ಮುಖಪುಟ /ಸುದ್ದಿ ಸಮಾಚಾರ   
 

ಮುಖ್ಯಮಂತ್ರಿಗಳಿಂದ ು www.ourministers.com  ಉದ್ಘಾಟನೆ
ಕನ್ನಡರತ್ನ.ಕಾಂನಿಂದ ಸಚಿವರಿಗೊಂದು ವೆಬ್ ಸೈಟ್ , ಸಚಿವರುಗಳ ಬಗ್ಗೆ ತಿಳಿಯಲು, ಸಚಿವರಿಗೆ ದೂರು ನೀಡಲು, ವಿವಿಧ ಇಲಾಖೆಗಳ ಮಾಹಿತಿಗೆ ಉಪಯುಕ್ತ ಅಂತರ್ಜಾಲ ತಾಣ.
 

ಬೆಂಗಳೂರು, ನ.೭:  ದಕ್ಷಿಣ ಭಾರತದ ಮೊಟ್ಟ ಮೊದಲ ಬಿಜೆಪಿ ಸರ್ಕಾರದ ಎಲ್ಲ ೩೪ ಸಚಿವರುಗಳ ಸಚಿತ್ರ ಮಾಹಿತಿ ಇರುವ www.ourministers.com ಕನ್ನಡ ವೆಬ್‌ಸೈಟ್ ಅನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದು ತಮ್ಮ ಗೃಹ ಕಚೇರಿ ಕೃಷ್ಣದಲ್ಲಿ ಉದ್ಘಾಟಿಸಿದರು. ಈ ವೆಬ್ ತಾಣ ಆರಂಭಿಸಿರುವ ಕನ್ನಡರತ್ನ.ಕಾಂ ಅನ್ನು ಅಭಿನಂದಿಸಿದರು.

ಈ ನಾಡು ಮತ್ತು ಹೊರನಾಡ ಕನ್ನಡಿಗರ ನಡುವೆ ಸ್ನೇಹ ಸೇತುವಾಗಿರುವ ಕನ್ನಡರತ್ನ.ಕಾಂ ಅಂತರ್ಜಾಲ ಸುದ್ದಿವಾಹಿನಿ ನಿರ್ಮಿಸಿ ನಿರ್ವಹಿಸುತ್ತಿರುವ ಈ ವೆಬ್‌ಸೈಟ್‌ನಲ್ಲಿ ಯಡಿಯೂರಪ್ಪ ಹಾಗೂ ಅವರ ಸಚಿವ ಸಂಪುಟದ ಎಲ್ಲ ೩೩ ಸಚಿವರುಗಳ ಸಚಿತ್ರ ಮಾಹಿತಿಯನ್ನು ಲೇಖನ ರೂಪದಲ್ಲಿ ನೀಡಲಾಗಿದೆ.

ಮಾಹಿತಿ ದಾಹಿ ಸಮಾಜದ ಅವಶ್ಯಕತೆಗಳಿಗೆ ಅನುಗುಣವಾಗಿ ಕಲ್ಯಾಣ ಮಂಟಪಗಳ ಮಾಹಿತಿ ನೀಡುವ  www.bangalorechoultries.com ಹಾಗೂ ಸೀರೆಯಂಗಡಿ ಮತ್ತು ಚಿನ್ನಾಭರಣ ಮಳಿಗೆಗಳ ವಿವರ ನೀಡುವ www.bangaloresareehouses.com, www.bangalorejewelleryshops.com  ಸೇರಿದಂತೆ ಹಲವು ಮಾಹಿತಿಪೂರ್ಣ ವೆಬ್‌ಸೈಟ್‌ಗಳನ್ನು ನಿರ್ಮಿಸಿರುವ ಕನ್ನಡರತ್ನ.ಕಾಂ ಸಾರ್ವಜನಿಕರಿಗೆ ಸಚಿವರುಗಳ ಬಗ್ಗೆ ಮಾಹಿತಿ ನೀಡುತ್ತಿದೆ.

ಅವರ್ ಮಿನಿಸ್ಟರ್ಸ್ ಡಾಟ್ ಕಾಂನಲ್ಲಿ ಸಚಿವರುಗಳ ಮಾಹಿತಿಯಲ್ಲದೆ, ರಾಜ್ಯವನ್ನಾಳಿದ ಮುಖ್ಯಮಂತ್ರಿಗಳ ವಿವರ, ಸಂಸದರ ವಿವರ ಹಾಗೂ ಎಲ್ಲ ಶಾಸಕರುಗಳ ಕ್ಷೇತ್ರ ಹಾಗೂ ಹೆಸರು ಇತ್ಯಾದಿ ಉಪಯುಕ್ತ ಮಾಹಿತಿಗಳನ್ನೂ ಒದಗಿಸಲಾಗಿದೆ.

ಜೊತಗೆ ಎಲ್ಲ ಸಚಿವರುಗಳ ಮಾಹಿತಿ ಪೂರ್ಣ ಲೇಖನದ ಕೊನೆಯಲ್ಲಿ ದೊರೆತನಕ ದೂರು ಎಂಬ ವಿಭಾಗವಿದ್ದು, ಓದುಗರು ತಮ್ಮ ದೂರು ದುಮ್ಮಾನಗಳನ್ನು ಸಚಿವರುಗಳಿಗೆ ನೀಡಲು ಅನುವಾಗುವಂತೆ ಕೆಲವು ಸಚಿವರುಗಳ ಇ-ಮೇಲ್‌ಗೆ ಲಿಂಕ್ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಎಲ್ಲ ಸಚಿವರ ಇ-ಮೇಲ್‌ಗಳಿಗೆ ಲಿಂಕ್ ಒದಗಿಸಲಾಗುವುದು ಎಂದು ಕನ್ನಡರತ್ನ.ಕಾಂ ಸ್ಥಾಪಕ ಸಂಪಾದಕಿ ಶೋಭಾ ಎನ್. ತಿಳಿಸಿದರು.

ಸರ್ಕಾರ ಅನುಮತಿ ನೀಡಿದರೆ, ಓದುಗರು ನೇರವಾಗಿ ಸಚಿವರುಗಳಿಗೆ ದೂರು ಅಥವಾ ಮನವಿ ನೀಡಲು ಅನುಕೂಲವಾಗುವಂತೆ ಮೆಸೇಜ್ ಬೋರ್ಡ್ ವ್ಯವಸ್ಥೆ ಕಲ್ಪಿಸುವ ಉದ್ದೇಶವೂ ಕನ್ನಡರತ್ನ.ಕಾಂಗೆ ಇದೆ ಎಂದು ಪತ್ರಕರ್ತ ಹಾಗೂ ಮಿನಿಸ್ಟರ್ಸ್ .ಕಾಂ ಸಂಪಾದಕ ಟಿ.ಎಂ. ಸತೀಶ್ ತಿಳಿಸಿದರು.

ರಾಜ್ಯದ ಎಲ್ಲ ವಿಧಾನಸಭಾ ಹಾಗೂ ವಿಧಾನಪರಿಷತ್ ಸದಸ್ಯರು, ರಾಜ್ಯದ ಸಂಸದರು, ಮಾಜಿ ಸಚಿವರುಗಳ ಬಗ್ಗೆಯೂ ಸಚಿತ್ರ ಮಾಹಿತಿಯ ಅಂತರ್ಜಾಲ ತಾಣ ನಿರ್ಮಿಸಲು ಸಂಸ್ಥೆ ಮುಂದಾಗಿದೆ. ಶೀಘ್ರವೇ ಅವರ್ ಮಿನಿಸ್ಟರ್ಸ್.ಕಾಂ ಇಂಗ್ಲಿಷ್ ವಿಭಾಗವನ್ನು ಆರಂಭಿಸಲಾಗುವುದು. ಸರ್ಕಾರದ ಎಲ್ಲ ಇಲಾಖೆಗಳ ವಿವರ, ದೂರವಾಣಿ ಸಂಖ್ಯೆ ಹಾಗೂ ವಿವಿಧ ಇಲಾಖೆಗಳ ಜನಪರ ಯೋಜನೆಗಳ ಮಾಹಿತಿಯನ್ನೂ ಶೀಘ್ರವೇ ವೆಬ್‌ಸೈಟ್‌ನಲ್ಲಿ ಒದಗಿಸಲಾಗುವುದು ಎಂದರು.

ವಿಧಾನಪರಿಷತ್ ಸದಸ್ಯೆ ವಿಮಲಾಗೌಡ, ಪತ್ರಕರ್ತ ಟಿ.ಎಂ.ಸತೀಶ್ ಮತ್ತಿತರರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಮುಖಪುಟ /ಸುದ್ದಿ ಸಮಾಚಾರ