ಮುಖಪುಟ /ಸುದ್ದಿ ಸಮಾಚಾರ   
 

ಡಿಸೆಂಬರ್ ೧೫ರೊಳಗಾಗಿ ಸೆಮಿಕಂಡಕ್ಟರ್ ನೀತಿ ಜಾರಿ
ಈ ತಿಂಗಳಲ್ಲೇ ಐಟಿ ನೀತಿ ಜಾರಿ: ಕಟ್ಟಾ
ಸುಬ್ರಹ್ಮಣ್ಯನಾಯ್ಡು

ಬೆಂಗಳೂರು, ನ. ೫- ಬಹುನಿರೀಕ್ಷಿತ ಐಟಿ ನೀತಿಯನ್ನು ಪ್ರಸಕ್ತ ತಿಂಗಳಲ್ಲೇ ಜಾರಿಗೆ ತರಲಾಗುವುದು ಎಂದು ಐಟಿ ಮತ್ತು ಬಿಟಿ, ಅಬಕಾರಿ, ಬಿಡಬ್ಲ್ಯುಎಸ್‌ಎಸ್‌ಬಿ ಹಾಗೂ ವಾರ್ತಾ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ತಿಳಿಸಿದ್ದಾರೆ.

ಅವರು ನವೆಂಬರ್ ೬ ರಿಂದ ನಗರದ ಅರಮನೆ ಮೈದಾನದಲ್ಲಿ ಆರಂಭಗೊಳ್ಳಲಿರುವ ಮೂರು ದಿನಗಳ ಬೆಂಗಳೂರು ಐಟಿ.ಬಿಜ್-೨೦೦೮ಗೆ ಸಂಬಂಧಿಸಿದಂತೆ  ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ರಾಜ್ಯದಲ್ಲಿ ಜಾರಿಗೊಳಿಸಲಾಗುವ ಐಟಿ ನೀತಿ ಕುರಿತಂತೆ ಮೂರು ದಿನಗಳ ಈ ಮೇಳದಲ್ಲಿ ಭಾಗವಹಿಸಲಿರುವ ಮಾಹಿತಿ ತಂತ್ರಜ್ಞಾನ ವಲಯವನ್ನು ಪ್ರತಿನಿಧಿಸುವ ವಿವಿಧ ತಜ್ಞರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಜಾರಿಗೆ ತರಲಾಗುವುದು ಎಂದರು.

ಹಾಗೆಯೇ, ಪ್ರಸಕ್ತ ವರ್ಷದ ಡಿಸೆಂಬರ್ ೧೫ರ ಒಳಗಾಗಿ ಸೆಮಿಕಂಡಕ್ಟರ್ ನೀತಿಯನ್ನು ಸಹ ಜಾರಿಗೆ ತರಲಾಗುವುದು ಮತ್ತು ಹಾರ್ಡ್‌ವೇರ್‌ನ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಲಾಗುವುದು ಎಂದ ಅವರು, ಜಾಗತಿಕ ಆರ್ಥಿಕ ರಂಗದಲ್ಲಿ ಹಿನ್ನೆಡೆ ಕಾಣಿಸಿಕೊಂಡಿದೆ. ಆದರೂ, ಈ ಆರ್ಥಿಕ ಹಿನ್ನೆಡೆಯು ದೇಶದ ಆರ್ಥಿಕತೆಯ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರಿಲ್ಲ ಎಂದರು.

ಹನ್ನೊಂದನೇ ಆವೃತ್ತಿಯ ಬೆಂಗಳೂರು ಐಟಿ ಮೇಳವು ನಗರದ ಹನ್ನೆರಡು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಅರಮನೆ ಮೈದಾನದಲ್ಲಿ ನಡೆಯಲಿದೆ. ಈ ಬಾರಿ ಮೇಳದಲ್ಲಿ ಜಾಗತಿಕ ಮಟ್ಟದ ಸಂಸ್ಥೆಗಳಾದ ಇನ್‌ಪ್ಫೋಸಿಸ್, ವಿಪ್ರೋ, ಮೈಕ್ರೋಸಾಫ್ಟ್, ಸಿಸ್ಕೊ, ಇಂಟೆಲ್, ಎಎಂಡಿ, ಸೀಮೆನ್ಸ್, ನೋಕಿಯಾ, ಬಿಎಸ್‌ಎನ್‌ಎಲ್, ಏರ್‌ಟೆಲ್, ಎಚ್‌ಪಿ, ಐಬಿಎಂ, ಡೆಲ್, ಓರೇಕಲ್, ಟೆಕ್ಸಾಸ್ ಇನ್‌ಸ್ಟ್ರೂಮೆಂಟ್, ಟಿಸಿಎಸ್, ಸೂಪರ್‌ವಾಲ್ಯೂ ಸೇರಿದಂತೆ ೧೦೮ ಪ್ರಮುಖ ಕಂಪನಿಗಳು ಪಾಲ್ಗೊಳ್ಳುತ್ತಿವೆ. ಕಳೆದ ವರ್ಷ ೧೭ ಕಂಪನಿಗಳು ಮಾತ್ರ ಭಾಗವಹಿಸಿದ್ದವು ಎಂದು ನುಡಿದರು.

ಹಾಗೆಯೇ, ಈ ಬಾರಿಯ ಮೇಳದಲ್ಲಿ ಮಾಹಿತಿ ತಂತ್ರಜ್ಞಾನ ವಲಯಕ್ಕೆ ಸಂಬಂಧಿಸಿದವರು ಹಾಗೂ ವಿವಿಧ ಉದ್ದಿಮೆಗಳನ್ನು ಪ್ರತಿನಿಧಿಸುವ ಸರಿಸುಮಾರು ೧೭ ಸಾವಿರ ಮಂದಿಯ ಭಾಗವಹಿಸುವ ನಿರೀಕ್ಷೆ ಇದೆ. ಕಳೆದ ಆವೃತ್ತಿಯ ಐಟಿ ಮೇಳದಲ್ಲಿ ಒಂದು ಸಾವಿರ ಪ್ರತಿನಿಧಿಗಳು ಮಾತ್ರ ಭಾಗವಹಿಸಿದ್ದರು ಎಂದು ತಿಳಿದರು.

ಅಭಿನಂದನೆ: ಅಮೆರಿಕದ ೪೪ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬರಾಕ್ ಒಬಾಮ ಅವರಿಗೆ ಇದೇ ಸಂದರ್ಭದಲ್ಲಿ ವಾರ್ತಾ ಸಚಿವರು ಅಭಿನಂದಿಸಿದರು.

ಮುಖಪುಟ /ಸುದ್ದಿ ಸಮಾಚಾರ