ಮುಖಪುಟ /ಸುದ್ದಿ ಸಮಾಚಾರ   
 

ಉಳಿದ ಅವಧಿಗೂ ನಾನೇ ಮುಖ್ಯಮಂತ್ರಿ - ಯಡಿಯೂರಪ್ಪ

Yadiyurappaಬೆಂಗಳೂರು, ನ.19 - ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಮುಂದಿನ ಎರಡೂವರೆ ವರ್ಷವೂ ನಾನೆ ಮುಖ್ಯಮಂತ್ರಿ ಎಂದು ಬಿ.ಎಸ್. ಯಡಿಯೂರಪ್ಪ ಬೆಂಗಳೂರಿನಲ್ಲಿಂದು ಪುನರುಚ್ಚರಿಸಿದ್ದಾರೆ.

ರಾಜ್ಯದಲ್ಲಿ ತಮ್ಮ ವಿರುದ್ಧ ಕೇಳಿಬರುತ್ತಿರುವ ಭೂಹಗರಣ ಆರೋಪಗಳ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರೊಂದಿಗೆ ದೂರವಾಣಿ ಮೂಲಕ ತಾವು ಮಾತನಾಡಿದ್ದು, ಅವರು ರಾಜ್ಯದ ಆಡಳಿತದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದರು.

ಸಂಪುಟದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಈ ಮಾತುಕತೆ ವೇಳೆ ಗಡ್ಕರಿ ಅವರು ಭರವಸೆ ನೀಡಿರುವುದಾಗಿ ಯಡಿಯೂರಪ್ಪ ತಿಳಿಸಿದರು.

ನಾಯಕತ್ವ ಬದಲಾವಣೆ ಕುರಿತಂತೆ ಪಕ್ಷದ ಯಾವುದೇ ಶಾಸಕರು ಸಹಿ ಸಂಗ್ರಹಣೆಯಲ್ಲಿ ತೊಡಗಿಲ್ಲ, ತಮ್ಮ ನಾಯಕತ್ವ ಬದಲಾವಣೆ ಮಾಡಬೇಕೆಂದು ಕೆಲವು ಶಾಸಕರು ಸಹಿ ಸಂಗ್ರಹದಲ್ಲಿ ತೊಡಗಿದ್ದಾರೆ ಮತ್ತು ಆರ್.ಎಸ್.ಎಸ್. ಮುಖಂಡರು ಮತ್ತು ಕೇಂದ್ರ ಬಿಜೆಪಿ ನಾಯಕರು ತಮ್ಮ ಆಡಳಿತ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ, ಕಿಡಿ ಕಾರಿದ್ದಾರೆ ಎಂಬೆಲ್ಲಾ ವರದಿಗಳು ಸತ್ಯಕ್ಕೆ ದೂರವಾದವು ಎಂದು ಅವರು ಸಮಜಾಯಿಷಿ ನೀಡಿದರು.

ತಮ್ಮ ನಾಯಕತ್ವ ಬದಲಾವಣೆ ಕುರಿತಂತೆ ಬರುತ್ತಿರುವ ವರದಿಗಳೆಲ್ಲವೂ ಮಾಧ್ಯಮ ಸೃಷ್ಟಿ ಎಂದರು.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಹಾಗೂ ತಾವು ಪಕ್ಷ ಬೆಳೆಸಲು ಹೋರಾಟ ಮಾಡಿದ್ದೇವೆ. ನಮ್ಮಿಬ್ಬರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ತಾವು ಅವರ ವಿರುದ್ಧ ಹೈಕಮಾಂಡ್‌ಗೆ ಪತ್ರ ಬರೆದಿಲ್ಲ ಎಂದು ಹೇಳಿದರು.

ತಮ್ಮ ಮತ್ತು ಅನಂತಕುಮಾರ್ ನಡುವೆ ಉತ್ತಮ ಬಾಂಧವ್ಯವಿದೆ ಎಂದು ಯಡಿಯೂರಪ್ಪ ತಿಳಿಸಿದರು. ಭೂ ಹಗರಣ ಕುರಿತಂತೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶರಿಂದ ಸಮಗ್ರ ತನಿಖೆ ನಡೆಸುವ ಬಗ್ಗೆ ತೀರ್ಮಾನ ಪ್ರಕಡಿಸಲಾಗುವುದು ಎಂದು ಹೇಳಿದರು.

ಗಡ್ಕರಿ ಆಗಮನ

ರಾಜ್ಯಕ್ಕೆ ಮುಂದಿನ ವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಆಗಮಿಸುತ್ತಿದ್ದು, ಅವರೊಂದಿಗೆ ಎಲ್ಲ ವಿಚಾರಗಳ ಬಗ್ಗೆ ಚರ್ಚಿಸಲಾಗುವುದು. ನಮ್ಮ ಭಾಗ್ಯಲಕ್ಷ್ಮೀ ಯೋಜನೆಯ ಯಶಸ್ಸಿನ ಬಗ್ಗೆ ಗಡ್ಕರಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಾಗ್ಯಲಕ್ಷ್ಮೀ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ಸಚಿವೆ ಶೋಭಾ ಕರಂದ್ಲಾಜೆ ಅವರು ಭೂ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ವರದಿಗಳಿವೆಯಲ್ಲ ಎಂದು ಕೇಳಿದ ಪ್ರಶ್ನೆಗೆ ಸಚಿವೆ ಶೋಭಾ ಕರಂದ್ಲಾಜೆ ಸಮರ್ಥವಾಗಿ ಉತ್ತರಿಸುತ್ತಾರೆ ಎಂದು ಅವರು ತಿಳಿಸಿದರು.             

 

 ಮುಖಪುಟ /ಸುದ್ದಿ ಸಮಾಚಾರ