ಮುಖಪುಟ /ಸುದ್ದಿ ಸಮಾಚಾರ   
 

ಅನರ್ಹ ಶಾಸಕರ ಪ್ರಕರಣ ಮುಂದಕ್ಕೆ

Highcourtಬೆಂಗಳೂರು, ನ.೨೯ : ಐವರು ಪಕ್ಷೇತರ ಶಾಸಕರ ಅನರ್ಹತೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ರಾಜ್ಯ ಹೈಕೋರ್ಟ್‌ನ ಪೂರ್ಣ ಪೀಠ ವಿಚಾರಣೆಯನ್ನು ಮುಂದೂಡಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರನ್ನು ನೇರವಾಗಿ ಪಕ್ಷಕಾರರನ್ನಾಗಿ ಮಾಡಬೇಕು ಎಂಬ ಪಕ್ಷೇತರ ಶಾಸಕರ ಮನವಿಯನ್ನು ಪೀಠ ಈ ಹಿಂದೆ ಪುರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಹಾಗೂ ಸಭಾಧ್ಯಕ್ಷರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ತಮ್ಮನ್ನು ಪಕ್ಷಕಾರರನ್ನಾಗಿ ಮಾಡಿರುವುದನ್ನು ಕೈಬಿಡುವಂತೆ ಕೋರಿರುವ ಹಿನ್ನೆಲೆಯಲ್ಲಿ ಆ ಪ್ರಕರಣ ಅಲ್ಲಿ ಇತ್ಯರ್ಥವಾಗುವವರೆಗೆ ಪ್ರಕರಣದ ವಿಚಾರಣೆ ಮುಂದೂಡುವುದು ಸೂಕ್ತ ಎಂದು ನ್ಯಾಯಮೂರ್ತಿಗಳಾದ ಮೋಹನ ಶಾಂತನಗೌಡರ್, ಅಬ್ದುಲ್ ನಜೀರ್ ಹಾಗೂ ಎ.ಎಸ್. ಬೋಪಣ್ಣ ಅವರನ್ನು ಒಳಗೊಂಡ ಪೀಠ ಅಭಿಪ್ರಾಯಪಟ್ಟಿತು.

ಸರ್ವೋನ್ನತ ನ್ಯಾಯಾಲಯದಲ್ಲಿ ಮೇಲ್ಕಂಡ ವಿಚಾರದಲ್ಲಿ ಸ್ಪಷ್ಟ ತೀರ್ಪು ಬರುವವರೆಗೆ ಯಾವುದೇ ದಿನಾಂಕವನ್ನು ನೀಡಲೂ ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಹೇಳಿದರು.

ಪಕ್ಷೇತರ ಶಾಸಕರಾದ ನರೇಂದ್ರಸ್ವಾಮಿ, ವೆಂಕಟರಮಣಪ್ಪ, ಗೂಳಿಹಟ್ಟಿ ಶೇಖರ್, ಡಿ.ಸುಧಾಕರ್ ಹಾಗೂ ಶಿವರಾಜ ತಂಗಡಗಿ ಅವರನ್ನು ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರು ಅಕ್ಟೋಬರ್ 10ರಂದು ಶಾಸಕತ್ವದಿಂದ ಅನರ್ಹಗೊಳಿಸಿ ನೀಡಿರುವ ಆದೇಶ ಪ್ರಶ್ನಿಸಿ ಈ ಐವರೂ ಹೈಕೋರ್ಟ್ ಮೊರೆ ಹೋಗಿದ್ದಾರೆ.

 

 ಮುಖಪುಟ /ಸುದ್ದಿ ಸಮಾಚಾರ