ಮುಖಪುಟ /ಸುದ್ದಿ ಸಮಾಚಾರ   
 

ಶುದ್ಧ ವಿದ್ಯುತ್ ಉತ್ಪಾದನೆಗೆ ನೀತಿ ಅಗತ್ಯ ಅಡ್ವಾಣಿ

ಬಳ್ಳಾರಿ, ನ.3: ಬಳ್ಳಾರಿ ಜಿಲ್ಲೆಯ ಕುಡಿತಿನಿಯಲ್ಲಿಂದು ರಾಜ್ಯದ ಪ್ರಥಮ 500 ಮೆಗಾ ವ್ಯಾಟ್ ಸಾಮರ್ಥ್ಯದ ಶಾಖೋತ್ಪನ್ನ ಕೇಂದ್ರದ ಮೊದಲ ಘಟಕವನ್ನು ಲೋಕಸಭೆಯ ಪ್ರತಿಪಕ್ಷದ ನಾಯಕ ಹಾಗೂ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರ್ನಾಟಕದ ದೂರದರ್ಶಿತ್ವಕ್ಕೆ ಹೆಸರಾದ ರಾಜ್ಯವಾಗಿದ್ದು 1970ರಲ್ಲೇ ವಿದ್ಯುತ್ ನಿರ್ವಹಣೆಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಿ ಮಾದರಿಯಾಗಿದೆ. ಆದರೆ, ಇಂದಿಗೂ ರಾಜ್ಯ ವಿದ್ಯುತ್ ಕೊರತೆ ಎದುರಿಸುತ್ತಿದ್ದು, ಇದರ ನಿವಾರಣೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ದೇಶದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಶುದ್ಧ ವಿದ್ಯುತ್ ಉತ್ಪಾದನೆಗೆ ಶಾಸನ ರೂಪಿಸುವುದು ಅಗತ್ಯ ಎಂದು ಅವರು ಪ್ರತಿಪಾದಿಸಿದರು.

ಗುಜರಾತ್ ನ ಎಲ್ಲ ಹಳ್ಳಿಗಳಲ್ಲೂ ದಿನದ 24ಗಂಟೆಯೂ ವಿದ್ಯುತ್ ಪೂರೈಕೆ ಆಗುತ್ತಿದ್ದು, ಕರ್ನಾಟಕದಲ್ಲೂ ಇಂಥ ವಾತಾವರಣ ಮೂಡಬೇಕು ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಪ್ರಸಕ್ತ ಪಂಚವಾರ್ಷಿಕ ಯೋಜನೆಯಲ್ಲಿ ಹೆಚ್ಚುವರಿಯಾಗಿ 5 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ. 12ನೇ ಪಂಚವಾರ್ಷಿಕ ಯೋಜನೆಯೊಳಗೆ 10ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಮಹತ್ವಾಕಾಂಕ್ಷೆಯೂ ಇದೆ ಎಂದರು.

ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ಬಿಜಾಪುರದ ಶಾಖೋತ್ಪನ್ನ ವಿದ್ಯುತ್ ಘಟಕಕ್ಕೆ ಕೇಂದ್ರ ಮಂಜೂರಾತಿ ನೀಡಬೇಕು ಎಂದು ಒತ್ತಾಯಿಸಿದರು

ಮುಖಪುಟ /ಸುದ್ದಿ ಸಮಾಚಾರ