ಮುಖಪುಟ /ಸುದ್ದಿ ಸಮಾಚಾರ   
 

ಟೆಸ್ಟ್ ಕ್ರಿಕೆಟ್ ಗೆ ಅನಿಲ್ ಕುಂಬ್ಳೆ ವಿದಾಯ
ಗಾಯದ ಸಮಸ್ಯೆಯಿಂದಲೇ ವಿದಾಯ ಹೇಳಿದ ಸ್ಪಿನ್ ಗಾರುಡಿಗ..

ಬೆಂಗಳೂರು, ಕನ್ನಡರತ್ನ ವಾರ್ತೆ:  ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ, ಕರ್ನಾಟಕದ ಕಣ್ಮಣಿ, ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್ ಗಿಂದು ವಿದಾಯ ಘೋಷಿಸಿ ಅಭಿಮಾನಿಗಳಿಗೆ ನಿರಾಶೆ ಹಾಗೂ ಅಚ್ಚರಿ ಮೂಡಿಸಿದ್ದಾರೆ.

ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಡ್ರಾನಲ್ಲಿ ಅಂತ್ಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಕುಂಬ್ಳೆ ತಮ್ಮ ನಿವೃತ್ತಿಯ ನಿರ್ಧಾರ ಪ್ರಕಟಿಸಿದರು.

ನಾಗ್ಪುರದಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ತಾವು ತಂಡದ ಜೊತೆಗಿರುವುದಾಗಿ ಹೇಳಿದ ಅವರು ತಾವು ಟೀಕಾಕಾರಿಗೆ ಹೆದರಿ ನಿವೃತ್ತಿಯ ನಿರ್ಧಾರ ಕೈಗೊಂಡಿಲ್ಲ, ಇದು ನನ್ನ ದೇಹಸ್ಥಿತಿ ನೀಡಿದ ನಿರ್ಣಯ ಎಂದು ಅವರು ಹೇಳಿದರು.

18 ವರ್ಷಗಳ ಕಾಲ ತಾವು ಕ್ರಿಕೆಟ್ ನ ಒಂದೊಂದು ಕ್ಷಣವನ್ನೂ ಆನಂದಿಸುತ್ತಾ ಅನುಭವಿಸಿದ್ದಾಗಿ ಹೇಳಿದ ಅವರು, ತಮ್ಮ ಕ್ರಿಕೆಟ್ ಜೀವಿತಾವಧಿಯ ಉದ್ದಕ್ಕೂ ತಮಗೆ ಸಹಕಾರ ನೀಡಿದ ಸಹ ಕ್ರಿಕೆಟಿಗರಿಗೆ ಹಾಗೂ ಪ್ರೋತ್ಸಾಹಿಸಿದ ಅಭಿಮಾನಿಗಳಿಗೆ ಕೃತಜ್ಞತೆ ಅರ್ಪಿಸಿದರು.

ಕಳೆದ ವರ್ಷ ಕುಂಬ್ಳೆ ಏಕ ದಿನ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಟೆಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಸಾಧನೆ ಮಾಡಿರುವ ಕುಂಬ್ಳೆ, ಬೌಲಿಂಗ್ ನಲ್ಲಿ ಪಾಕ್ ವಿರುದ್ಧದ ಪಂದ್ಯದಲ್ಲಿ ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಕಬಳಿಸಿ ವಿಶ್ವ ವಿಕ್ರಮ ಮೆರೆದಿದ್ದಾರೆ.

ತಮ್ಮ ಕೊನೆಯ ಪಂದ್ಯದಲ್ಲಿ ಕೂಡ ಮೊದಲ ಇನ್ನಿಂಗ್ಸ್ ನಲ್ಲಿ 45 ರನ್ ಮಾಡಿದ ಕುಂಬ್ಳೆ ಕೈಗೆ ಗಾಯವಾಗಿದ್ದರೂ ಪಂದ್ಯಕ್ಕೆ ಮರಳಿ ಉತ್ತಮವಾಗಿ ಬೌಲ್ ಮಾಡಿ ವಿಕೆಟ್ ಕೂಡ ಕಬಳಿಸಿ ತಮ್ಮ ಕ್ರೀಡಾ ಮನೋಭಾವ ಮೆರೆದರು.

132 ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ 619 ವಿಕೆಟ್ ಪಡೆಯುವ ಮೂಲಕ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಕೀರ್ತಿಗೆ ಪಾತ್ರವಾಗಿರುವ ಅನಿಲ್ ಕುಂಬ್ಳೆ, ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್ ನಂತರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದಿರುವ ವಿಶ್ವದ ಮೂರನೇ ಶ್ರೇಷ್ಠ ಬೌಲರ್ ಎನಿಸಿದ್ದಾರೆ.

ಇಂದು ಭೋಜನ ವಿರಾಮದ ಸಮಯದಲ್ಲಿ ಆಯ್ಕೆ ಮಂಡಳಿಗೆ ತಮ್ಮ ನಿವೃತ್ತಿಯ ನಿರ್ಧಾರ ತಿಳಿಸಿದ ಜಂಬೋ ಪಂದ್ಯಾನಂತರ ಅಧಿಕೃತವಾಗಿ ಈ ವಿಷಯ ಪ್ರಕಟಿಸಿದಾಗ ಇಡೀ ಕ್ರೀಡಾಂಗಣದಲ್ಲಿದ್ದ ಕ್ರಿಕೆಟ್ ಅಭಿಮಾನಿಗಳು ಎದ್ದು ನಿಂತು ಕುಂಬ್ಳೆ ಅವರಿಗೆ ಗೌರವ ಅರ್ಪಿಸಿದರು. ಸಹ ಆಟಗಾರರು ಕೈಕುಲುಕಿ, ಕುಂಬ್ಳೆ ಅವರನ್ನು ಭುಜದ ಮೇಲೆ ಹೊತ್ತು ಕ್ರೀಡಾಂಗಣದಲ್ಲಿ ಸುತ್ತು ಹಾಕಿ ಗೌರವಯುತವಾಗಿ  ವಿದಾಯ ಹೇಳಿದರು.

ಮುಖಪುಟ /ಸುದ್ದಿ ಸಮಾಚಾರ