ಮುಖಪುಟ /ಸುದ್ದಿ ಸಮಾಚಾರ   
 

ಕಾವ್ಯದ ಕಲ್ಲು ಸಕ್ಕರೆಗೆ ಸಂಗೀತದ ಸವಿಜೇನು

ಹಂಪಿ, ನ.೪- ಹಂಪಿ ಉತ್ಸವದ ಎರಡನೇ ದಿನವಾದ ಇಂದು ಹರಿಹರ ವೇದಿಕೆಯಲ್ಲಿ ಕಾವ್ಯದ ಕಲ್ಲು ಸಕ್ಕರೆಗೆ ಸಂಗೀತದ ಸವಿಜೇನು ಸೇರಿ ನೆರೆದ ಅಪಾರ ಜನಸ್ತೋಮದ ಹೃನ್ಮನಗಳು ಗರಿಗೆದರಿ ಕರತಾಡನದ ಮೂಲಕ ಕವಿ ಕಾವ್ಯ ಗಾಯನ ಕಾರ್ಯಕ್ರಮ ಮೆಚ್ಚುಗೆ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.

ಸೂರ್ಯನ ಬಿಸಿಲು ನಡುನೆತ್ತಿಗೇರಿದರೂ ಸಹ ಮೂರು ಘಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿಯ ಹಿರಿಯ, ಕಿರಿಯ ಹಾಗೂ ಉದಯೋನ್ಮುಖ ಕವಿಗಳ ಕಾವ್ಯವಾಚನ ನೆರೆದ ಪ್ರೇಕ್ಷಕರಿಗೆ ಕನ್ನಡ ಭಾಷೆಯ ಶ್ರೀಮಂತಿಕೆ ಹಾಗೂ ಸಂಗೀತದ ಮಾಧುರ್ಯವನ್ನು ಪರಿಚಯ ಮಾಡಿತು. ಕವಿಗಳು ಜೀವನದಲ್ಲಿ ಕಂಡಿದ್ದ ಭಾವನೆಗಳನ್ನು ಅಕ್ಷರರೂಪದಲ್ಲಿ ದಾಖಲಿಸಿ, ನೋವು ನಲಿವು ಸಂತೋಷ, ಉನ್ಮಾದ, ದೇಶಭಕ್ತಿ ಹಾಗೂ ಕನ್ನಡಾಂಬೆಯ ಪ್ರೇಮದ ಭಾವ ತರಂಗಗಳಿಗೆ ಜೀವ ನೀಡಿದರು.

ಇಂದಿನ ಕಾವ್ಯವಾಚನದಲ್ಲಿ ಬಹುತೇಕ ಉನ್ನತ ವಿಚಾರಗಳನ್ನು ಸಾದರಪಡಿಸಿದರು. ಡಾ. ರಾಜೇಶ್ವರಿ ಗೌಡ ಅವರು ಮಂಡಿಸಿದ ಕವನದಲ್ಲಿ ದೂರ ಮಾಡುವಿರೇಕೆ ತಾಯಿಯನ್ನು, ಗಾರು ಮಾಡುವಿರೇಕೆ ತಾಯಿಯನ್ನು?, ಭುವಿ ಬಾನು ಇರುವ ತನಕ, ನದಿ ಹರಿಯುವ ತನಕ, ಗಿರಿ ಇರುವ ತನಕ... ತಾಯಿ ಪ್ರೀತಿ ಅಮರ ಎಂದು ಕನ್ನಡ ತಾಯಿಯ ಪ್ರೀತಿ ಹಾಗೂ ಅಭಿಮಾನವನ್ನು ಮೆರೆದರು.

ಕವಿ ನರಸಿಂಹ ಸ್ವಾಮಿ ಅವರು ಕನ್ನಡ ತಾಯಿಗೆ ಕನಕಾಂಬರ, ಪೀತಾಂಬರ ತೊಡಿಸಿ, ಮುತ್ತಿನ ಮಳೆಗರೆದರು.

ಡಾ. ಎಲ್.ಎನ್. ಮುಕುಂದರಾಜ್ ಅವರು ಭಾರತ ದೇಶ ಪ್ರೀತಿಯ ದೇಶ, ಒಲವೇ ಬದುಕಿನ ತಿರುಳು, ಎಲ್ಲೋ ಸ್ವಲ್ಪ ಕಲ್ಲಿನ ಕಿಚ್ಚು, ಅಲ್ಲೇ ಮಲ್ಲಿಗೆ ಮುಗುಳು ಎಂಬಲ್ಲಿ ದೇಶಭಕ್ತಿಯ ಸಂದೇಹದ ಭಾವನೆ ವ್ಯಕ್ತವಾಯಿತು.

ಡಾ. ಅರ್ಜುನ ಗೊಳಸಂಗಿ ಅವರು ನನ್ನ ಅಜ್ಜಿ, ಅವ್ವ, ನನ್ನಾಕೆ ಎಂಬ ಕವಿತೆಯಲ್ಲಿ ಸಂಸ್ಕೃತಿಯ ಅವನತಿಯನ್ನು ನವಿರಾಗಿ ಬಿಂಬಿಸಿದರು. ನನ್ನಜ್ಜಿ ಮಾಡುತ್ತಿದ್ದು ಪುಂಡಿ ಪಲ್ಲೆ ರೊಟ್ಟಿ, ಹುಳ್ಳಿ ಹುಳ್ಳಾನುತ್ತ ನಮ್ಮವಗೆ ಬಾರದು, ನಮ್ಮವ್ವ ಮಾಡುತ್ತಿದ್ದ ಬಿಳಿ ಜೋಳದ ರೊಟ್ಟಿ, ದಪಾಟಿ, ಹೀರಿ, ಬದನೆಕಾಯಿ ಬರತ, ತೊಂಡಿ ಚಟ್ನಿ ನನ್ನಾಕೆಗೆ ಬರದು. ಏನಿದ್ದರೂ ಇವಳದು ಬ್ರೆಡ್ಡು ಬಿಸ್ಕಿಟು ಅನ್ನ ಸಾರಿನವಳು ಎಂಬ ಸಾಲುಗಳು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ಮುಳುಗಿಸಿತು.

ಧಾರವಾಡದ ಸಿದ್ದಲಿಂಗದ ದೇಸಾಯಿ ಅವರು ಧಾರವಾಡ ಕನ್ನಡದಲ್ಲಿ ರಚಿಸಿದ ನಾಸ್ತಿಕನ ಭಜನ ಎಂಬ ಕವನದಲ್ಲಿ  ಈ ಜಗಕೊಬ್ಬನಾರ ದೇವರನ್ನಾವವಿದ್ದಿದ್ದರ ಆ ಮಾತ ಬ್ಯಾರೆ ಇತ್ತ, ಆಗ ಈ ಜಗದ ಪಾಡು ಬ್ಯಾರೇನ ಇರತಿತ್ತ ಮೂಢನಂಬಿಕೆಯ ವಿಡಂಬನೆಯ ಕವಿತೆ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚಿತು.

ಹಿರಿಯ ಕವಿ ಚನ್ನಣ್ಣ ವಾಲೀಕಾರ ಯಾರಿಗಾರೋ ಯಾರೋ ಇರುವರು, ಅತ್ತರಿಲ್ಲ, ಕೆಟ್ಟರಿಲ್ಲ, ಸುಟ್ಟರಿಲ್ಲಿ ಕೇಳುವರಿಲ್ಲ ಎಂಬ ತತ್ವಪದವೊಂದರ ಮೂಲಕ ವ್ಯವಸ್ಥೆಯ ಚಿತ್ರಣ ನೀಡಿದರು.

ಕವಿ ಸರಜೂ ಕಾಟ್ಕರ್ ಅವರು, ಒಂದು ಸೂರ್ಯ ನಿನಗಿರಲಿ, ಒಂದು ಸೂರ್ಯ ನನಗಿರಲಿ, ಇಬ್ಬರೂ ನಾವು ಬುದ್ಧನ ಆತ್ಮವ ಹುಡುಕೋಣ, ಶಾಂತಿಯ ಬಿತ್ತೋಣ ಎಂದು ಶಾಂತಿ ಸಂದೇಶ ನೀಡಿದರು.

ಲೋಕೇಶ್ ಅಗಸನಕಟ್ಟೆ ಅವರು ತಮ್ಮ ಕವನದಲ್ಲಿ ಕವಿಯ ನಂಬಿಕೆ ಕವನದಲ್ಲಿ ನೀನೇ ದೇವರೆಂದು ಪೂಜಿಸಲಿ ಎಷ್ಟು ದಿನ, ಇನ್ನಾದರೂ ಕಾಣಬೇಕು ನನ್ನತನ ಎಂಬಲ್ಲಿ ಸ್ವಂತಿಕೆ ರೂಢಿಸುವ ಕಳಕಳಿ ಇತ್ತು.

ಉದಯೋನ್ಮುಖ ಕವಿ ಅರುಣ್ ಜೋಳದ ಕೂಡ್ಲಿಗಿ ಅವರ ಕಲ್ಲು ಕನವರಿಕೆ ಕವನದಲ್ಲಿ ಹಂಪಿ ದೇಗುಲಗಳ ರೋದನ ಮಾರ್ಮಿಕವಾಗಿ ತಿಳಿಸಿದರು.

ಕೊನೆಯಲ್ಲಿ ಹಿರಿಯ ಕವಿ ಡಾ. ದೊಡ್ಡರಂಗೇಗೌಡ ಎಂದೆಂದೂ ಮೊಳಗಲಿ ಕನ್ನಡದ ಕಹಳೆ ತಾಯೊಲುಮೆ ಸಿರಿ ನಡಿಗೆಗೆ ಅಭಿಮಾನವೇ ಮಾಲೆ ಕವನ ವಾಚಿಸಿ, ಕನ್ನಡದ ಶ್ರೀಮಂತಿಕೆ ಹಾಗೂ ಅಭಿಮಾನವನ್ನು ವ್ಯಕ್ತಪಡಿಸಿದರು.

ಕವಿಗೋಷ್ಠಿಯಲ್ಲಿ ಡಾ. ಕವಿತಾ ರೈ, ಡಾ. ಎಚ್.ಎಲ್. ಪುಷ್ಪ, ಶಂಕರ್ ಕಟಗಿ, ಸಿದ್ದರಾಜ ಪೂಜಾರಿ, ಶ್ರೀ ಟಿ.ಕೆ. ಗಂಗಾಧರ ಪತ್ತಾರ, ಶ್ರೀಮತಿ ಎ.ಎಂ. ಜಯಶ್ರೀ, ಶ್ರೀ ಮುದೇನೂರ ನಿಂಗಪ್ಪ, ಬಂಗಿ ಮಂಜುನಾಥ್, ಡಾ. ಕೆ. ಪೊನ್ನಂಗಧರ ತಮ್ಮ ಕವನಗಳನ್ನು ವಾಚನ ಮಾಡಿದರು.

ಸುಶ್ರಾವ್ಯವಾಗಿ ಹಾಡಿ ಈ ಕವನಗಳಿಗೆ ಜೀವ ತುಂಬಿ ಲಕ್ಷ್ಮೀ ಹೆಗಡೆ, ಆರ್. ಅನುಪಮ, ಪ್ರತಿಮಾ ಅತ್ರೇಯ, ಚಿದಾನಂದ ರಾರಾವಿ, ನಾಗರಾಜ್ ಪತ್ತಾರ್ ಸವಿತಾ ಜಂಗಮಶೆಟ್ಟಿ, ಕವಿತಾ ಶೆಣೈ, ಯಲ್ಲಪ್ಪಾ ಭಂಡಾರ, ಮನೋಜ್ ಜನಮನ ಗೆದ್ದರು. ಖ್ಯಾತ ಗಾಯಕ ಶ್ರೀ ಶಂಕರ ಶಾನುಭೋಗ್ ಸಂಗೀತ ಸಂಯೋಜನೆ ಮಾಡಿದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ. ಈ ಸಿದ್ದಲಿಂಗಯ್ಯ ಅವರು ತಾವು ರಚಿಸಿದ  ನನ್ನ ಕವನವನ್ನು ವಾಚಿಸಿ ಜನಪದ ವೃತ್ತಿ ಗಾಯಕರು ನಮ್ಮ ಗುರುಗಳು. ಅವರು ಪರಂಪರೆಯನ್ನು ಜೀವಂತವಾಗಿಟ್ಟಿದ್ದಾರೆ ಎಂದರು.

ಇಂದಿನ ಕವಿ ಕಾವ್ಯ ಗಾಯನ ಅವಲೋಕಿಸಿದಾಗ ಕನ್ನಡ ನುಡಿಗೇ ಕವಿತೆಗೆ ಸಾವಿಲ್ಲ. ಅದು ಚಿರಂತನವಾದದ್ದು, ಎಂದು ಸಾಬೀತಾಗಿದೆ ಎಂದರು.

ಸಾವಿರ ವರ್ಷಗಳ ಹಿಂದೆಯೇ ಕನ್ನಡದಲ್ಲಿ ಕವಿತೆ ಹಾಡುವ ಸಂಪ್ರದಾಯ ಬೆಳೆದು ಬಂದಿದೆ. ಶಿವಶರಣರ ವಚನಗಳು, ದಾಸರ ಕೀರ್ತನೆಗಳು ಗಮಕ ಹಾಗೂ ಸುಗಮ ಸಂಗೀತಗಾರರು ಕನ್ನಡ ಭಾವಗೀತೆಗಳನ್ನು ಜೀವಂತವಾಗಿಟ್ಟಿದ್ದಾರೆಂದರು.

ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಕಾರ್ಯದರ್ಶಿ ಶ್ರೀ ಬಿ.ಆರ್. ಜಯರಾಮರಾಜೇ ಅರಸ್ ಮಾತನಾಡಿ, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗಲು ಕವಿ ಸಾಹಿತಿಗಳ ಕೊಡುಗೆ ಅನನ್ಯವಾದುದು ಎಂದು ನುಡಿದರು.

ಪ್ರವಾಸೋದ್ಯಮ ಸಚಿವ ಶ್ರೀ ಜಿ. ಜನಾರ್ದನ ರೆಡ್ಡಿ ಡಾ. ಸಿದ್ದಲಿಂಗಯ್ಯನವರ ಕವನ ವಾಚನ ಮಾಡುವ ಮೂಲಕ ಕವಿಗೋಷ್ಠಿ ಉದ್ಘಾಟಿಸಿದರು. ಸಚಿವ ಶ್ರೀ ಬಿ. ಶ್ರೀರಾಮುಲು ಉಪಸ್ಥಿತರಿದ್ದರು. 

ಮುಖಪುಟ /ಸುದ್ದಿ ಸಮಾಚಾರ