ಮುಖಪುಟ /ಸುದ್ದಿ ಸಮಾಚಾರ   
 

ಶೀಘ್ರವೇ ಹೊಸ ಸಾರಿಗೆ ನೀತಿ ಆರ್. ಅಶೋಕ್

ಬೆಂಗಳೂರು: ರಾಜಯ ರಸ್ತೆ ಸಾರಿಗೆ ಇಲಾಖೆಯಲ್ಲಿ ಪ್ರಯಾಣಿಕರಿಗೆ ಅನುಕೂಲ ಹಾಗೂ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಮಗ್ರ ಸಾರಿಗೆ ನೀತಿಯನ್ನು ಜಾರಿಗೆ ತರಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಸಾರಿಗೆ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ವರದಿಗಾರರ ಕೂಟ ಏರ್ಪಡಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಕರಡು ನೀತಿ ಸಿದ್ಧವಾಗಿದ್ದು, ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆ ಹಾಗೂ ಹೆಚ್ಚುತ್ತಿರುವ ಪ್ರಮಾಣಿಕರ ಸಂಖ್ಯೆ ಗಮನಿಸಿ ಅವರಿಗೆ ಉತ್ತಮ ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು.

ಈಗಾಗಲೇ ಸಮೀಕ್ಷೆಯೊಂದನ್ನು ನಡೆಸಿದ್ದು, ಅದರಂತೆ ಪ್ರಯಾಣಿಕರಿಗೆ ಕಲ್ಪಿಸಬೇಕಾಗಿರುವ ಸೌಲಭ್ಯಗಳ ವಿವರಗಳನ್ನು ಸಿದ್ಧಪಡಿಸಲಾಗಿದೆ. ರಾಜ್ಯ ರಸ್ತೆ ಸಾರಿಗೆ ಮಂಡಳಿ ಒಪ್ಪಿಗೆ ಪಡೆದು ಸಂಪುಟದಲ್ಲಿ ಚರ್ಚಿಸಿ ಹೊಸ ನೀತಿಯನ್ನು ಶೀಘ್ರವೇ ಜಾರಿಗೆ ತರಲಾಗುವುದು ಎಂದು ಹೇಳಿದರು.

ದೇಶಕ್ಕೇ ಮಾದರಿ ಆಗುವ ರೀತಿಯಲ್ಲಿ ಸಮಗ್ರ ಸಾರಿಗೆ ನೀತಿಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದ್ದು, ಇನ್ನೊಂದು ವರ್ಷಗಳಲ್ಲಿ ಇದು ಅನುಷ್ಠಾನಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ಮಹಾನಗರ ಸಾರಿಗೆಯಲ್ಲಿ ಹೆಚ್ಚು ಬಸ್ ಸೌಲಭ್ಯ ಕಲ್ಪಿಸುವುದರ ಜೊತೆಗೆ ಉತ್ತಮ ಸೌಲಭ್ಯ ಹಾಗೂ ಪ್ರಯಾಣಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕಾಲ ಕಾಲಕ್ಕೆ ಬಸ್ ಗಳ ಲಭ್ಯತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಸುಮಾರು 2000 ಹೊಸ ಬಸ್ ಗಳನ್ನು ಖರೀದಿಸಲಾಗುವುದು ಎಂದರು.

ಹಿರಿಯ ನಾಗರಿಕರಿಗೆ ಪ್ರಯಾಣದರದಲ್ಲಿ  ಈಗಾಗಲೇ ಶೇ.25ರಷ್ಟು ರಿಯಾಯಿತಿ ನೀಡಲಾಗಿದ್ದು, ನಗರ ಸಾರಿಗೆಯಲ್ಲಿ ಸ್ಥಳದಲ್ಲಿಯೇ ನೀಡುವ ರಿಯಾಯಿತಿಯಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿಯೂ ರಿಯಾಯಿತಿ ವಿಸ್ತರಿಸಿದ್ದು ಈಗಾಗಲೇ ಮೂರೂ ನಿಗಮಗಳಿಗೆ ಈ ಸಂಬಂಧ ಸೂಚನೆ ನೀಡಲಾಗಿದೆ ಎಂದು ಹೇಳಿದರು.

 ಅಂಗವಿಕಲರಿಗೆ ವಿಶೇಷ ಪಾಸ್ ಗಳನ್ನು ನೀಡಲಾಗಿದೆ. ರಾಜ್ಯದ ಯಾವುದೇ ಭಾಗದಲ್ಲಿ ಅವರಿಗೆ ಸರ್ಕಾರಿ ಬಸ್ ಗಳಲ್ಲಿ ಸಂಚರಿಸುವ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಅವರಿಗೆ ಸ್ಮಾರ್ಟ್ ಕಾರ್ಡ್ ಗಳನ್ನು ಸಹ ನೀಡಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಮಂಗಳೂರು ನಗರಕ್ಕೆ ನಗರ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಲು ಯೋಜಿಸಲಾಗಿದ್ದು, ಅದನ್ನು ಜಾರಿ ಮಾಡಿಯೇ ತೀರುತ್ತೇವೆ. ಹಿಂದಡಿ ಇಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಖಾಸಗಿ ಬಸ್ ಮಾಲಿಕರ ಯಾವುದೇ ಒತ್ತಡ ತಂತ್ರಕ್ಕೆ ತಾವು ಮಣಿಯುವುದಿಲ್ಲ ಎಂದೂ ಹೇಳಿದರು.

ದೇಶಾದ್ಯಂತ ಏಕರೂಪದ ಸಾರಿಗೆ ನೀತಿ ಜಾರಿಗೆ ತರುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಈಗಾಗಲೇ ರಾಜ್ಯ ಪ್ರಸ್ತಾವನೆ ಸಲ್ಲಿಸಿದೆ. ಅದು ಜಾರಿಗೆ ಬಂದರೆ ರಾಜ್ಯದ ವಾಣಿಜ್ಯ ಸರಕು ಸಾರಿಗೆ ಲಾರಿ ಮಾಲಿಕರಿಗೂ ಅನ್ವಯಿಸಲಿದೆ ಎಂದು ಹೇಳಿದರು.

ಮುಖಪುಟ /ಸುದ್ದಿ ಸಮಾಚಾರ