ಮುಖಪುಟ /ಸುದ್ದಿ ಸಮಾಚಾರ   
 

ಜನ ಮನ ಸೆಳೆದ ಗೀತ ಗಾಯನ

ಹಂಪಿ ನ.೪.: ಪಾರ್ವತಿನಂದನ ಸುಂದರ ವದನ ಎನ್ನುವ ಗಣಪತಿ ಕುರಿತ ಭಕ್ತಿಗೀತೆ ಗಾಯನದ ಮೂಲಕ ಶ್ರೀಜೋಳದ ರಾಶಿ ದೊಡ್ಡನಗೌಡ ವೇದಿಕೆಯಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೋಮವಾರ ಸಂಜೆ ಚಾಲನೆ ದೊರೆಯಿತು.

ಹಂಪಿ ಉತ್ಸವ ೨೦೦೮ರ ಅಂಗವಾಗಿ ಏರ್ಪಾಡಗಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಈ ವೇದಿಕೆಯಲ್ಲಿ ಕಂಪ್ಲಿ ಕೆ.ಶ್ರೀನಿವಾಸ್ ಮತ್ತು ಅವರ ತಂಡ ನಡೆಸಿಕೊಟ್ಟ ಸುಗಮ ಸಂಗೀತ, ನೆರೆದಿದ್ದ ಶ್ರೋತೃಗಳ ಮನತಣಿಸಿತು. ನಂಬು ಕನ್ನಡವನು ನಂಬು ಕನ್ನಡ ಜನ, ನಂಬು ಕನ್ನಡ ನುಡಿಕಲೆಯ ಎಂಬ ಹಾಡಿಗೆ ಕೇಳುಗರು ತಲೆದೊಗಿದರು. ಬಳಿಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಬಳ್ಳಾರಿಯ ಸುಭದ್ರಮ್ಮ ಮನ್ಸೂರು ಅವರ ರಂಗಗೀತೆಗಳನ್ನು ಹಾಡಿ ರಂಗಾಸಕ್ತ ಅಭಿಮಾನಿಗಳನ್ನು ರಂಜಿಸಿದರು. ಹೇಮರೆಡ್ಡಿಮಲ್ಲಮ್ಮ ನಾಟಕದ ನಲಿನಲಿನಲಿದಾಡಿ ಪಾಡುವೆನಾನಾ ಮಲ್ಲಿನಾಥ ಧ್ಯಾನ, ಲಂಚಾವತಾರ ನಾಟಕದಲ್ಲಿ ಆಳವಡಿಸಿದ ಅಕ್ಕ ಮಹಾದೇವಿಯವರ ವಚನ ಗಾಯನ ನೆರದಿದ್ದ ಗ್ರಾಮಿಣ ರಂಗಾಸಕ್ತರಿಗೆ ರಸದೌತಣ ನೀಡಿತು.

ಹೊಸಪೇಟೆಯ ಎಸ್.ಎಸ್. ಚಂದ್ರಶೇಖರ ಮತ್ತು ಅವರ ತಂಡದವರು ಜೋಕುಮಾರಸ್ವಾಮಿ, ಸಂಗ್ಯಾಬಾಳ್ಯ, ಸತ್ತವರ ನೆರಳು ನಾಟಕದಿಂದ ಆಯ್ದ ನವ್ಯರಂಗ ಗೀತೆಗಳನ್ನು ಹಾಡುವ ಮೂಲಕ ಗಮನಸೇಳೆದರು.

ಗಡಿನಾಡು ಜಿಲ್ಲೆ ಚಾಮರಾಜನಗರದ ಸಿ.ಎಂ. ನರಸಿಂಹಮೂರ್ತಿ ತಂಡ ನಡೆಸಿಕೊಟ್ಟ ಜನಪದ ಗೀತೆಗಳ ಗಾಯನದಲ್ಲಿ ಮೂಡಿಬಂದ ಮಲೇಮಹದೇಶ್ವರ ಕುರಿತ ಜನಪ್ರಿಯಗೀತೆ ಚೆಲ್ಲಿದರುಮಲ್ಲಿಗೆಯ, ತಿಂಗಾಳು ಮುಳುಗಿದವೋ ರಂಗೋಲೆಬೆಳಗಿದವೋ ಗೀತೆಗಳಿಗೆ ಶ್ರೋತೃಗಳು ಲಯಬದ್ದವಾಗಿ ಚಪ್ಪಾಳೆ ತಟ್ಟುತ್ತ ಕಲಾವಿದರನ್ನು ಹುರಿದುಂಬಿಸಿದರು ಬಳಿಕ ಚಲನಚಿತ್ರ ನಟ ಶಂಖನಾದ ಖ್ಯಾತಿಯ ಅರವಿಂದ್ ಕಲಾವೃಂದ ಪ್ರಸ್ತುತ ಪಡಿಸಿದ ಮಾವಬಂದಮಾವ ಎಂಬ ಹಾಸ್ಯ ಭರಿತ ಸಾಮಾಜಿಕ ನಾಟಕ ರಸಿಕರ ಗಮನ ಸೆಳೆಯಿತು. ಹಾಸ್ಯ ಪಾತ್ರದಲ್ಲಿ ಅಭಿನಯಿಸಿದ ಕಲಾವಿದ ಅರವಿಂದ್, ಅಕ್ಕಿ ಚನ್ನಬಸಪ್ಪ  ನೆರೆಬಿದ್ದ ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗಿಸಿದರು.

ಹಂಪಿ ಉತ್ಸವದ ಮೊದಲ ದಿನವಾದ ನಿನ್ನೆ ಈ ವೇದಿಕೆಯಲ್ಲಿ ಹಲವು ಕಾರ್ಯಕ್ರಮಗಳು ಜರುಗಿದವು. ಎಲ್ಲಾ ವರ್ಗದ ಜನರಿಗೆ ರಂಜನೆ ನೀಡಬಲ್ಲ ಈ ವೇದಿಕೆಯ ಕಾರ್ಯಕ್ರಮಗಳಿಗೆ ಜನರ ಪ್ರತಿಕ್ರಿಯೆ ಅದ್ಭುತವಾಗಿತ್ತು. ವೇದಿಕೆಯ ಕಾರ್ಯಕ್ರಮಗಳು ನಡುರಾತ್ರಿವರೆಗೂ ನಡೆದದ್ದು ಒಂದು ವಿಶೇಷವಾಗಿತ್ತು.

ಮುಖಪುಟ /ಸುದ್ದಿ ಸಮಾಚಾರ