ಮುಖಪುಟ /ಸುದ್ದಿ ಸಮಾಚಾರ   
 

ಗ್ರಾಮೀಣ ಐಟಿ ಕ್ವಿಜ್‌ ದಾಖಲೆ 12 ಲಕ್ಷ ಸ್ಪರ್ಧಿಗಳು

ಬೆಂಗಳೂರು: ಐಟಿ.ಬಿಜ್-೨೦೦೮ರ ಅಂಗವಾಗಿ ಆಯೋಜಿಸಿರುವ ಗ್ರಾಮೀಣ ಐಟಿ ಕ್ವಿಜ್ಗೆ ವಿದ್ಯಾರ್ಥಿಗಳಿಂದ ವ್ಯಾಪಕ ಪ್ರತಿಕ್ರಿಯೆ ದೊರೆತಿದೆ. ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್) ಜೊತೆಗೂಡಿ ಆಯೋಜಿಸಿರುವ ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಸುಮಾರು ೧೨ ಲಕ್ಷದಷ್ಟು ವಿದ್ಯಾರ್ಥಿಗಳು ಈ ಆವೃತ್ತಿಯಲ್ಲಿ ಪಾಲ್ಗೊಂಡು ದಾಖಲೆ ನಿರ್ಮಿಸಿದ್ದಾರೆ.

ಇದು ಇಡೀ ಭಾರತದಲ್ಲೇ ಐಟಿ ಕ್ವಿಜ್‌ಗೆ ಸಂಬಂಧಿಸಿದಂತೆ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಅತೀ ದೊಡ್ಡ ಕಾರ್ಯಕ್ರಮ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಕರ್ನಾಟಕ ರಾಜ್ಯದಲ್ಲಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಮಾಹಿತಿ ತಂತ್ರಜ್ಞಾನ ವಲಯದ ಬಗ್ಗೆ ಅರಿವು ಮೂಡಿಸಲು ಈ ಗ್ರಾಮೀಣ ಐಟಿ ಕ್ವಿಜ್‌ಗೆ ಚಾಲನೆ ನೀಡಲಾಗಿತ್ತು.

ಸತತವಾಗಿ ಕಳೆದ ಒಂಬತ್ತು ವರ್ಷಗಳಿಂದ ಗ್ರಾಮೀಣ ಕ್ವಿಜ್ ಅನ್ನು ನಡೆಸಿಕೊಂಡು ಬರಲಾಗುತ್ತಿದೆ. ಪ್ರಸಕ್ತ ವರ್ಷ ೧೨ ಲಕ್ಷ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರಾಥಮಿಕ ಸುತ್ತಿನ ಆಯ್ಕೆ ಸ್ಪರ್ಧೆಗಳಲ್ಲಿ ಭಾಗಹಿವಹಿಸಿ ದಾಖಲೆ ನಿರ್ಮಿಸಿದ್ದಾರೆ. ಈ ಕ್ವಿಜ್‌ನ ಅಂತಿಮ ಸುತ್ತಿನ ಸ್ಪರ್ಧೆ ಬೆಂಗಳೂರು ಐಟಿ.ಬಿಜ್ ನಡೆಯುತ್ತಿರುವ ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ ೭ರಂದು ನಡೆಯಲಿದೆ. ಸ್ಪರ್ಧೆಯು ಅಂದು ಸಂಜೆ ನಾಲ್ಕು ಗಂಟೆಗೆ ಆರಂಭಗೊಳ್ಳಲಿದೆ.

ಆರು ತಂಡಗಳು ಭಾಗವಹಿಸುತ್ತಿರುವ ರಾಜ್ಯ ಮಟ್ಟದ ಈ ಚಾಂಪಿಯನ್‌ಶಿಪ್‌ನಲ್ಲಿ ವಿಜಯಿಯಾಗುವ ತಂಡಗಳಿಗೆ ಟಿಸಿಎಸ್ ಮೂರು ನಗದು ಬಹುಮಾನವನ್ನು ಘೋಷಿಸಿದೆ. ಮೊದಲ ಸ್ಥಾನ ಪಡೆಯುವ ತಂಡ ೭೫,೦೦೦ ರೂಪಾಯಿಗಳನ್ನು ಪಡೆದುಕೊಳ್ಳಲಿದೆ. ಎರಡನೇ ಸ್ಥಾನ ಪಡೆಯುವ ತಂಡ ೩೫,೦೦೦ ರೂ ಮತ್ತು ಮೂರನೇ ಸ್ಥಾನ ಗಳಿಸುವ ತಂಡ ೨೦,೦೦೦ ರೂಪಾಯಿಗಳನ್ನು ಪಡೆದುಕೊಳ್ಳಲಿದೆ. ಗಿರಿ ಬಾಲಸುಬ್ರಮಣ್ಯಯಂ ಅವರು ಈ ಕ್ವಿಜ್ ಅನ್ನು ನಡೆಸಿಕೊಡಲಿದ್ದಾರೆ.

ಮೊದಲ ಹಂತದ ಕ್ವಿಜ್ ಕಾರ್ಯಕ್ರಮವನ್ನು ಸೆಪ್ಟೆಂಬರ್ ೧೦ರಂದು ಆಯೋಜಿಸಲಾಗಿತ್ತು. ಅಕ್ಟೋಬರ್ ೪ರಂದು ಜಿಲ್ಲಾ ಮಟ್ಟದ ಸುತ್ತುಗಳು ನಡೆದಿದ್ದವು. ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮೊದಲ ೫೦ ತಂಡಗಳಿಗೆ ಪ್ರಾದೇಶಿಕ ಮಟ್ಟದ ಸುತ್ತಿನ ಅಂತಿಮ ಸ್ಪರ್ಧೆಗಳನ್ನು ರಾಜ್ಯದ ಆರು ಜಿಲ್ಲೆಗಳಲ್ಲಿ ಅಕ್ಟೋಬರ್ ೧೦ ರಿಂದ ೨೧ರ ವರೆಗೆ ಗುಲ್ಬರ್ಗಾ, ಧಾರವಾಡ, ದಾವಣಗೆರೆ, ತುಮಕೂರು, ಉಡುಪಿ ಮತ್ತು ಮೈಸೂರು ಜಿಲ್ಲೆಗಳಲ್ಲಿ ನಡೆಸಲಾಗಿತ್ತು.

ರಾಜ್ಯ ಮಟ್ಟದ ಅಂತಿಮ ಸುತ್ತಿನ ಸ್ಪರ್ಧೆಗಾಗಿ ಆಯ್ಕೆಯಾಗಿರುವ ಆರು ತಂಡಗಳು-

೧. ಕಾಶಿನಾಥ್ ಹಂದಿಗನೂರು ಮತ್ತು ಮಂಜುನಾಥ್ ಮಲಿಪಾಟಿಲ್- ವಿದ್ಯಾಭಾರತಿ ಹೈಸ್ಕೂಲ್, ತಾಳಿಕೋಟಿ, ಮುದ್ದೇಬೀಹಾಳ್ ತಾಲ್ಲೂಕು, ಬಿಜಾಪುರ ಜಿಲ್ಲೆ.

೨. ಶಶಾಂಕ್ ಎಸ್ ಮೇಟಿ ಮತ್ತು ಪ್ರಭು ಬಿ ವಿರತಿಮಠ್- ಸೇಂಟ್ ಆನ್ಸ್ ಕಾನ್ವೆಂಟ್ ಹೈಸ್ಕೂಲ್, ಬಾಗಲಕೋಟೆ.

೩. ದೇವರ್ಥ್ ಎನ್‌ಡಿ ಸೂರ್ಯ ವಿ.- ಎಂಕೆಇಟಿ ಪಿಯು ಕಾಲೇಜ್, ಹರಿಹರ ತಾಲ್ಲೂಕು, ದಾವಣಗೆರೆ ಜಿಲ್ಲೆ.

೪. ವಿಟ್ಟಲ್ ಆರ್ ಪೈ ಮತ್ತು ಮಧುಸೂದನ್ ಎಸ್.- ಕಲ್ಪತರು ಪಿಯು ಕಾಲೇಜು ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ.

೫. ಪ್ರಶಾಂತ್ ಪೈ ಮತ್ತು ಸ್ನೇಹಿತ್ ಪೆರೇರಾ - ಎಸ್‌ಎಂಎಸ್ ಪಿಯು ಕಾಲೇಜು, ಬ್ರಹ್ಮಾವರ್ ತಾಲ್ಲೂಕು, ಉಡುಪಿ ಜಿಲ್ಲೆ.

೬. ರಕ್ಷಿತಾ ಎಚ್.ಎಂ ಮತ್ತು ಶ್ರಾವ್ಯ ಆರ್- ಕಾರ್ಮೆಲ್ ಕಾನ್ವೆಂಟ್, ಮಂಡ್ಯ.

ಇದೇ ಮೊದಲ ಬಾರಿಗೆ ವಲಯ ಮಟ್ಟದಲ್ಲಿ ಎರಡು ಮತ್ತು  ಮೂರನೇ ಸ್ಥಾನ ಗಳಿಸಿದ ತಂಡಗಳಿಗೂ ಐಟಿ, ಬಿಟಿ ಮತ್ತು ಎಸ್ & ಟಿ ಇಲಾಖೆಯ ಕಿಯೋನಿಕ್ಸ್ ವತಿಯಿಂದ ಕ್ರಮವಾಗಿ ಐದು ಸಾವಿರ ರೂ. ಮತ್ತು ನಾಲ್ಕು ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. ನಗದು ಬಹುಮಾನವನ್ನು ರಾಜ್ಯ ಮಟ್ಟದ ಅಂತಿಮ ಸುತ್ತಿನ ಸ್ಪರ್ಧೆಗಳು ನಡೆಯುವ ವೇಳೆ ನೀಡಲಾಗುವುದು. ಮೂರನೇ ಆವೃತ್ತಿಯ ಐಟಿ ಕ್ವಿಜ್ ಬುಕ್ - ಥಿಂಕ್ ಅಬೌಟ್ ಐಟಿ ಪುಸ್ತಕಕ್ಕಾಗಿ ಶ್ರಮಿಸಿದ ಐವರು ವಿದ್ಯಾರ್ಥಿಗಳಿಗೂ ಕಿಯೋನಿಕ್ಸ್ ವತಿಯಿಂದ ತಲಾ ನಾಲ್ಕು ಸಾವಿರ ರೂಪಾಯಿಗಳ ನಗದು ಬಹುಮಾನವನ್ನು ಇದೇ ಸಂದರ್ಭದಲ್ಲಿ ನೀಡಲಾಗುತ್ತಿದೆ.

ಮುಖಪುಟ /ಸುದ್ದಿ ಸಮಾಚಾರ