ಮುಖಪುಟ /ಸುದ್ದಿ ಸಮಾಚಾರ   


ಸುದ್ದಿ ಪ್ರಸಾರಕ್ಕೆ ಪ್ರಾಯೋಜಕತ್ವ ಸಲ್ಲ ಎಸ್.ವಿ.ಜಯಶೀಲರಾವ್

ಬೆಂಗಳೂರು, ನ.19 :  ಸುದ್ದಿ ಯಾವಾಗಲೂ ಸ್ವತಂತ್ರವಾಗಿರಬೇಕು. ಸುದ್ದಿಯ ಪ್ರಸಾರಕ್ಕೂ ಪ್ರಾಯೋಜಕತ್ವ ಪಡೆಯುವುದು ಸಲ್ಲ ಎಂದು ಟಿ.ಎಸ್.ಆರ್. ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಎಸ್.ವಿ.ಜಯಶೀಲರಾವ್ ಅಭಿಪ್ರಾಯಪಟ್ಟರು.

ಬೆಂಗಳೂರು ದೂರದರ್ಶನ ಕೇಂದ್ರದ ಸುದ್ದಿ ವಿಭಾಗದ ಬೆಳ್ಳಿಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ಸುದ್ದಿಗೂ ಪ್ರಾಯೋಜಕತ್ವ ಪಡೆದರೆ ಅದು ಸುದ್ದಿಯ ಮಾರಾಟವಾಗುತ್ತದೆ, ನಾಗರಿಕ ಸಮಾಜದ ನಾಲ್ಕನೇ ಅಂಗವೆಂದೇ ಹೆಸರಾಗಿರುವ ಪತ್ರಿಕೋದ್ಯಮದ ಘನತೆಗೂ ಚ್ಯುತಿ ತರುತ್ತದೆ ಜೊತೆಗೆ ಪತ್ರಿಕಾ ಸ್ವಾತಂತ್ರ್ಯ ಉಳಿಸಿಕೊಳ್ಳುವುದು ಕಷ್ಟಸಾಧ್ಯವಾಗುತ್ತದೆ ಎಂದರು.

ಸುದ್ದಿ ಯಾವಾಗಲೂ ಸುದ್ದಿಯಾಗಿಯೇ ಪ್ರಸಾರವಾಗಬೇಕು. ಅದು ಪತ್ರಕರ್ತನ ವೈಯಕ್ತಿಕ ಅಭಿಪ್ರಾಯ ಪ್ರಕಟಿಸುವ ವೇದಿಕೆಯಾಗಬಾರದು ಎಂದು ಕಿವಿಮಾತು ಹೇಳಿದರು.

ಸುದ್ದಿಯನ್ನು ತಾವೇ ಮೊದಲು ಪ್ರಸಾರ ಮಾಡಿದವರೆಂಬ ಖ್ಯಾತಿ ಪಡೆವ ಧಾವಂತದಲ್ಲಿ ಸುದ್ದಿ ವಸ್ತುನಿಷ್ಠತೆ ಕಳೆದುಕೊಳ್ಳಬಾರದು, ಸುದ್ದಿ ಸದಾ ತನ್ನ ಮೌಲ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಸುದ್ದಿ ಸಂಪಾದಕರಾಗಿ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರಾದ ಎಂ.ವಿ.ನಾಗರಾಜರಾವ್, ವಿ.ಎಚ್. ದೇಸಾಯಿ, ಎಸ್.ಕೆ. ಶೇಷ ಚಂದ್ರಿಕಾ, ಕೆ.ಎಸ್. ಅಚ್ಯುತನ್, ಬಿ.ಎನ್.ಗುರುಮೂರ್ತಿ, ಸುಂದರೇಶ್ವರ್, ವಿ.ಎಸ್. ಸೂರ್ಯನಾರಾಯಣ ಅವರನ್ನು ಸತ್ಕರಿಸಲಾಯಿತು.

ದೂರದರ್ಶನದಲ್ಲಿ ಕನ್ನಡ ಕಾರ್ಯಕ್ರಮಗಳ ಪ್ರಸಾರಕ್ಕೆ ಒತ್ತಾಯಿಸಿ ಹೋರಾಟ ನಡೆಸಿದ ಕನ್ನಡ ಹೋರಾಟಗಾರ ಆರ್.ಎಸ್.ಎನ್. ಗೌಡ ಅವರನ್ನೂ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಸುದ್ದಿ ಸಂಪಾದಕರಾಗಿ ದೂರದರ್ಶನ ಸುದ್ದಿ ವಿಭಾಗಕ್ಕೆ ಹೊಸ ಆಯಾಮ ನೀಡಿ ಅಕಾಲಿಕ ಮರಣಕ್ಕೆ ತುತ್ತಾದ ಪತ್ರಕರ್ತ ಪ್ರಹ್ಲಾದ್ ಅವರ ಪರವಾಗಿ ಅವರ ಪತ್ನಿ ಗೌರಿ ಪ್ರಹ್ಲಾದ್ ಅವರು ಗೌರವ ಸ್ವೀಕರಿಸಿದಾಗ ಸಭಾಂಗಣದಲ್ಲಿ ನೆರೆದಿದ್ದ ಎಲ್ಲ ಪ್ರೇಕ್ಷಕರೂ ಎದ್ದು ನಿಂತು ಗೌರವ ಸೂಚಿಸಿದರು.

ಸಮಾರಂಭದಲ್ಲಿ ಬೆಂಗಳೂರು ದೂರದರ್ಶನ ಸುದ್ದಿ ವಿಭಾಗದ ಮುಖ್ಯಸ್ಥ ಮೈ.ಸಿ. ಪಾಟೀಲ್ ಹಾಗೂ ದೆಹಲಿಯ  ಸುದ್ದಿ ವಿಭಾಗದ ಎ.ಡಿ.ಜಿ. ಅರವಿಂದ ಮಂಜಿತ್ ಸಿಂಗ್ ಮತ್ತಿತರರು ಪಾಲ್ಗೊಂಡಿದ್ದರು. 

ಮುಖಪುಟ /ಸುದ್ದಿ ಸಮಾಚಾರ