ಮುಖಪುಟ /ಸುದ್ದಿ ಸಮಾಚಾರ   
 

ಹಂಪಿಯ ಸಂಭ್ರಮದಲ್ಲಿ ದೋಣಿಯ ಪಯಣ

ಹಂಪಿ, ನ.೦೪: ಹಂಪಿಯ ಪ್ರವಾಸಿಗರನ್ನು ಕೈಬೀಸಿ ಕರೆಯುವ ಕಮಲಾಪುರದ ವಿಶಾಲವಾದ ಕೆರೆಯಲ್ಲಿ ವೈವಿಧ್ಯಮಯ ದೋಣಿಗಳು ಬಳುಕುತ್ತಾ ಕುಲುಕುತ್ತಾ ಉತ್ಸಾಹಿ ಯುವಕರನ್ನು ಸುತ್ತಾಡಿಸುತ್ತಿವೆ.

ಬಳ್ಳಾರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಬಳ್ಳಾರಿ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ನೆಹರು ಯುವಕೇಂದ್ರ ಹಾಗೂ ನೋಪಾಸನ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಹಂಪಿ ಸಾಹಸೋತ್ಸವದ ಅಂಗವಾಗಿ ಕಮಲಾಪುರ ಕೆರೆಯಲ್ಲಿ ಬೋಟಿಂಗ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಜಲಕ್ರೀಡೆಯಲ್ಲಿ ಪಾಲ್ಗೊಂಡಿರುವ ೨ ಪೆಡಲ್ ಬೋಟ್, ೨ ಮೋಟರ್ ಬೋಟ್, ೨ ರೊಯಿಂಗ್ ಬೋಟ್, ೧ ಕೊರ್ಯಾಕಲ್, ೨ ಸರ್ಫ್ ಮಾಡ್ಯೂಲ್ ಹಾಗೂ ೨ ಕೆನೊಗಳು ಕಮಲಾಪುರದ ಕೆರೆಯಲ್ಲಿ ಈಜಾಡುತ್ತಿವೆ. ಬೋಟಿಂಗ್ ವೇಳೆ ೬೯೮ ಯುವಕರಿಗೆ ಬೋಟಿಂಗ್ ತರಬೇತಿ ನೀಡಲಾಗುತ್ತದೆ ಎಂದು ನೊಪಾಸನ ಸಂಸ್ಥೆಯ ನಿರ್ದೇಶಕ ಎಂ.ಎ.ಶಖೀಬ್ ಅವರು ಹೇಳಿದರು.

ಪ್ರತಿ ದೋಣಿಯಲ್ಲೂ ಒಬ್ಬೊಬ್ಬರು ನುರಿತ ದೋಣಿ ತರಬೇತುದಾರರು ಇರುತ್ತಾರೆ. ದೋಣಿವಿಹಾರಕ್ಕೆ ತೆರಳುವವರು ಕಡ್ಡಾಯವಾಗಿ ಜೀವರಕ್ಷಕ ಕವಚ (ಲೈಫ್ ಜಾಕೆಟ್) ತೊಟ್ಟುಕೊಳ್ಳಬೇಕು. ಕವಚ ತೊಡದೆ ನೀರಿಗೆ ಇಳಿಸಿದರೆ, ತರಬೇತುದಾರರಿಗೆ ೫೦೦ ರೂ. ದಂಡಶುಲ್ಕ ವಿಧಿಸಲಾಗುತ್ತದೆ ಎಂದು ಅವರು ವಿವರಿಸಿದರು. ಸೀನಿಯರ್ ಇನ್‌ಸ್ಟ್ರಕ್ಟರ್ ಬಸವರಾಜು, ಜೂನಿಯರ್ ಇನ್‌ಸ್ಟ್ರಕ್ಟರ್ ಮುನಿಯಪ್ಪ ಹಾಗೂ ಹನುಮಂತಪ್ಪ ಅವರು ದೋಣಿವಿಹಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿರುತ್ತಾರೆ. ದೋಣಿವಿಹಾರವು ಕೇವಲ ಮನರಂಜನೆಯ ಆಟವಾಗಬಾರದು, ಕಲಿಕಾ ಕಾರ್ಯಕ್ರಮವಾಗಬೇಕು ಎಂಬ ಉದ್ದೇಶದಿಂದ ಎಲ್ಲರಿಗೂ ತರಬೇತಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಕೆರೆಯನ್ನು ಒಂದು ಸುತ್ತು ಹಾಕಲು ಮೋಟರ್ ಬೋಟ್ ೧೫ ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇತರ ಬೋಟ್‌ಗಳಲ್ಲಿ ಸುಮಾರು ೩೦ ನಿಮಿಷಗಳು ತರಬೇತಿ ನೀಡಲಾಗುತ್ತದೆ. ದೋಣಿವಿಹಾರ ಹಾಗೂ ತರಬೇತಿಯು ನವಂಬರ್ ೬ರ ವರೆಗೂ ಇರುತ್ತದೆ. ವಿವಿಧ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು, ಯುವಕ ಸಂಘಗಳ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಮುಖಪುಟ /ಸುದ್ದಿ ಸಮಾಚಾರ