ಮುಖಪುಟ /ಸುದ್ದಿ ಸಮಾಚಾರ   
 

ಕರ್ನಾಟಕ ಆಗಲಿದೆ ಹಸಿರು ನಾಡು- ವಿಜಯಶಂಕರ್

Vijayashankaraಬೆಂಗಳೂರು, ನ.೨೯: ಪರಿಸರ ಸಂರಕ್ಷಣೆಯ ಅಂಗವಾಗಿ ರಾಜ್ಯ ಸರ್ಕಾರ  ಹಸಿರೀಕರಣ ಯೋಜನೆಯನ್ನು ಸಿದ್ಧಪಡಿಸುತ್ತಿದ್ದು, ಇದರಡಿಯಲ್ಲಿ ರಾಜ್ಯಾದ್ಯಂತ ಸಾಲು ಮರ ನೆಡುವ ಕಾರ್ಯಕ್ರಮ ಸಾಕಾರಗೊಳ್ಳಲಿದೆ ಎಂದು ಅರಣ್ಯ ಸಚಿವ ವಿಜಯಶಂಕರ್ ತಿಳಿಸಿದ್ದಾರೆ

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ವಿವಿಧ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಯಾರ ಯಾರ ಪಾತ್ರ ಏನು ಎಂಬ ಬಗ್ಗೆ ಚಿಂತನೆ ನಡೆದಿದೆ. ಶೀಘ್ರವೇ ಈ ಯೋಜನೆಗೆ ಅಂತಿಮ ಸ್ವರೂಪ ನೀಡಲಾಗುವುದು ಎಂದು ಹೇಳಿದರು.

ನೀಲಗಿರಿ ಮತ್ತು ಅಕೇಷಿಯಾ ಮರ ಬೆಳೆಸುವುದೇ ಅರಣ್ಯೀಕರಣವಲ್ಲ. ಇದು ಭಾರತದ ವಾಯುಗುಣದಲ್ಲಿ ಅಸಮಾನತೆ ಉಂಟು ಮಾಡುತ್ತಿದ್ದು, ಅಂತರ್ಜಲವನ್ನೂ ನಾಶಪಡಿಸುತ್ತಿದೆ. ಈ ನಿಟ್ಟಿನಲ್ಲಿ ಈ ಎರಡೂ ಮರ ಬೆಳೆಸುವುದನ್ನು ನಿಷೇಧಿಸಲಾಗುವುದು ಎಂದರು.

ಸಾಂಪ್ರದಾಯಿಕವಾದ ಮಾವು, ಹುಣಸೆ, ಆಲ, ನೇರಳೆ ಇತ್ಯಾದಿ ಸಸಿ ನೆಟ್ಟು, ಮರ ಬೆಳೆಸುವ ಬಗ್ಗೆ ವಿವಿಧ ಇಲಾಖೆಗಳಿಗೆ ಸೂಚಿಸಲಾಗುವುದು. ಅದೇ ರೀತಿ ಅತ್ಯಂತ ಬೆಲೆ ಬಾಳುವ ರಾಜರ್ಷಿ ವೃಕ್ಷಗಳೆಂದೇ ಖ್ಯಾತವಾದ ಗಂಧದ ಮರ ಮತ್ತು ತೇಗದ ಮರಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸುವ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಈ ವೃಕ್ಷ ಬೆಳೆಸುವ ನಿಟ್ಟಿನಲ್ಲಿ ಜನರಲ್ಲಿ ಮನೆ ಮಾಡಿರುವ ಗೊಂದಲ ನಿವಾರಿಸಲಾಗುವುದು ಎಂದೂ ಹೇಳಿದರು.

ಸ್ಥಳೀಯ ಸಂಸ್ಥೆಗಳು ತಮ್ಮ ವಲಯವನ್ನು ಹಚ್ಚು ಹಸುರಾಗಿ ಇಟ್ಟುಕೊಳ್ಳಲು ಯಾವುದೇ ಯೋಜನೆ ರೂಪಿಸದಿರುವುದು ಅಚ್ಚರಿ ತಂದಿದೆ ಎಂದು ಹೇಳಿದ ಅವರು, ನಾಲಾ ಪ್ರದೇಶಗಳಲ್ಲಿ ಕೂಡ ಹಸಿರು ಬೆಳೆಸಲು ಸೂಚಿಸಲಾಗುವುದು. ಇಲ್ಲವಾದರೆ ಅರಣ್ಯ ಇಲಾಖೆಯೇ ಇಲ್ಲಿ ಹೊಂಗೆ, ಹುಣಸೆ ಇತ್ಯಾದಿ ಉಪಯುಕ್ತ ಸಸಿ ನೆಟ್ಟು, ಅದನ್ನು ಹಸಿರು ವಲಯ ಮಾಡಿ ನಂತರ ಅವರಿಗೇ ಹಸ್ತಾಂತರಿಸಲಾಗುವುದು ಎಂದೂ ಹೇಳಿದರು.

ಶಿಕ್ಷಣ ಇಲಾಖೆಯನ್ನು ಮುಖ್ಯವಾಗಿ ಈ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದು, ಮಗುವಿಗೊಂದು ಮರ ಯೋಜನೆಯಡಿ ಪ್ರತಿಯೊಂದು ಶಾಲೆಯಲ್ಲಿಯೂ ಮರ ಬೆಳೆಸುವ ಕಾರ್ಯಕ್ರಮ ಏರ್ಪಡಿಸಿ, ಶೈಕ್ಷಣಿಕ ಪ್ರವಾಸದ ವೇಳೆ ಮಕ್ಕಳಿಗೆ ಪ್ರಾಕೃತಿಕ ಅಸಮತೋಲನದ ಬಗ್ಗೆ ಅರಿವು ಮೂಡಿಸಲು ಮತ್ತು ಮರ ಬೆಳೆಸುವ ಬಗ್ಗೆ ಆಸಕ್ತಿ ಮೂಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಹೆದ್ದಾರಿಗಳ ವಿಸ್ತರಣೆ ಕಾರ್ಯ ನಡೆದ ಮೇಲೆ ರಸ್ತೆಯ ಪಕ್ಕದಲ್ಲಿ ಎಲ್ಲಿಯೂ ಈಗ ಮರಗಳೇ ಕಾಣುತ್ತಿಲ್ಲ. ಹೀಗಾಗಿ ಸಾಲುಮರದ ನೀತಿ ತರಲು ಸರ್ಕಾರ ಚಿಂತಿಸಿದ್ದು, ರಸ್ತೆಯ ಎರಡೂ ಪಕ್ಕದಲ್ಲಿ ಗಿಡ ನೆಟ್ಟು ಬೆಳೆಸಲು ಯೋಜನೆ ರೂಪಿಸಲಾಗಿದೆ. ಈ ಯಾವುದೇ ಯೋಜನೆಗೂ ಹಣಕಾಸಿನ ಕೊರತೆ ಇಲ್ಲ. ಇದಕ್ಕೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ನೆರವೂ ದೊರೆಯಲಿದೆ ಇದನ್ನು ಸಮರ್ಥವಾಗಿ ಬಳಸಿಕೊಂಡು ರಾಜ್ಯವನ್ನು ಹಸಿರು ನಾಡಾಗಿ ಪರಿವರ್ತಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿರುವ ಎಲ್ಲ ಗಿರಿ ಕ್ಷೇತ್ರಗಳಲ್ಲಿ ನರ್ಸರಿ ಆರಂಭಿಸಲು ನಿರ್ಧರಿಸಲಾಗಿದ್ದು, ಈ ಯೋಜನೆಗಾಗಿ ಬೆಟ್ಟದ ಮೇಲೆ ದೇವಾಲಯ ಇರುವ ತಾಣಗಳನ್ನು ಗುರುತಿಸುವ ಕಾರ್ಯ ಆರಂಭವಾಗಿದೆ. ಪ್ರಾಥಮಿಕ ಹಂತದಲ್ಲಿ ಮೈಸೂರಿನ ಚಾಮುಂಡಿಬೆಟ್ಟ ಮತ್ತು ಕೋಲಾರದ ಅಂತರಗಂಗೆಯಲ್ಲಿ ನರ್ಸರಿ ಆರಂಭಿಸಲಾಗುವುದು ಎಂದು ಹೇಳಿದರು.

ಹಸಿರೇ ಉಸಿರಾಗಿದ್ದು, ಈ ನಿಟ್ಟಿನಲ್ಲಿ ಹಸಿರು ಬೆಳೆಸುವ ಸಂಸ್ಥೆಗಳಿಗೆ, ಇಲಾಖೆಗಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಬಗ್ಗೆ ಚಿಂತನೆ ನಡೆದಿದೆ. ಅರಣ್ಯೀಕರಣ ತಡೆಗೆ ಸಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ತಂಬಾಕು ಉತ್ಪನ್ನ ತಯಾರಿಕೆಯ ವೇಳೆ ತಂಬಾಕು ಸಂಸ್ಕರಣೆಗೆ ಹಿಂದೆ ಕಲ್ಲಿದ್ದಲು ಬಳಸುತ್ತಿದ್ದರು ಆದರೆ ಈಗ ಸೌದೆ ಬಳಸಲಾಗುತ್ತಿದ್ದು ಪ್ರತಿ ವರ್ಷ ಇದಕ್ಕಾಗಿ ೮೦ ಲಕ್ಷ ಟನ್ ಸೌದೆ ಉರುವಲಾಗುತ್ತಿದೆ. ಇದರಿಂದ ಅರಣ್ಯನಾಶವಾಗುತ್ತಿದ್ದು, ಅಂತರ್ಜಲ ಮಟ್ಟವೂ ಕುಸಿದಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಕಲ್ಲಿದ್ದಲ್ಲನ್ನೇ ಬಳಸುವಂತೆ ತಂಬಾಕು ಮಂಡಳಿಗೆ ಸೂಚಿಸಲಾಗಿದ್ದು, ಅವರು ಕಾಲಾವಕಾಶ ಕೋರಿದ್ದಾರೆ ಎಂದು ತಿಳಿಸಿದರು.

 ಮುಖಪುಟ /ಸುದ್ದಿ ಸಮಾಚಾರ