ಮುಖಪುಟ /ಸುದ್ದಿ ಸಮಾಚಾರ   
 

ಉಪ ಚುನಾವಣೆ ನವೆಂಬರ್ 23 ರಿಂದಲೇ ನೀತಿ ಸಂಹಿತೆ ಜಾರಿ

ಬೆಂಗಳೂರು, ನ.25: - ಭಾರತ ಚುನಾವಣಾ ಆಯೋಗ ರಾಜ್ಯದ ಏಳು ವಿಧಾನ ಸಭಾ ಚುನಾವಣಾ ಕ್ಷೇತ್ರದಲ್ಲಿ ನಡೆಸಲು ಉದ್ದೇಶಿಸಿರುವ ಉಪಚುನಾವಣೆಗಳು ನಿಗದಿತ ವೇಳಾ ಪಟ್ಟಿಯಂತೇ ನಡೆಯಲಿವೆ ಎಂದು ಮುಖ್ಯ ಚುನಾವಣಾ ಅಧಿಕಾರಿಯವರು ಇಂದು ಇಲ್ಲಿ ತಿಳಿಸಿದರು.

ಈ ಸಂಬಂಧವಾಗಿ ಇಂದು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಎಂ.ಎನ್. ವಿದ್ಯಾಶಂಕರ್ ಅವರು, ಉಪ ಚುನಾವಣೆಗೆ ಸಂಬಂಧಿಸಿದಂತೆ ೨೦೦೮ರ ಡಿಸೆಂಬರ್ ೩ ರಂದು ಅಧಿಸೂಚನೆ ಹೊರಡಿಸಲಾಗುವುದು. ಡಿಸೆಂಬರ್ ೧೦ರ ವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಡಿ. ೧೧ರಂದು ನಾಮ ಪತ್ರಗಳನ್ನು ಪರಿಶೀಲಿಸಲಾಗುವುದು, ಡಿ. ೧೩ರಂದು ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಅವಕಾಶ ಕಲ್ಪಿಸಲಾಗುವುದು, ಡಿ. ೨೭ ರಂದು ಮತದಾನ ಹಾಗೂ ೩೦ ರಂದು ಮತಗಳ ಎಣಿಕೆ ನಡೆಸಲಾಗುವುದು ಎಂದರು.

ರಾಜ್ಯದ ಏಳು ವಿಧಾನ ಸಭಾ ಕ್ಷೇತ್ರಗಳಾದ ಹುಕ್ಕೇರಿ (೭), ಅರಭಾವಿ (೮), ದೇವದುರ್ಗ (೫೬/ಪ.ಪಂ), ಕಾರವಾರ (೭೭), ತುರುವೇಕೆರೆ (೧೩೦), ದೊಡ್ಡಬಳ್ಳಾಪುರ (೧೮೦) ಮತ್ತು ಮದ್ದೂರು (೧೮೭) ಕ್ಷೇತ್ರಗಳಲ್ಲಿ ೨೦೦೮ರ ಡಿಸೆಂಬರ್ ತಿಂಗಳಲ್ಲಿ ಚುನಾವಣೆ ನಡೆಸುವುದಾಗಿ ನವೆಂಬರ್ ೨೩ರಂದೇ ತಿಳಿಸಿತ್ತು.

ಭಾರತ ಚುನಾವಣಾ ಆಯೋಗವು ನವೆಂಬರ್ ೨೩ರಿಂದಲೇ ಚುನಾವಣೆ ನಡೆಸುವುದಾಗಿ ತಿಳಿಸಿದ ಈ ದಿನದಿಂದಲೇ ಉಪ ಚುನಾವಣೆ ನಡೆಯುವ ಎಲ್ಲಾ ಜಿಲ್ಲೆಗಳಲ್ಲಿ ಮಾದರಿ ನೀತಿ ಸಂಹಿತೆಯು ಜಾರಿಯಾಗಿರುತ್ತದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಹಾಗೂ ಈ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳಿಗೆ ಸಂಬಂಧಿಸಿದಂತೆ ಉಪ ವಿಭಾಗಗಳ ಸಹಾಯಕ ಆಯುಕ್ತರನ್ನು ಚುನಾವಣಾಧಿಕಾರಿಗಳನ್ನಾಗಿ ನೇಮಿಸಲಾಗಿರುತ್ತದೆ. ಈ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲೂ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುವುದು ಎಂದರು.

ಈ ಉಪ ಚುನಾವಣೆಗೆ ಭಾವಚಿತ್ರವಿರುವ ಗುರುತಿನ ಚೀಟಿಗಳನ್ನು ಹೊಂದಿಲ್ಲದೇ ಇರುವ ಮತದಾರರಿಗೆ ಪರ್ಯಾಯ ದಾಖಲೆಗಳನ್ನು ಉಪಯೋಗಿಸುವುದಕ್ಕೆ ಚುನಾವಣಾ ಆಯೋಗದಿಂದ ಪ್ರತ್ಯೇಕ ಆದೇಶವನ್ನು ಪಡೆದುಕೊಳ್ಳಲಾಗುವುದು. ಭಾವಚಿತ್ರವಿರುವ ಮತದಾರರ ಪಟ್ಟಿಯ ಕರಡು ಪ್ರಕಟಣೆಯಾಗಿದ್ದರೂ ಸಹ ಅದು ಇನ್ನೂ ಅಂತಿಮಗೊಂಡಿಲ್ಲವಾದ್ದರಿಂದ ಹಿಂದೆ ಇದ್ದ ಮತದಾರರ ಪಟ್ಟಿಯನ್ನೇ ಬಳಸಲಾಗುವುದು ಎಂದು ನುಡಿದರು.

ಉಪ ಚುನಾವಣೆ ನಡೆಯುವ ಜಿಲ್ಲೆಗಳಲ್ಲಿನ ಜಿಲ್ಲಾಧಿಕಾರಿಗಳೊಂದಿಗೆ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಸುದೀರ್ಘವಾದ ಪ್ರಾಥಮಿಕ ಸುತ್ತಿನ ಚರ್ಚೆ ನಡೆಸಲಾಗಿದೆ. ಈಗಾಗಲೇ ಉಪ ಚುನಾವಣೆಗೆ ಸಂಬಂಧಿಸಿದಂತೆ ಹಲವಾರು ಮಾಹಿತಿಗಳನ್ನು ನೀಡಲಾಗಿದೆ. ಶಾಂತಿ ಮತ್ತು ಸುವ್ಯವಸ್ಥೆ ಬಗ್ಗೆ ಸೂಕ್ತ ಕ್ರಮಗಳನ್ನು ಪೊಲೀಸ್ ಇಲಾಖೆಯ ಸಹಾಯದಿಂದ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಮುಖಪುಟ /ಸುದ್ದಿ ಸಮಾಚಾರ