ಮುಖಪುಟ /ಸುದ್ದಿ ಸಮಾಚಾರ   


ಸುದ್ದಿ ಸಿದ್ಧಪಡಿಸುವಾಗ ಸಂಪಾದಕರಿಗೆ ಕಲಾತ್ಮಕತೆ ಅಗತ್ಯ - ನಿಸಾರ್

ಬೆಂಗಳೂರು, ನ.19: ಸುದ್ದಿ ಮೊದಲ ಹಂತದಲ್ಲಿ ಕಚ್ಚಾವಸ್ತುವಾಗಿರುತ್ತದೆ, ಅದನ್ನು ಶ್ರೋತೃಗಳ ಅಥವಾ ಪ್ರೇಕ್ಷಕರ ಮನಮುಟ್ಟುವಂತೆ ಪ್ರಸಾರ ಮಾಡುವಲ್ಲಿ ಸುದ್ದಿವಿಭಾಗದ ಸಿಬ್ಬಂದಿಗೆ ಕಲಾತ್ಮಕತೆ ಇರಬೇಕು ಎಂದು ಖ್ಯಾತ ಕವಿ ಪ್ರೊ. ನಿಸಾರ್ ಅಹ್ಮದ್ ಹೇಳಿದರು.

ಬೆಂಗಳೂರು ದೂರದರ್ಶನ ಕೇಂದ್ರ ಸುದ್ದಿ ವಿಭಾಗಕ್ಕೆ 25 ವರ್ಷ ತುಂಬಿದ ಸಂದರ್ಭದಲ್ಲಿ ಕನ್ನಡ ಭವನದ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಜತ ಮಹೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಗೌರವ ಸಿಕ್ಕ ವರ್ಷದಲ್ಲಿ, ಅದೂ ಕನ್ನಡ ರಾಜ್ಯೋತ್ಸವ ತಿಂಗಳಿನಲ್ಲಿ ದೂರದರ್ಶನ ಕೇಂದ್ರ ಆಚರಿಸುತ್ತಿರುವ ಬೆಳ್ಳಿಹಬ್ಬ ಇಮ್ಮಡಿ ಸಂತಸ ನೀಡಿದೆ ಎಂದವರು ಹೇಳಿದರು.

ಕನ್ನಡ ಸಾಹಿತ್ಯ ಭಂಡಾರಕ್ಕೆ ಪತ್ರಕರ್ತರು ನೀಡಿರುವ ಕೊಡುಗೆ ಅನುಪಮ, ತಿ.ತಾ.ಶರ್ಮ ಅವರು ವಿಶ್ವಕರ್ನಾಟಕ ಪತ್ರಿಕೆಯಲ್ಲಿ ಆರ್ಡಿನೆನ್ಸ್ ಗೆ ಸುಗ್ರೀವಾಜ್ಞೆ ಎಂಬ ಪದವನ್ನು ಪ್ರಯೋಗಿಸಿದರು ಇಂದಿಗೂ ಅದು ಅತ್ಯಂತ ಜನಪ್ರಿಯ ಹಾಗೂ ಅರ್ಥಪೂರ್ಣ ಪದವಾಗಿದೆ, ಅಂತೆಯೇ ಬಿ.ಎಂ.ಶ್ರೀ ಅವರು, ಟ್ರಾನ್ಸ್ ಪೋರ್ಟ್ ಎನ್ನುವ ಪದಕ್ಕೆ ಸಾರಿಗೆ ಎನ್ನುವ ಪದ ಜೋಡಿಸಿದರು ಎಂದರು.

ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿರುವ ಪ್ರದೇಶಗಳ ಗ್ರಾಮ್ಯ ಅಥವಾ ಜಾನಪದ ಹೆಸರನ್ನು ಸಂಸ್ಕೃತೀಕರಣ ಮಾಡುವ ಪರಿಯನ್ನು ಅವರು ಖಂಡಿಸಿದರು.

ಅಚ್ಚಕನ್ನಡದ ಸುಸಂಪನ್ನ ಪದಗಳನ್ನು ಇರುವಂತೆಯೇ  ಉಳಿಸಿಕೊಳ್ಳುವುದು ಕನ್ನಡಿಗರೆಲ್ಲರ ಹೊಣೆ ಎಂದು ನಿಸಾರ್ ಅಹ್ಮದ್ ಪ್ರತಿಪಾದಿಸಿದರು.

ಮುಖಪುಟ /ಸುದ್ದಿ ಸಮಾಚಾರ