ಮುಖಪುಟ /ಸುದ್ದಿ ಸಮಾಚಾರ   
 

ವಿದೇಶಿಯರ ಮನದಲ್ಲಿ ಮರೆಯಲಾಗದ ಅದ್ಭುತ ಹಂಪಿ

ಹಂಪಿ, ನ.೪: ಅದ್ಭುತ, ಅಪರೂಪ, ಅವಿಸ್ಮರಣೀಯ... ಇವು ಹಂಪಿ ನೋಡಿದ ವಿದೇಶಿಯರ ಮನದಾಳದಿಂದ ಬಂದ ಮಾತುಗಳು. ಇಟಲಿಯಿಂದ ಇಂಡಿಯಾಗೆ ಬಂದು ಕಳೆದ ಒಂದು ವಾರದಿಂದ ಹಂಪಿಯಲ್ಲಿ ಬೀಡು ಬಿಟ್ಟಿರುವ ಆನ್ ಜಾನ್ ಬೋನ್ ಅವರು ಮಂಗಳವಾರ ವಿಜಯ ವಿಠಲ ದೇವಾಲಯ ನೋಡಿ ಹೊರ ಬಂದಾಗ ಮಾರ್ವಲಸ್ ಎಂದು ಉದ್ಘರಿಸಿದರು. ಕಮಲ ಮಹಲ್, ಹಜಾರ ರಾಮ ದೇವಾಲಯ, ಆನೆ ಶಾಲೆ, ಶಿವ ಹಾಗೂ ಕೃಷ್ಣ ದೇವಾಲಯ ಲಕ್ಷ್ಮಿ ನರಸಿಂಹ, ಸಾಸಿವೆ ಕಾಳು ಹಾಗೂ ಕಡಲೇ ಕಾಳು ಗಣೇಶ, ಬಡವಿಲಿಂಗ ದೇವಾಲಯ, ಹಲವು ಉತ್ಖನನ ಸ್ಥಳಗಳನ್ನು ನೋಡಿದ ಅವರು ಮಾರ್ವಲಸ್ (ಅದ್ಭುತ) ಎಂಬ ಒಂದೇ ಪದದಲ್ಲಿ ಈ ವಾಸ್ತುಶಿಲ್ಪ ಕಲೆಯ ಬೀಡನ್ನು ವಿವರಿಸಿದರು.

೧೪ ವರ್ಷಗಳಿಂದ ನಡೆಯುತ್ತಿರುವ ಹಂಪಿ ಉತ್ಸವದ ಸಂಭ್ರಮ-ಸಡಗರ ವಿದೇಶಗಳಲ್ಲೂ ಜನಜನಿತವಾಗಿದೆ. ಹಂಪಿ ಉತ್ಸವಕ್ಕೆ ಕಳೆದ ನಾಲ್ಕು ವರ್ಷದಿಂದ ಸತತವಾಗಿ ಬಂದಿದ್ದೇನೆ. ನನ್ನ ಹಂಪಿಯಾತ್ರೆ ಇಷ್ಟಕ್ಕೆ ನಿಲ್ಲುವುದಿಲ್ಲ. ಮುಂದಿನ ವರ್ಷವೂ ಬರುತ್ತೇನೆ. ಈ ಹಬ್ಬವನ್ನು ನಾನು ತಪ್ಪಿಸಿಕೊಳ್ಳಲಾರೆ ಎನ್ನುತ್ತಾರೆ ಲೂಸಿಯಾನೊ. ಹಂಪಿ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದಾಕ್ಷಣ ರೋಮಾಂಚನಗೊಳ್ಳುವ ಲೂಸಿಯಾನೊ ಈ ತಾಣವನ್ನು ಸುಪರ್ಬ್ ಎಂದು ಬಣ್ಣಿಸಿದರು.

ಹಂಪಿ ಉತ್ಸವ ಹಲವಾರು ಕಾರಣಕ್ಕೆ ವಿದೇಶಿಯರಿಗೆ ಇಷ್ಟವಾಗುತ್ತದೆ. ಇಲ್ಲಿನ ವಾಸ್ತುಶಿಲ್ಪ ಕಲೆಯ ಸೌಂದರ್ಯ ಒಂದೆಡೆಯಾದರೆ, ಉತ್ಸವದ ಅಂಗವಾಗಿ ಜರುಗುವ ಸಂಗೀತ ರಸಸಂಜೆ ಮತ್ತೊಂದು ಆಕರ್ಷಣೆ. ನಾನೊಬ್ಬ ಸಂಗೀತಗಾರ. ಪಾಶ್ಚಾತ್ಯ ಸಂಗೀತ ನನಗೆ ಅಚ್ಚುಮೆಚ್ಚು. ಹಿಂದೂಸ್ತಾನಿ, ಸುಗಮ ಸಂಗೀತವೂ ನನ್ನ ಮನಸೆಳೆದಿದೆ. ಸೋಮವಾರ ರಾತ್ರಿ ಹರಿಹರ ವೇದಿಕೆ ಹಾಗೂ ಶ್ರೀಕೃಷ್ಣದೇವರಾಯ ವೇದಿಕೆಯಲ್ಲಿ ನಡೆದ ಸಂಗೀತ ಕಾರ್ಯಕ್ರಮಗಳನ್ನು ನೋಡಿ, ಆಲಿಸಿ, ಆನಂದಿಸಿದೆ. ಆಶಾ ಬೋಸ್ಲೆ ಅವರ ಗಾನಸುಧೆಯನ್ನು ಇನ್ನೂ ಸವಿಯಬೇಕು ಎನಿಸಿತು. ಭಾರತೀಯ ಸಂಗೀತಗಾರರು ತುಂಬಾ ಪ್ರತಿಭಾನ್ವಿತರು. ಇಲ್ಲಿನ ಸಂಗೀತ ಉತ್ಸವಗಳು ಮನಸೂರೆಗೊಳ್ಳುತ್ತವೆ. ಹರಿಹರ ವೇದಿಕೆಯಲ್ಲಿ ಮಂಗಳವಾರವೂ ಸಂಗೀತ ಸಂಜೆ ಕಾರ್ಯಕ್ರಮವನ್ನು ವೀಕ್ಷಿಸುತ್ತೇನೆ ಎಂದು ಲೂಸಿಯಾನೊ ಅವರ ಗೆಳೆಯ ರಾಬರ್ಟ್ ಉಲಿದರು. ಹಂಪಿಗೆ ಬಂದು ನಾಲ್ಕು ದಿನಗಳಾಗಿವೆ. ಇನ್ನೂ ಎರಡು ದಿನಗಳು ಇಲ್ಲಿದ್ದು, ಬಾದಾಮಿಗೆ ಹೋಗುತ್ತೇನೆ ಎಂದು ರಾಬರ್ಟ್ ಹೇಳಿದರು. ಇಲ್ಲಿನ ಜನತೆ ಮೃದು ಮನಸ್ಸಿನವರು. ನಮಗೆ ಯಾರಿಂದಲೂ ತೊಂದರೆಯಾಗಿಲ್ಲ. ಸ್ಥಳೀಯರು ನಮ್ಮ ಭಾವನೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.

ಹಂಪಿ ಬಗ್ಗೆ ಸ್ನೇಹಿತರಿಂದ ಕೇಳಿ ತಿಳಿದಿದ್ದ ನೋಮ್ ಸೈವನ್ ಅವರು ಸೋಮವಾರ ರಾತ್ರಿಯಷ್ಟೇ ಹಂಪಿಗೆ ಬಂದಿದ್ದಾರೆ. ವಿದ್ಯುತ್ ದೀಪಗಳಲ್ಲಿ ಹಂಪಿಯನ್ನು ನೋಡಿದ ಸೈವನ್ ಅವಸ್ಮರಣೀಯ ಎಂದು ವರ್ಣಿಸಿದರು. ಇಸೇಲ್‌ನಿಂದ ಬಂದಿರುವ ಅವರು, ನನ್ನ ಇಸ್ರೇಲ್ ಗೆಳೆಯರು, ಭಾರತದ ಗೆಳೆಯರು ಹಂಪಿಯ ಬಗ್ಗೆ ಬಹಳ ಹೇಳಿದ್ದಾರೆ. ಹಾಗಾಗಿ ಹಂಪಿ ಉತ್ಸವವನ್ನು ನೋಡಲು ಇಲ್ಲಿಗೆ ಬಂದಿದ್ದೇನೆ. ಎಲ್ಲಾ ದೇವಾಲಯಗಳು, ಹಾಗೂ ಸ್ಮಾರಕಗಳ ಬಳಿ ಜನಸ್ತೋಮ ತುಂಬಿದೆ. ಒಂದು ವಾರ ಈ ಸ್ಥಳದಲ್ಲಿ ಇದ್ದು, ಜನಸಂದಣಿ ಕಡಿಮೆಯಾದ ನಂತರ ಹಂಪಿಯ ಪರ್ಯಾಟನೆ ಮಾಡುತ್ತೇನೆ. ಜನ ಸಾಗರೋಪಾದಿಯಲ್ಲಿ ಹಂಪಿಗೆ ಬರುತ್ತಿರುವುದನ್ನು ನೋಡಲು ತುಂಬಾ ಸಂತೋಷವಾಗುತ್ತದೆ ಎಂದು ಅವರು ಹೇಳಿದರು.

ಮುಖಪುಟ /ಸುದ್ದಿ ಸಮಾಚಾರ