗೋರ ಅವಮಾನ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ನಾವು ವಿರೋಧ ಪಕ್ಷದಲ್ಲಿ ಕುಳಿತು ನಮ್ಮ ಕರ್ತವ್ಯ ಮಾಡಿದ್ದೇವೆ. ಆದರೆ ದಾಖಲೆ ಸಹಿತ ಆರೋಪಗಳು ಸಾಬೀತಾಗಿದ್ದರೂ ಬಿಜೆಪಿ ವರಿಷ್ಠರು ಅದನ್ನು ಮುಚ್ಚಿಕೊಂಡಿರುವುದು ಅವರ ದೌರ್ಬಲ್ಯ ತೋರಿಸುತ್ತದೆ ಎಂದರು.  ರಾಜ್ಯದ ಅತಂತ್ರ ಸ್ಥಿತಿಗೆ ಬಿಜೆಪಿ ನಾಯಕರೇ ಕಾರಣ ಎಂದು ಕುಮಾರಸ್ವಾಮಿ ಹೇಳಿದರು.

ರಾಜ್ಯದಲ್ಲಿ ಸುಭದ್ರ ಸರ್ಕಾರ ಇಲ್ಲ, ಲಜ್ಜೆಗೆಟ್ಟ ಸರ್ಕಾರ ರಾಜ್ಯದಲ್ಲಿದೆ, ಮಾನ ಮಾರ್ಯಾದೆ ಇಲ್ಲದವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ ಎಂಬುದು ಈಗ ಜಗಜ್ಜಾಹೀರಾಗಿದೆ. ಅವರಿಗೆ ನೈತಿಕತೆ ಇದ್ದಿದ್ದರೆ ಅವರು ರಾಜೀನಾಮೆ ಕೊಡುತ್ತಿದ್ದರು ಎಂದರು.

ಮುಖ್ಯಮಂತ್ರಿಗಳ ಮಕ್ಕಳು, ಅಳಿಯನ ಬ್ಯಾಂಕ್ ಖಾತೆಗೆ ೨೦ ಕೋಟಿ ರೂಪಾಯಿ ವರ್ಗಾವಣೆ ಆಗಿದೆ. ಇದು ಭೂಮಿ ಮಾರಿದ ಹಣ ಎಂದು ಹೇಳಿದ ಮುಖ್ಯಮಂತ್ರಿ ಮಕ್ಕಳು ಕೇವಲ ೨ ದಿನಗಳ ಹಿಂದೆ ಕಾಗದ ಪತ್ರ ಸೃಷ್ಟಿಸಿದ್ದಾರೆ ಎಂದು ದೂರಿದರು.

ಡಿ.೧ರಿಂದ ಬೀದರ್‌ನಿಂದ ರಥಯಾತ್ರೆ

ಈಗಾಗಲೇ ನಾವು ಬಿಡುಗಡೆ ಮಾಡಿರುವ ದಾಖಲೆಗಳ ಆಧಾರದ ಮೇಲೆ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ. ಜನತಾ ನ್ಯಾಯಾಲಯದ ಎದುರೂ ಹೋಗಲು ನಿರ್ಧರಿಸಿದ್ದೇವೆ. ಡಿಸೆಂಬರ್೧ರಿಂದ ಬೀದರ್‌ನಿಂದ ಚಾಮರಾಜನಗರದವರೆಗೆ ತಾವು ರಥಯಾತ್ರೆ ಕೈಗೊಳ್ಳುವುದಾಗಿ ಕುಮಾರಸ್ವಾಮಿ ಹೇಳಿದರು.

ಕಳೆದ ವರ್ಷ ಭೀಕರ ನೆರೆಗೆ ಸಿಲುಕಿದ ಗದಗ, ರಾಯಚೂರು, ಬಳ್ಳಾರಿ ಸೇರಿದಂತೆ ಉತ್ತರ ಕರ್ನಾಟಕದ, ಹೈದ್ರಾಬಾದ್ ಕರ್ನಾಟಕದ ಜನತೆ ಇನ್ನೂ ನಿರಾಶ್ರಿತರ ಶೆಡ್‌ಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಇವರಿಗೆ ಮನೆ ಕೊಡಲಾಗದ ಸರ್ಕಾರ, ತಮ್ಮ ಮಕ್ಕಳಿಗೆ ಕೋಟ್ಯಂತರ ರೂಪಾಯಿ ನಿವೇಶನ, ಜಮೀನು ಕೊಡುತ್ತಿದೆ.

ತಮ್ಮ ಹೆಣ್ಣು ಮಕ್ಕಳಿಗೆ ಕೋಟಿ ಕೋಟಿ ಬೆಲೆ ಬಾಳುವ ಜಮೀನು ಮಂಜೂರು ಮಾಡಿ, ಭಾಗ್ಯಲಕ್ಷ್ಮೀ ತಾಯಂದಿರಿಗೆ ಸೀರೆ ಕೊಡುತ್ತಿದೆ. ಈ ಸೀರೆಯಲ್ಲೂ ಹಣ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.

ಕಳೆದ ೧೦ ದಿನಗಳ ಕಾಲ ಸಂಸತ್ತಿನ ಕಲಾಪ ಹಾಳು ಮಾಡಿದ್ದಾದರೂ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಹಾಗೂ ಬಿಜೆಪಿ ಈ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಕಾನೂನು ಬಾಹಿರ ಚಟುವಟಿಕೆ ಬಗ್ಗೆ ನ್ಯಾಯಯುತ ತೀರ್ಮಾನ ಕೈಗೊಳ್ಳುವ ಧೈರ್ಯವೇ ಇಲ್ಲ. ಅವರು ನೈತಿಕತೆ ಕಳೆದುಕೊಂಡಿದ್ದಾರೆ ಎಂದರು. ಒಂದೆರೆಡು ದಿನಗಳಲ್ಲೇ ಸಂಸತ್ ಅಧಿವೇಶನ ಅನಿರ್ದಿಷ್ಟಾವಧಿ ಮುಂದಕ್ಕೆ ಹೋಗುವ ಸಾಧ್ಯತೆಯೂ ಇದೆ ಎಂದು ಕುಮಾರಸ್ವಾಮಿ ಹೇಳಿದರು.

 ಮುಖಪುಟ /ಸುದ್ದಿ ಸಮಾಚಾರ