ಮುಖಪುಟ /ಸುದ್ದಿ ಸಮಾಚಾರ   
 

ಸರ್ಕಾರದಿಂದಲೇ ಡಿ.4ರಿಂದ ಬೆಂಗಳೂರು ಹಬ್ಬ

ಬೆಂಗಳೂರು, ನ. ೮: ಉದ್ಯಾನ ನಗರಿಯ ಅತಿದೊಡ್ಡ ಸಾಂಸ್ಕೃತಿಕ ಉತ್ಸವ ಬೆಂಗಳೂರು ಹಬ್ಬ ವನ್ನು ಇದೇ ಮೊದಲ ಬಾರಿ ರಾಜ್ಯ ಸರ್ಕಾರವು ಪ್ರಸ್ತುತ ಪಡಿಸುತ್ತಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಈ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದೆ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆರ್ಟಿಸ್ಟ್ಸ್ ಫೌಂಡೇಷನ್ ಫಾರ್ ದ ಆರ್ಟ್ಸ್ (ಆಫಾ) ಕಳೆದ ಕೆಲವು ವರ್ಷಗಳಿಂದ ರೂಪಿಸಿ, ನಡೆಸಿಕೊಂಡು ಬರುತ್ತಿತ್ತು. ಈ ಹಬ್ಬವನ್ನು ಹಿಂದಿನಂತೆಯೇ ಕಾರ್ಪೋರೇಟ್ ಕಂಪನಿಗಳೇ ಪ್ರಾಯೋಜಿಸಲಿವೆ. ಹಬ್ಬಕ್ಕೆ ಸರ್ಕಾರ ವಿವಿಧ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿರುವುದು ಈ ಬಾರಿ ವಿಶೇಷ. ಹಾಗೆಯೇ, ಹಬ್ಬಕ್ಕೆ ನಿರ್ದಿಷ್ಟ ರೂಪ ನೀಡಲು ಅನುವಾಗುವಂತೆ ಪ್ರತಿ ವರ್ಷವೂ ಡಿಸೆಂಬರ್ ೪ ರಂದೇ ಹಬ್ಬಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ.

ಪ್ರಸಕ್ತ ವರ್ಷದ ಡಿಸೆಂಬರ್ ೪ ರಿಂದ ೧೫ರ ವರೆಗೆ ನಡೆಯಲಿರುವ ಈ ಬಾರಿ ಹಬ್ಬಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರವೀಂದ್ರ ಕಲಾಕ್ಷೇತ್ರ ಮತ್ತು ನಯನ ಸಭಾಂಗಣ ಹಾಗೂ ಸಂಸಾ ಬಲಯ ರಂಗ ಮಂದಿರದಲ್ಲಿ ವಿವಿಧ ರೀತಿಯ ಸಾಂಸ್ಕೃತಿ ಕಾರ್ಯಕ್ರಮಗಳನ್ನು ನಡೆಸಿಕೊಡಲು ಅನುವು ಮಾಡಿಕೊಡಲಿದೆ.

ವಾರ್ತಾ ಇಲಾಖೆಯು ನಗರದಲ್ಲಿರುವ ಹೋರ್ಡಿಂಗ್‌ಗಳನ್ನು ಬಳಸಿಕೊಳ್ಳಲು ಅವಕಾಶ ನೀಡುವುದರ ಜೊತೆಗೆ ಹಬ್ಬ ಅಂಗವಾಗಿ ಚಿತ್ರೋತ್ಸವವನ್ನು ಆಯೋಜಿಸಿಕೊಡಲಿದೆ. ಬಿಎಂಟಿಸಿ ತನ್ನ ೨೦೦ ಬಸ್‌ಗಳಲ್ಲಿ ಹಬ್ಬದ ಫಲಕಗಳನ್ನು ಪ್ರದರ್ಶಿಸಲು ನೆರವಾಗಲಿದೆ. ಬಿಬಿಎಂಪಿ ನಾಲ್ಕು ವಿವಿಧ ಮೈದಾನ ಮತ್ತು ೨೦ ಪಾರ್ಕ್‌ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಮತ್ತು ತೋಟಗಾರಿಕೆ ಇಲಾಖೆ ಕಬ್ಬನ್‌ಪಾರ್ಕ್‌ನಲ್ಲಿ ಬೀದಿ ಜಾತ್ರೆ ನಡೆಸಲು ಅನುವು ಮಾಡಿಕೊಡಲಿದೆ. ಕ್ರೀಡೆ ಮತ್ತು ಯುವಜನ ಇಲಾಖೆ ವಿವಿಧ ರೀತಿಯ ಕ್ರೀಡೆಗಳನ್ನು ಬಿಬಿಎಂಪಿ ನೆರವಿನೊಂದಿಗೆ ನಡೆಸಲು ಸಹಕರಿಸಲಿದೆ.

ಸಭೆಯಲ್ಲಿ ಈ ಬಾರಿ ಹಬ್ಬಕ್ಕೆ ಸಲಹೆಗಾರರಾಗಲು ಒಪ್ಪಿಕೊಂಡಿರುವ ಚಿರಂಜೀವಿ ಸಿಂಗ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ನಿರ್ದೇಶಕರು, ವಾರ್ತಾ ಇಲಾಖೆಯ ನಿರ್ದೇಶಕರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು, ಬಿಎಂಟಿಸಿ, ಬಿಬಿಎಂಪಿ ಮತ್ತು ಬಿಡಿಎ ಆಯುಕ್ತರು ಸೇರಿದಂತೆ ಆರ್ಟಿಸ್ಟ್ಸ್ ಫೌಂಡೇಷನ್ ಫಾರ್ ದ ಆರ್ಟ್ಸ್ (ಆಫಾ) ಟ್ರಸ್ಟಿಗಳಾದ ನಂದಿನಿ ಆಳ್ವ ಮತ್ತು ಪದ್ಮಿನಿ ರವಿ ಉಪಸ್ಥಿತರಿದ್ದರು.

ಮುಖಪುಟ /ಸುದ್ದಿ ಸಮಾಚಾರ