ಮುಖಪುಟ /ಸುದ್ದಿ ಸಮಾಚಾರ   
 

ಮುಂದಿನ ವರ್ಷ 10 ಲಕ್ಷ ಸ್ವ ಸಹಾಯ ಸಂಘಗಳಿಗೆ  ಸಹಾಯಧನ

yadiyurappaಬೆಂಗಳೂರು, ನ 18: ರಾಜ್ಯದಲ್ಲಿ ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ  ಸೀರೆ, ಬಾಂಡ್, ಆರೋಗ್ಯ ತಪಾಸಣೆ ನೀಡುತ್ತಿರುವಂತೆಯೇ ಮುಂದಿನ ವರ್ಷ 10 ಲಕ್ಷ ಸ್ವ ಸಹಾಯ ಸಂಘಗಳಿಗೆ ಒಂದು ಲಕ್ಷ ಇಪ್ಪತ್ತೈದು ಸಾವಿರ ಧನ ಸಹಾಯ ನೀಡಿ ಅವರನ್ನು ಸ್ವಾವಲಂಭಿಗಳಾಗಿ ಬದುಕಲು ನೆರವು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ತಿಳಿಸಿದರು. 

ಅವರು ಚಿಕ್ಕಬಳ್ಳಾಪುರ ಸರ್. ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಏರ್ಪಡಿಸಿದ್ದ ಭಾಗ್ಯಲಕ್ಷ್ಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ವಿಶ್ವದಲ್ಲಿಯೇ ಭಾಗ್ಯಲಕ್ಷ್ಮಿ ಕಾರ್ಯಕ್ರಮ ವಿನೂತನವಾಗಿದ್ದು ಕ್ರಾಂತಿಕಾರಿಯಾಗಿದ್ದು ಇದರಿಂದ ಎಲ್ಲಾ ಹೆಣ್ಣು ಮಕ್ಕಳಿಗೂ ಪದವಿ ವರೆವಿಗೂ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದರಲ್ಲದರೆ ಹುಟ್ಟಿದ ಹೆಣ್ಣು ಮಗುವು 18 ವರ್ಷ ತುಂಬುವವರೆಗೂ ಸೀರೆ ಪಡೆದುಕೊಳ್ಳುತ್ತಾಳೆ  ಅದರ ಜೊತೆಗೆ ಒಂದು ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ಎಲ್ಲ ಮಕ್ಕಳಿಗೂ ಶಿಕ್ಷಣ ನೀಡಲಾಗುವುದು ಅದರಿಂದ ಅವರು ಸ್ವಾಭಿಮಾನದಿಂದ ಬದುಕಲು ಸಾಧ್ಯವೆಂದರಲ್ಲದೆ ಸರ್ವರಿಗೂ ಶಿಕ್ಷಣ ನೀಡುವುದೇ ನನ್ನ ಗುರಿಯಾಗಿದೆ ಎಂದು ಅವರು ತಿಳಿಸಿದರು.   

ಸರ್. ಎಂ. ವಿಶ್ವೇಶ್ವರಯ್ಯನವರ ಜನ್ಮಸ್ಥಳ ಮುದ್ದೇನಹಳ್ಳಿಯಲ್ಲಿ ಸ್ನಾತಕೋತ್ತರ ಕೇಂದ್ರ ತೆರೆಯಲು  ಐದು ಕೋಟಿ ರೂ. ಮಂಜೂರು ಮಾಡಲಾಗಿದೆ.  ಇಲ್ಲಿ ಎಲ್ಲ ಪದವಿಕೋರ್ಸ್‌ಗಳು ಪ್ರಾರಂಭವಾಗಲಿವೆ ಎಂದರು.

ದುರ್ಬಲವರ್ಗದವರಿಗೆ ಸಾಲ ನೀಡಲು 5೦೦ ಕೋಟಿ ರೂ. ಮೀಸಲಿಡಲಾಗಿದೆ ಇದರ ಜೊತೆಗೆ ಸ್ತ್ರೀ ಶಕ್ತಿ ಗುಂಪುಗಳು ತಯಾರಿಸುವ ವಸ್ತುಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದೆಂದರು. 

ರಾಜ್ಯದಲ್ಲಿ 12ಲಕ್ಷ ಫಲಾನುಭವಿಗಳಿಗೆ ಸೀರೆ ಮತ್ತು ಬಾಂಡ್‌ಗಳನ್ನು ನೀಡಲಾಗಿದೆ.  ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ ಎಂದರು.  ಹಿಂದುಳಿದ ಜಿಲ್ಲೆಗಳಲ್ಲಿ ಶಾಶ್ವತ ನೀರಾವರಿಗಾಗಿ ಹೈದರಾಬಾದ್ ಸಂಸ್ಥೆ ಸರ್ವೇಕಾರ್ಯ ಪ್ರಾರಂಭಿಸಿದ್ದು ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದೆಂದರು. 

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ೫೦ ಕೋಟಿ ರೂ. ಪ್ಯಾಕೇಜ್ ಮಂಜೂರು ಮಾಡಿರುತ್ತೇನೆಂದು ತಿಳಿಸಿದರು.

ಹೆಣ್ಣು ಮಕ್ಕಳು ಕಣ್ಣೀರು ಸುರಿಸದಂತೆ ನೋಡಿಕೊಳ್ಳಲು ಕಾರ್ಯಕ್ರಮ ರೂಪಿಸಿದ್ದು ಪ್ರಥಮ ಹಂತದಲ್ಲಿ ಶಿಕ್ಷಣ ನೀಡಲಾಗುತ್ತದೆ ಎಂದರು.  ಸರ್. ಎಂ. ವಿಶ್ವೇಶ್ವರಯ್ಯನವರ ಜನ್ಮಸ್ಥಳ, ಜಿಲ್ಲೆಗೆ ಎಲ್ಲಾ ರೀತಿಯ ನೆರವು ನೀಡುವ ಮೂಲಕ ಜಿಲ್ಲಾ ಆಡಳಿತ ಸಂಕೀರ್ಣ, ಜಿಲ್ಲಾ ಪಂಚಾಯತ್ ಕಛೇರಿ ಹಾಗೂ ಶಿಕ್ಷಣ ಕಛೇರಿ, ಬಸ್‌ನಿಲ್ದಾಣ, ಎಲ್ಲಾ ಕಟ್ಟಡಗಳನ್ನು ನಿರ್ಮಿಸಿಕೊಡುವ ಭರವಸೆ ನೀಡಿದರು.  ಜಿಲ್ಲಾ ಉಸ್ತುವಾರಿ ಸಚಿವೆ ಹಾಗೂ ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಮಾತನಾಡಿ ಭಾಗ್ಯಲಕ್ಷ್ಮಿ ಯೋಜನೆ ಮಹಿಳೆಯರಿಗೆ ಬಹಳ ಅನುಕೂಲವಾಗಿದೆ.  ಹೆಣ್ಣು ಮಕ್ಕಳಿಗೆ ಬೈಸಿಕಲ್, ಬಟ್ಟೆ ಹಾಗೂ ಬಾಂಡ್ ನೀಡುವ ಮೂಲಕ ಸಮಗ್ರ ಶಿಕ್ಷಣ ನೀಡುತ್ತಿರುವುದು ಈ ಸರ್ಕಾರದ ಹೆಗ್ಗಳಿಕೆಯಾಗಿದೆ ಎಂದು ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿದ್ದು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸುತ್ತಾ ಜಕ್ಕಲಮಡುಗು ಯೋಜನೆ, ಚಿತ್ತಾರ ಯೋಜನೆಯಿಂದ ಶುದ್ದ ನೀರು ಪೂರೈಕೆ ಮಾಡಲಾಗುವುದೆಂದರು. 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ  ಸಿ. ಸಿ. ಪಾಟೀಲ್ ಮಾತನಾಡುತ್ತಾ 11೦೦ ಕೋಟಿ ರೂ. ಗಳ ವೆಚ್ಚದಿಂದ ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ ಸೌಲಭ್ಯ ನೀಡಲಾಗುತ್ತದೆ ಎಂದು ತಿಳಿಸಿದರಲ್ಲದೆ ಭಾಗ್ಯಲಕ್ಷ್ಮಿ ಯೋಜನೆ ಭಾರತದಲ್ಲಿಯೇ ವಿನೂತನ ಯೋಜನೆಯಾಗಿದ್ದು ಅಂಗನವಾಡಿ ಕಾರ್ಯಕರ್ತರಿಗೂ ಸರ್ಕಾರ ಹೆಚ್ಚು ಸಂಬಳ ನೀಡಲು ತೀರ್ಮಾನಿಸಲಿದೆ ಎಂದು ಹೇಳಿದರು.

ಸಮಾರಂಭದ  ಅಧ್ಯಕ್ಷತೆಯನ್ನು  ವಹಿಸಿದ್ದ ಕೆ. ಪಿ.  ಬಚ್ಚೇಗೌಡ  ಅವರು ಮಾತನಾಡಿ ಜಿಲ್ಲೆಗೆ ಶಾಶ್ವತ ನೀರು ಪೂರೈಕೆ ಮಾಡಲು ಮುಖ್ಯಮಂತ್ರಿಗಳು ಹೆಚ್ಚಿನ ಗಮನ ಹರಿಸಬೇಕೆಂದರಲ್ಲದೆ ಆರೋಗ್ಯ ತಪಾಸಣೆ ಕಾರ್ಯಕ್ರಮ ಗ್ರಾಮಮಟ್ಟದಲ್ಲಿ ಏರ್ಪಡಿಸಬೇಕು, ಮಹಿಳಾ ಕಾಲೇಜು ಪ್ರಾರಂಭಿಸಬೇಕು ಎಂದರು. 

ಸಮಾರಂಭದಲ್ಲಿ ಶಾಸಕ ಎನ್. ಸಂಪಂಗಿ, ಹೆಚ್. ಶಿವಶಂಕರರೆಡ್ಡಿ, ವರ್ತೂರು ಪ್ರಕಾಶ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿನುತಾ ಶ್ರೀನಿವಾಸ್, ಡಾ: ಸುಧಾಕರ್, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸರೋಜಿನಿ ಭಾರಧ್ವಾಜ್, ಉಸ್ತುವಾರಿ ಕಾರ್ಯದರ್ಶಿ  ಎನ್.ಸಿ. ಮುನಿಯಪ್ಪ, ಪ್ರಾದೇಶಿಕ ಆಯುಕ್ತ ಧನಂಜಯ ಅವರುಗಳು ಉಪಸ್ಥಿತರಿದ್ದರು.  ಜಿಲ್ಲಾಧಿಕಾರಿ ಡಾ: ಮಂಜುಳಾ ಸ್ವಾಗತಿಸಿದರು. 

 ಮುಖಪುಟ /ಸುದ್ದಿ ಸಮಾಚಾರ