ಮುಖಪುಟ /ಸುದ್ದಿ ಸಮಾಚಾರ   
 

ಇ-ಆಡಳಿತ ಬಲಪಡಿಸಲು : ಮುಖ್ಯಕಾರ್ಯದರ್ಶಿ ಸಲಹೆ

ಬೆಂಗಳೂರು, ನ.28 : ಎಚ್‌ಆರ್‌ಎಂಎಸ್ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಏಕೈಕ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕದ್ದಾಗಿದ್ದು ಇದರಿಂದ ಸರ್ಕಾರಿ ನೌಕರರ/ ಅಧಿಕಾರಿಗಳ ಮಾಹಿತಿಯನ್ನು ಅತಿ ಸುಲಭದಲ್ಲಿ ಪಡೆಯಬಹುದು ಎಂದು ಮುಖ್ಯ ಕಾರ್ಯದರ್ಶಿ ಶ್ರೀ ಸುಧಾಕರ ರಾವ್ ಅವರು ತಿಳಿಸಿದರು.

ಅವರು ಇಂದು ನಗರದಲ್ಲಿ ಇ-ಆಡಳಿತ ಇಲಾಖೆಯ ವತಿಯಿಂದ ಏರ್ಪಡಿಸಲಾಗಿದ್ದ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ  (ಎಚ್‌ಆರ್‌ಎಂಎಸ್) ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಇ-ಆಡಳಿತದ ಅನುಷ್ಠಾನದ ದಿಸೆಯಲ್ಲಿ ಇದೊಂದು ಮಹತ್ವಪೂರ್ಣ ಹೆಜ್ಜೆಯಾಗಿದ್ದು, ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲ ಇಲಾಖೆಗಳ ಮುಖ್ಯಸ್ಥರು ಶ್ರಮಿಸಬೇಕು ಹಾಗೂ ನಿಯಮಿತವಾಗಿ ಮಾಹಿತಿಗಳನ್ನು ನವೀಕರಿಸುವುದರ ಜೊತೆಗೆ ಖಚಿತ ಅಂಕಿ ಅಂಶಗಳನ್ನು ನೀಡಬೇಕು ಎಂದು ಅವರು ಸಲಹೆ ನೀಡಿದರು.

ದಾಖಲೆಗಳನ್ನು ಕಡತಗಳ ಮೂಲಕ ನಿರ್ವಹಿಸುವುದರ ಜೊತೆಗೆ ನೂತನ ತಂತ್ರಜ್ಞಾನವನ್ನೂ ಅಳವಡಿಸಿಕೊಳ್ಳಲಾಗುತ್ತಿದೆ. ಇದು ಸಮರ್ಪಕವೆನಿಸುವುದಿಲ್ಲ. ಎರಡೂ ವಲಯದ ಕಡೆ ಗಮನ ನೀಡುವುದು ಸಮಂಜಸವೆನಿಸುವುದಿಲ್ಲ. ಬದಲಿಗೆ ಆಧುನಿಕ ತಂತ್ರಜ್ಞಾನವನ್ನೇ ಆಧರಿಸಿ ದಾಖಲೆಗಳನ್ನು ಅಭಿವೃದ್ಧಿಪಡಿಸುವುದು ಭವಿಷ್ಯದ ದೃಷ್ಟಿಯಿಂದ ಸೂಕ್ತ ಎನ್ನುವ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.

ನಿವೃತ್ತಿ ಹೊಂದಿದ ದಿನವೇ ಸರ್ಕಾರಿ ನೌಕರರಿಗಿರುವ ಎಲ್ಲಾ ಸವಲತ್ತು ಸೌಲಭ್ಯಗಳು ದೊರೆಯುವಂತಾಗಲು ಎಚ್‌ಆರ್‌ಎಂಎಸ್ ಸಹಕಾರಿ ಎಂದು ಅವರು ಬಣ್ಣಿಸಿದರು.

ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಬಿ.ಎಲ್. ಶ್ರೀಧರ್ ಅವರು ಮಾತನಾಡಿ, ಸರ್ಕಾರದ ಎಲ್ಲಾ ಇಲಾಖೆಗಳ ಮುಖ್ಯಸ್ಥರು ಮಾನವ ಸಂಪನ್ಮೂಲ ನಿರ್ವಹಣೆಗೆ ಗಮನ ಕೊಡುವುದರಿಂದ ಉತ್ತಮ ಆಡಳಿತ ನೀಡಲು ಸಾಧ್ಯ. ಹಾಗೂ ಇ-ಆಡಳಿತ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ಬರಲು ಸಾಧ್ಯ ಎಂದು ಅವರು ತಿಳಿಸಿದರು.

ಇದರಿಂದಾಗಿ ಮಾನವ ಶ್ರಮದ ಬಳಕೆಯಲ್ಲಿ ಉಳಿತಾಯವಾಗಿದೆ. ಆಯವ್ಯಯ ಸಿದ್ಧಪಡಿಸುವವರೂ ಮಾನವ ಸಂಪನ್ಮೂಲ ನಿರ್ವಹಣೆ ಯೋಜನೆಯಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ನೀತಿ ನಿರೂಪಕರಿಗೆ ಮತ್ತು ಕ್ಷಿಪ್ರವಾಗಿ ನಿರ್ಣಯ ಕೈಗೊಳ್ಳುವವರಿಗೆ ಈ ಮಾಹಿತಿ ಭಂಡಾರವು ಅತ್ಯಮೂಲ್ಯ ಸಂಪನ್ಮೂಲವಾಗಿದೆ. ಇವುಗಳನ್ನು ಆಧರಿಸಿ ತ್ವರಿತವಾಗಿ ನಿರ್ಣಯವನ್ನು ಕೈಗೊಳ್ಳಬಹುದಾಗಿದೆ.

ಬೆಂಗಳೂರು ನಗರದಲ್ಲಿ ಜನಪ್ರಿಯವಾಗಿರುವ ಬೆಂಗಳೂರು ಒನ್ ಕೇಂದ್ರಳನ್ನು ಇತರ ನಗರಗಳಿಗೂ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಕಾರ್ಯಾಗಾರದಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಡಾ. ಕೆ.ವಿ. ರಾಜು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಮುಖಪುಟ /ಸುದ್ದಿ ಸಮಾಚಾರ