ಮುಖಪುಟ /ಸುದ್ದಿ ಸಮಾಚಾರ   
 

ಪಂಡಿತ್ ಭೀಮಸೇನ ಜೋಶಿ ಅವರಿಗೆ ಭಾರತರತ್ನ
ಕನ್ನಡಿಗನಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಯ ಗೌರವ

ನವದೆಹಲಿ : ಖ್ಯಾತ ಹಿಂದೂಸ್ಥಾನಿ ಗಾಯಕ, ಕನ್ನಡಿಗ ಪಂಡಿತ್ ಭೀಮಸೇನ ಜೋಶಿ ಅವರು ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತರತ್ನಕ್ಕೆ ಭಾಜನರಾಗಿದ್ದಾರೆ. ಕೇಂದ್ರ ಸರ್ಕಾರ ಮಂಗಳವಾರ ರಾತ್ರಿ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದೆ.

ತಮ್ಮ ಸುಶ್ರಾವ್ಯ ಕಂಠ ಸಿರಿಯ ಮೂಲಕ ಹಿಂದೂಸ್ಥಾನಿ ಸಂಗೀತವನ್ನು ಜನಪ್ರಿಯಗೊಳಿಸಿದ ಹಾಗೂ ಸಂಗೀತ ಕ್ಷೇತ್ರಕ್ಕೆ ನವ ಚೈತನ್ಯ ನೀಡಿದ ಜೋಶಿ ಸಂಗೀತಪ್ರಿಯರ ಮನಗೆದ್ದ ಧೀಮಂತ ಗಾಯಕರು. ಕಿರಾಣ ಘರಾನದಲ್ಲಿ ಪರಿಣತಿ ಸಾಧಿಸಿರುವ ಜೋಶಿ ಅವರು ಸಂಗೀತ ಕ್ಷೇತ್ರಕ್ಕೆ ನೀಡಿರುವ ಅನುಪಮ ಹಾಗೂ ಅನನ್ಯ ಸೇವೆಯನ್ನು ಗುರುತಿಸಿ ಅವರಿಗೆ ಈ ಅತ್ಯುನ್ನತ ಗೌರವ ನೀಡಲು ಕೇಂದ್ರ ನಿರ್ಧರಿಸಿದೆ.

ಭೀಮಸೇನ ಗುರುರಾಜ ಜೋಶಿ ಪರಿಚಯ

ಕರ್ನಾಟಕದ ಗದಗ್ ನಲ್ಲಿ ಜೋಶಿ ಅವರು ಹುಟ್ಟಿದ್ದು 1922ರಲ್ಲಿ. ಶಾಲಾ ಶಿಕ್ಷಕರ ಪುತ್ರರಾದರೂ ಭೀಮಸೇನ್ ಜೋಶಿ ಅವರಿಗೆ ಬಾಲ್ಯದಿಂದಲೂ ಸಾಂಪ್ರದಾಯಿಕ ಶಿಕ್ಷಣಕ್ಕಿಂತ ಸಂಗೀತದ ಮೇಲೇ ಹೆಚ್ಚಿನ ಒಲವಿತ್ತು.

ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು 11ನೇ ವಯಸ್ಸಿನಲ್ಲಿ ಮನೆಬಿಟ್ಟು ಹೋದರು. ಕುಂದಗೋಳದ ಪ್ರಸಿದ್ಧ ಸಂಗೀತ ವಿದ್ವಾಂಸ ಸವಾಯಿ ಗಂಧರ್ವರ ಮೆಚ್ಚಿನ ಶಿಷ್ಯರಾದರು. ಜೋಶಿ ಅವರಿಗೆ ಸಂಗೀತದ ಮೇಲೆ ಇದ್ದ ಒಲವು ಹಾಗೂ ಶ್ರದ್ಧೆಯನ್ನು ಗುರುತಿಸಿದ ಗಂಧರ್ವರು ಜೋಶಿ ಅವರಿಗೆ ತಮ್ಮೆಲ್ಲಾ ವಿದ್ಯೆಯನ್ನೂ ಧಾರೆ ಎರೆದು ಸಂಗೀತ ಕ್ಷೇತ್ರದಲ್ಲಿ ಜೋಶಿಯವರನ್ನು ತಾರೆಯಾಗಿ ರೂಪಿಸಿದರು.

ತಮ್ಮ ಸಂಗೀತ ಸಾಧನೆಗೆ ನೆರವಾದ ಗುರುವಿಗೆ ಭೀಮಸೇನ್ ಜೋಶಿ ಅವರು ಪ್ರತಿವರ್ಷ ಸವಾಯಿ ಗಂಧರ್ವ ಸಂಗೀತ ಮಹೋತ್ಸವ ನಡೆಸುವ ಮೂಲಕ ಗುರು ವಂದನೆ ಸಲ್ಲಿಸುತ್ತಲೇ ಬಂದಿದ್ದಾರೆ.  

ಪದ್ಮಶ್ರೀ, ಪದ್ಮಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗೆ ಪಾತ್ರರಾಗಿರುವ ಪಂಡಿತ್ ಜೀ ಈಗ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಪುಣೆಯಲ್ಲಿ ನೆಲೆಸಿರುವ ಅವರು, ಕನ್ನಡ ಚಲನಚಿತ್ರಗಳಿಗೂ ಹಿನ್ನೆಲೆ ಗಾಯಕರಾಗಿ ದುಡಿದಿದ್ದಾರೆ.

ಜೋಶಿ ಅವರಿಗೆ ಭಾರತರತ್ನ ಗೌರವ ದೊರೆತಿರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.

ಮುಖಪುಟ /ಸುದ್ದಿ ಸಮಾಚಾರ